ರಾಜ್ಯಸಭೆಯಲ್ಲಿ ಸುಮಾರು 14 ಗಂಟೆಗಳ ಕಾಲ ನಡೆದ ಚರ್ಚೆಯ ನಂತರ ಶುಕ್ರವಾರ (ಏಪ್ರಿಲ್ 4, 2025) ಬೆಳಗಿನ ಜಾವ 2.30ಕ್ಕೆ ಸಂಸತ್ತು ವಕ್ಫ್ (ತಿದ್ದುಪಡಿ) ಮಸೂದೆ 2025 ಅನ್ನು ಅಂಗೀಕರಿಸಿದೆ ಎಂದು ವರದಿಯಾಗಿದೆ. ಮಸೂದೆಯ ಪರವಾಗಿ 128 ಸದಸ್ಯರು ಮತ್ತು ವಿರುದ್ಧವಾಗಿ 95 ಸದಸ್ಯರು ಮತ ಚಲಾಯಿಸಿದರು ಎಂದು ದಿ ಹಿಂದೂ ವರದಿ ಮಾಡಿದೆ. ವಿರೋಧ ಪಕ್ಷವು ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ್ದು, ಇದು ಮುಸ್ಲಿಮರನ್ನು “ಎರಡನೇ ದರ್ಜೆ”ಯ ನಾಗರಿಕರನ್ನಾಗಿ ಮಾಡುವ ಗುರಿಯನ್ನು ಹೊಂದಿದೆ ಎಂದು ಆರೋಪಿಸಿದ್ದು, ಮಸೂದೆಯ “ಉದ್ದೇಶ ಮತ್ತು ವಿಷಯ” ಎರಡನ್ನೂ ಪ್ರಶ್ನಿಸಿದೆ. ವಕ್ಪ್ ತಿದ್ದುಪಡಿ
ಗುರುವಾರ ಲೋಕಸಭೆಯಲ್ಲಿ 56 ಮತಗಳ ಅಂತರದಿಂದ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಇದಕ್ಕೂ ಮೊದಲು, ವಕ್ಫ್ ಮಂಡಳಿ ಮತ್ತು ಕೇಂದ್ರ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರ ಸದಸ್ಯರನ್ನು ಸೇರಿಸುವ ಷರತ್ತಿನ ವಿರುದ್ಧದ ತಿದ್ದುಪಡಿಯನ್ನು ಡಿಎಂಕೆ ಸಂಸದ ತಿರುಚಿ ಶಿವ ಮಂಡಿಸಿದರು. ಆದರೆ ಈ ತಿದ್ದುಪಡಿಗೆ 125 ಮತಗಳು ವಿರುದ್ಧವಾಗಿ ಮತ್ತು 92 ಮತಗಳು ಪರವಾಗಿ ಚಲವಾಣೆಯಾದವು, ಹಾಗಾಗಿ ತಿದ್ದುಪಡಿಯನ್ನು ತಿರಸ್ಕರಿಸಲಾಯಿತು.
ಮಸೂದೆಯನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ಕೆಲವು ವಿರೋಧ ಪಕ್ಷದ ಸಂಸದರು ಕಪ್ಪು ಬಟ್ಟೆ ಧರಿಸಿದ್ದರು. ಅಲ್ಪಸಂಖ್ಯಾತ ವ್ಯವಹಾರಗಳ ಕೇಂದ್ರ ಸಚಿವ ಕಿರಣ್ ರಿಜಿಜು ಮಧ್ಯಾಹ್ನ 12:55 ಕ್ಕೆ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಸರ್ಕಾರವು ಎಲ್ಲಾ ಅಭಿಪ್ರಾಯಗಳನ್ನು ಆಲಿಸಿದೆ ಎಂದು ಅವರು ಪುನರುಚ್ಚರಿಸಿದರು. ವಕ್ಫ್ ಮಂಡಳಿ ಮತ್ತು ಕೇಂದ್ರ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರ ಸದಸ್ಯರನ್ನು ಸೇರಿಸುವುದಕ್ಕೆ ವಿರೋಧ ಪಕ್ಷದ ತೀವ್ರ ಆಕ್ಷೇಪಣೆಯನ್ನು ಅವರು ಆಧಾರರಹಿತ ಎಂದು ಪ್ರತಿಪಾದಿಸಿದ್ದಾರೆ.
ವಕ್ಫ್ ಮಂಡಳಿಯಲ್ಲಿ ಇತರ ಧರ್ಮಗಳ ಸದಸ್ಯರನ್ನು ಸೇರಿಸುವ ನಿಬಂಧನೆಯ ಬಗ್ಗೆ ಇತರ ಧಾರ್ಮಿಕ ದತ್ತಿ ಮಂಡಳಿಗಳೊಂದಿಗೆ ವಿರೋಧ ಪಕ್ಷದ ಹೋಲಿಕೆಯನ್ನು ತಳ್ಳಿಹಾಕಿದ ಅವರು, “ವಕ್ಫ್ ಮಂಡಳಿಗಳು ಶಾಸನಬದ್ಧ ಸಂಸ್ಥೆಗಳಾಗಿದ್ದು, ಹಿಂದೂ ದತ್ತಿ ಮಂಡಳಿಗಳಂತೆ ಧಾರ್ಮಿಕ ಸಂಸ್ಥೆಗಳಲ್ಲ. ಶಾಸನಬದ್ಧ ಸಂಸ್ಥೆಯು ಜಾತ್ಯತೀತವಾಗಿರಬೇಕು” ಎಂದು ಅವರು ಹೇಳಿದ್ದಾರೆ. ಇದರಲ್ಲಿ ಮುಸ್ಲಿಮೇತರ ಸದಸ್ಯರು ನಿರ್ಧಾರವನ್ನು ನಿರ್ದೇಶಿಸಲು ಸಾಧ್ಯವಿಲ್ಲ, “ಅವರು ಕೊಡುಗೆ ನೀಡಲು ಮಾತ್ರ ಸಾಧ್ಯವಿದೆ” ಎಂದು ಅವರು ಮತ್ತೆ ಸ್ಪಷ್ಟಪಡಿಸಿದ್ದಾರೆ.
