ಉತ್ತರಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ 15 ವರ್ಷದ ದಲಿತ ವಿದ್ಯಾರ್ಥಿಯೊಬ್ಬ ನೀರಿನ ಬಾಟಲಿಯನ್ನು ಮುಟ್ಟಿದ್ದಕ್ಕಾಗಿ ಸವರ್ಣೀಯ ಶಿಕ್ಷಕ ಥಳಿಸಿದ್ದು, ಬಾಲಕನ ಎರಡು ಬೆರಳುಗಳು ಮುರಿತಕ್ಕೊಳಗಾಗಿದ್ದು, ತೊಡೆ, ಭುಜ ಮತ್ತು ದವಡೆಗೆ ಗಾಯಗಳಾಗಿರುವ ಘಟನೆ ವರದಿಯಾಗಿದೆ.
ಹರಿಪುರ ಗ್ರಾಮದ ಖಾಸಗಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. 11ನೇ ತರಗತಿಯ ವಿದ್ಯಾರ್ಥಿ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿ, “ನನಗೆ ಬಾಯಾರಿಕೆಯಾಗಿತ್ತು ಮತ್ತು ನಾನು ಮೇಜಿನ ಮೇಲೆ ನೀರಿನ ಬಾಟಲಿಯನ್ನು ನೋಡಿದಾಗ, ನಾನು ಅದನ್ನು ಎತ್ತಿಕೊಂಡೆ. ನಾನು ಬಾಟಲಿಯನ್ನು ಮುಟ್ಟಿದ ಕ್ಷಣ, ನನ್ನ ಶಿಕ್ಷಕ ಮಂಗಲ್ ಸಿಂಗ್ ಶಕ್ಯಾ ಕೋಪಗೊಂಡು, ‘ಬಾಟಲಿಯನ್ನು ಮುಟ್ಟಲು ನಿನಗೆ ಎಷ್ಟು ಧೈರ್ಯ? ಈಗ ಅದು ಮಲಿನವಾಗಿದೆ. ನಾನು ಹೇಗೆ ನೀರು ಕುಡಿಯಲಿ?’ ಎಂದು ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಬಾಲಕ ಆರೋಪಿಸಿದ್ದಾನೆ.
ಶಾಲಾ ಸಮಯದ ನಂತರ ಶಕ್ಯಾ ತನ್ನನ್ನು ಕೋಣೆಯಲ್ಲಿ ಕೂಡಿಹಾಕಿ, ಹಲ್ಲೆ ನಡೆಸಿದ್ದಾನೆ ಎಂದು ಬಾಲಕ ಹೇಳಿಕೊಂಡಿದ್ದಾನೆ. ಘಟನೆಯನ್ನು ತನ್ನ ಪೋಷಕರಿಗೆ ವರದಿ ಮಾಡುವುದಾಗಿ ಹೇಳಿದಾಗ, ಶಿಕ್ಷಕನು ಅವನನ್ನು ಮತ್ತೆ ಹೊಡೆದಿದ್ದಾರೆ ಎನ್ನಲಾಗಿದೆ.
ಈ ಕುರಿತು ಕಿಶ್ನಿ ಪೊಲೀಸ್ ಠಾಣೆಗೆ ದೂರು ನೀಡಿದ ವಿದ್ಯಾರ್ಥಿಯ ದೂರಿಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದ್ದಾನೆ.
