ಕೇಂದ್ರ ಸರ್ಕಾರ ಉಭಯ ಸದನದಲ್ಲಿ ಅಂಗೀಕರಿಸಿದ ವಕ್ಫ್ (ತಿದ್ದುಪಡಿ) ಮಸೂದೆ, 2025 ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಅರ್ಜಿಯಲ್ಲಿ ಅವರು ವಕ್ಫ್ (ತಿದ್ದುಪಡಿ) ಮಸೂದೆಯನ್ನು “ಅಸಂವಿಧಾನಿಕ ಮತ್ತು ಸಂವಿಧಾನದ 14, 15, 21, 25, 26, 29, 30 ಮತ್ತು 300-A ವಿಧಿಗಳ ಉಲ್ಲಂಘನೆಯಾಗಿದೆ” ಎಂದು ಘೋಷಿಸಬೇಕೆಂದು ಕೋರಿದ್ದು, ಜೊತೆಗೆ ಅದನ್ನು ರದ್ದುಗೊಳಿಸಲು ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
“ಮಸೂದೆಯು ಸಂವಿಧಾನದ 14, 15, 21, 25, 26, 29, 30 ಮತ್ತು 300-A ವಿಧಿಗಳ ಅಡಿಯಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಇದು ಮುಸ್ಲಿಮರ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಯನ್ನು ಮೊಟಕುಗೊಳಿಸುತ್ತದೆ. ಅನಿಯಂತ್ರಿತ ಕಾರ್ಯಾಂಗ ಹಸ್ತಕ್ಷೇಪವನ್ನು ಸಕ್ರಿಯಗೊಳಿಸುತ್ತದೆ ಮತ್ತು ಅವರ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳನ್ನು ನಿರ್ವಹಿಸಲು ಅಲ್ಪಸಂಖ್ಯಾತರ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ” ಎಂದು ಅಮಾನತುಲ್ಲಾ ಖಾನ್ ಅವರ ಅರ್ಜಿಯಲ್ಲಿ ತಿಳಿಸಲಾಗಿದೆ.
ಶುಕ್ರವಾರದಂದು ವಕ್ಫ್ (ತಿದ್ದುಪಡಿ) ಮಸೂದೆ, 2025 ರ ಸಿಂಧುತ್ವವನ್ನು ಪ್ರಶ್ನಿಸಿ ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಮತ್ತು AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಮಸೂದೆಯು ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿದ್ದಾರೆ.
ಮಸೂದೆಯು ವಕ್ಫ್ ಆಸ್ತಿಗಳು ಮತ್ತು ಅವುಗಳ ನಿರ್ವಹಣೆಯ ಮೇಲೆ “ಅನಿಯಂತ್ರಿತ ನಿರ್ಬಂಧಗಳನ್ನು” ವಿಧಿಸಿದೆ. ಜೊತೆಗೆ ಇದು ಮುಸ್ಲಿಂ ಸಮುದಾಯದ ಧಾರ್ಮಿಕ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ ಎಂದು ಜಾವೇದ್ ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾರೆ. ವಕೀಲ ಅನಸ್ ತನ್ವೀರ್ ಅವರ ಮೂಲಕ ಸಲ್ಲಿಸಲಾದ ಅವರ ಅರ್ಜಿಯಲ್ಲಿ, ಪ್ರಸ್ತಾವಿತ ಕಾನೂನು “ಇತರ ಧಾರ್ಮಿಕ ದತ್ತಿಗಳ ಆಡಳಿತದಲ್ಲಿ ಇಲ್ಲದ ನಿರ್ಬಂಧಗಳನ್ನು ವಿಧಿಸುವ” ಮೂಲಕ ಮುಸ್ಲಿಂ ಸಮುದಾಯದ ವಿರುದ್ಧ ತಾರತಮ್ಯ ಮಾಡಿದೆ ಎಂದು ಹೇಳಲಾಗಿದೆ.