“22 ಸದಸ್ಯರಿರುವ ಕೇಂದ್ರ ವಕ್ಫ್ ಮಂಡಳಿಯಲ್ಲಿ ಕೇವಲ ನಾಲ್ವರು ಮುಸ್ಲಿಮೇತರ ಸದಸ್ಯರು ಮಾತ್ರ ಇರಲು ಸಾಧ್ಯ ಎಂದು ನಾನು ಪದೇ ಪದೇ ಹೇಳಿದ್ದೇನೆ… ಆದರೂ ವಿರೋಧ ಪಕ್ಷಗಳು ಈ ವಿಷಯವನ್ನು ಪದೇ ಪದೇ ಎತ್ತಿದ್ದವು” ಎಂದು ಅವರು ಹೇಳಿದ್ದಾರೆ. ವಕ್ಪ್ ತಿದ್ದುಪಡಿ
ಗುರುವಾರ ಮಸೂದೆ ಬಗ್ಗೆ ಮಾತನಾಡುತ್ತಾ ಕೇಂದ್ರ ಸರ್ಕಾರದ ವಿರುದ್ಧ ದಾಳಿ ಮಾಡಿದ ಕಾಂಗ್ರೆಸ್ ಸಂಸದ ಸೈಯದ್ ನಸೀರ್ ಹುಸೇನ್, ಇದು “ಮುಸ್ಲಿಂ ಸಮುದಾಯವನ್ನು ಗುರಿ ಮಾಡಿಟ್ಟುಕೊಂಡು ಮಾಡಲಾಗಿರುವ ಕಾನೂನು” ಎಂದು ಬಣ್ಣಿಸಿದ್ದಾರೆ. ಜೊತೆಗೆ ದೇಶದಲ್ಲಿ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ ಅವರು, “ಲೋಕಸಭಾ ಚುನಾವಣೆಯಲ್ಲಿ ಕೇವಲ 240 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾದ ಕಾರಣ ಆಡಳಿತರೂಢ ಪಕ್ಷವು 2024 ರಲ್ಲಿ ತನ್ನ ಮತ ಬ್ಯಾಂಕ್ ಅನ್ನು ಬಲಪಡಿಸುವ ಸಲುವಾಗಿ ಈ ಮಸೂದೆಯನ್ನು ತಂದಿದೆ” ಎಂದು ಅವರು ಆರೋಪಿಸಿದ್ದಾರೆ.
“ಕೋಮು ಧ್ರುವೀಕರಣಕ್ಕಾಗಿ ಮಾತ್ರ ಅವರು ಈ ಕಾಯ್ದೆಯನ್ನು ತರಲಾಗಿದೆ. ಕೋಮು ಧ್ರುವೀಕರಣ ನಡೆದಾಗ ಯಾರಿಗೆ ಲಾಭವಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಯಾವ ರಾಜಕೀಯ ಪಕ್ಷ ಒಂದು ಸಮುದಾಯವನ್ನು ಖಳನಾಯಕನಂತೆ ಬಿಂಬಿಸಲು ಮತ್ತು ಅದರ ವಿರುದ್ಧ ನಿರೂಪಣೆಯನ್ನು ನಿರ್ಮಿಸಲು ಪ್ರಯತ್ನಿಸುತ್ತದೆ” ಎಂದು ಎಲ್ಲರಿಗೂ ತಿಳಿದಿದೆ ಎಂದು ಅವರು ಹೇಳಿದ್ದಾರೆ.
ಪ್ರಸ್ತಾವಿತ ಕಾನೂನಿನ ಪ್ರಕಾರ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರನ್ನು ಸೇರಿಸುವ ಬಗ್ಗೆ ಬೆಟ್ಟು ಮಾಡಿದ ಹುಸೇನ್ ಅವರು, “ನೀವು ನನ್ನನ್ನು ಹಿಂದೂ ದೇವಾಲಯ ಟ್ರಸ್ಟ್‌ನ ಭಾಗವಾಗಲು ಬಿಡುತ್ತೀರಾ?” ಎಂದು ಕೇಳಿದ್ದಾರೆ. ಮಸೂದೆಯಲ್ಲಿ ತೆಗೆದುಹಾಕಲಾದ ವಕ್ಫ್ ಬೈ ಯೂಸರ್ ಷರತ್ತಿನ ಕುರಿತು ಮಾತನಾಡಿದ ಅವರು, ಶತಮಾನಗಳಿಂದ ಇರುವ ದೇವಾಲಯಗಳು, ಚರ್ಚ್‌ಗಳು ಅಥವಾ ಗುರುದ್ವಾರಗಳು ತಮ್ಮ ಆಸ್ತಿಗಳಿಗೆ ಸಾಕ್ಷ್ಯ ತರುವುದು ಹೇಗೆ? ಈಗ ವಕ್ಫ್ ಆಸ್ತಿಗಳಿಗೆ ಆ ಸಾಕ್ಷ್ಯ ಕೇಳಲಾಗುತ್ತಿದೆಯಲ್ಲವೇ? ಎಂದು ಅವರು ಕೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ವಕ್ಫ್ ಮಸೂದೆ ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರಾಗಿಸುವ ಪ್ರಯತ್ನ: ನಾಸಿರ್ ಹುಸೇನ್