“ಏಪ್ರಿಲ್ 1ರಂದು, ನಾನು ಮೈನ್‌ಪುರಿ ಎಸ್‌ಎಸ್‌ಪಿ ಗಣೇಶ್ ಪ್ರಸಾದ್ ಸಹಾ ಅವರನ್ನು ಭೇಟಿಯಾದೆ, ಅವರು ಈ ವಿಷಯದ ಬಗ್ಗೆ ತನಿಖೆ ನಡೆಸುವುದಾಗಿ ನನಗೆ ಭರವಸೆ ನೀಡಿದರು” ಎಂದು ಅವರು ಹೇಳಿದರು. ಇದರ ನಂತರ, ಬಿಎನ್‌ಎಸ್ ಸೆಕ್ಷನ್ 117(2) (ಸ್ವಯಂಪ್ರೇರಿತವಾಗಿ ತೀವ್ರ ನೋವುಂಟುಮಾಡುವುದು), 127(2) (ಅಕ್ರಮ ಬಂಧನ), 351(2) (ಕ್ರಿಮಿನಲ್ ಬೆದರಿಕೆ), 352 (ಶಾಂತಿ ಭಂಗವನ್ನು ಪ್ರಚೋದಿಸುವ ಅವಮಾನ) ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಡಿಎಸ್‌ಪಿ ಭೋಗಾಂವ್ ಸತ್ಯ ಪ್ರಕಾಶ್ ಶರ್ಮಾ ಪ್ರಕರಣವನ್ನು ನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರ ನಿಷ್ಕ್ರಿಯತೆಯ ಆರೋಪಗಳನ್ನು ಎಸ್‌ಎಸ್‌ಪಿ ಸಹಾ ನಿರಾಕರಿಸಿದ್ದಾರೆ. “ಅವರ ದೂರನ್ನು ಪರಿಗಣಿಸಲಾಗಿಲ್ಲ ಎಂದು ಹೇಳುವುದು ತಪ್ಪು. ಕಿಶ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಎಎಸ್‌ಪಿ (ನಗರ) ಸಂಪೂರ್ಣ ತನಿಖೆಯನ್ನು ನೋಡಿಕೊಳ್ಳುತ್ತಿದ್ದಾರೆ.” ಎಂದು ಅವರು ವಿವರ ನೀಡಿದ್ದಾರೆ.
ಶಾಲಾ ವ್ಯವಸ್ಥಾಪಕ ರಾಕೇಶ್ ಚೌಹಾಣ್ ಆರೋಪಗಳನ್ನು ತಳ್ಳಿಹಾಕುತ್ತಾ, ಹುಡುಗ ಈಗಾಗಲೇ 2023-24 ಶೈಕ್ಷಣಿಕ ವರ್ಷದಲ್ಲಿ ಪಾಸಾಗಿದ್ದಾನೆ ಎಂದು ಹೇಳಿದ್ದಾರೆ. “ನಡತೆ ಪ್ರಮಾಣಪತ್ರಕ್ಕಾಗಿ ಶಾಲೆಗೆ ಭೇಟಿ ನೀಡಿದ್ದರು. ಪ್ರಾಂಶುಪಾಲರು ಮತ್ತು ನಾನು ಹಾಜರಿಲ್ಲದ ಕಾರಣ ಮಂಗಳವಾರ ಹಿಂತಿರುಗಲು ಗುಮಾಸ್ತರು ಅವರಿಗೆ ಹೇಳಿದರು. ನಂತರ ಹುಡುಗ ಗುಮಾಸ್ತರೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದನು ಮತ್ತು ರಿಜಿಸ್ಟರ್ ಅನ್ನು ಹರಿದು ಹಾಕಿದನು. ಗದ್ದಲವನ್ನು ಕೇಳಿದ ಇತರ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮಧ್ಯಪ್ರವೇಶಿಸಿದರು” ಎಂದು ಅವರು ಹೇಳಿದ್ದಾರೆ.
ಶಿಕ್ಷಕರು ಹುಡುಗನನ್ನು ತಡೆಯಲು ಸ್ವಲ್ಪ ಬಲಪ್ರಯೋಗ ಮಾಡಿರಬಹುದು, ಆದರೆ ನೀರಿನ ಬಾಟಲಿಯನ್ನು ಮುಟ್ಟಿದ್ದಕ್ಕಾಗಿ ಅವರನ್ನು ಥಳಿಸಲಾಗಿದೆ ಎಂಬ ಆರೋಪವನ್ನು “ಆಧಾರರಹಿತ” ಎಂದು ಹೇಳಿದ್ದಾರೆ.
ನರೇಗಾದ ವೇತನ, ಕೆಲಸದ ದಿನ ಹೆಚ್ಚಿಸಿ: ಕೇಂದ್ರ ಸರ್ಕಾರಕ್ಕೆ ಸಂಸದೀಯ ಸಮಿತಿ ಒತ್ತಾಯ