ಮಸೂದೆಯನ್ನು ರಾಜ್ಯಸಭೆಯಲ್ಲಿ 128 ಸದಸ್ಯರು ಪರವಾಗಿ ಮತ್ತು 95 ಸದಸ್ಯರು ವಿರೋಧಿಸಿ ಮತ ಚಲಾಯಿಸುವ ಮೂಲಕ ಅಂಗೀಕರಿಸಲಾಯಿತು. ಏಪ್ರಿಲ್ 3 ರ ಆರಂಭದಲ್ಲಿ ಲೋಕಸಭೆಯಲ್ಲಿ 288 ಸದಸ್ಯರು ಇದನ್ನು ಬೆಂಬಲಿಸಿದರು ಮತ್ತು 232 ಸದಸ್ಯರು ಅದರ ವಿರುದ್ಧವಾಗಿ ಮತಚಲಾಯಿಸಿದರು.
ಬಿಹಾರದ ಕಿಶನ್‌ಗಂಜ್‌ನ ಲೋಕಸಭಾ ಸಂಸದರಾಗಿರುವ ಜಾವೇದ್ ಅವರು, ಮಸೂದೆಯ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಸದಸ್ಯರಾಗಿದ್ದರು. ಅವರು ತಮ್ಮ ಅರ್ಜಿಯಲ್ಲಿ, ಮಸೂದೆಯು ವ್ಯಕ್ತಿಯೊಬ್ಬರ ಧಾರ್ಮಿಕ ಆಚರಣೆಯ ಅವಧಿಯನ್ನು ಆಧರಿಸಿ ವಕ್ಫ್‌ಗಳ ರಚನೆಯ ಮೇಲೆ ನಿರ್ಬಂಧಗಳನ್ನು ಹೇರುತ್ತದೆ ಎಂದು ಹೇಳಿದ್ದಾರೆ. “ಇಸ್ಲಾಮಿಕ್ ಕಾನೂನು, ಪದ್ಧತಿ ಅಥವಾ ಪೂರ್ವನಿದರ್ಶನದಲ್ಲಿ ಅಂತಹ ಮಿತಿ ಆಧಾರರಹಿತವಾಗಿದೆ ಮತ್ತು ಆರ್ಟಿಕಲ್ 25 ರ ಅಡಿಯಲ್ಲಿ ಧರ್ಮವನ್ನು ಪ್ರತಿಪಾದಿಸುವ ಮತ್ತು ಆಚರಿಸುವ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ” ಎಂದು ಅದು ಹೇಳಿದೆ.
ತಮ್ಮ ಪ್ರತ್ಯೇಕ ಅರ್ಜಿಯಲ್ಲಿ ಓವೈಸಿ ಅವರು, ಮಸೂದೆಯು ವಕ್ಫ್‌ಗಳಿಂದ ವಕ್ಫ್‌ಗಳಿಗೆ ಮತ್ತು ಹಿಂದೂ, ಜೈನ ಮತ್ತು ಸಿಖ್ ಧಾರ್ಮಿಕ ಮತ್ತು ದತ್ತಿ ದತ್ತಿಗಳಿಗೆ ನೀಡಲಾದ ವಿವಿಧ ರಕ್ಷಣೆಗಳನ್ನು ಕಸಿದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ವಕೀಲ ಲಜಫೀರ್ ಅಹ್ಮದ್ ಅವರ ಮೂಲಕ ಅವರು ತಮ್ಮ ಅರ್ಜಿ ಸಲ್ಲಿಸಿದ್ದಾರೆ. “ಇದು ಮುಸ್ಲಿಮರ ವಿರುದ್ಧ ಪ್ರತಿಕೂಲ ತಾರತಮ್ಯವಾಗಿದ್ದು, ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುವ ಸಂವಿಧಾನದ 14 ಮತ್ತು 15 ನೇ ವಿಧಿಗಳ ಉಲ್ಲಂಘನೆಯಾಗಿದೆ” ಎಂದು ಹೇಳಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಸುಪ್ರಿಂಕೋರ್ಟ್ ಮೆಟ್ಟಿಲೇರಿದ ಎಎಪಿ ಸಂಸದ ಅಮಾನತುಲ್ಲಾ ಖಾನ್
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: 13 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್
13 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

