ತಮಿಳುನಾಡಿನ ತೂತುಕುಡಿ ಜಿಲ್ಲೆಯ ತಾಳಮುತ್ತು ನಗರ ಪೊಲೀಸ್ ಠಾಣೆಯಲ್ಲಿ 1999ರಲ್ಲಿ ಸಂಭವಿಸಿದ ಕಸ್ಟಡಿ ಸಾವು ಪ್ರಕರಣದಲ್ಲಿ ಡಿಎಸ್‌ಪಿ ಸೇರಿ 9 ಜನರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಾಸಿಕ್ಯೂಷನ್ ಪ್ರಕಾರ, ತೂತುಕುಡಿ ಜಿಲ್ಲೆಯ ಮೇಳ ಅಲಂಗರತಟ್ಟು ನಿವಾಸಿ, ಉಪ್ಪು ತಯಾರಿಕೆ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಸಿ. ವಿನ್ಸೆಂಟ್ ಅವರನ್ನು ಸೆಪ್ಟೆಂಬರ್ 17, 1999ರಂದು ವಿಚಾರಣೆಗಾಗಿ ತಾಳಮುತ್ತು ನಗರ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಆಗಿನ ಸಬ್-ಇನ್ಸ್‌ಪೆಕ್ಟರ್ ಆಗಿದ್ದ ರಾಮಕೃಷ್ಣನ್ ನೇತೃತ್ವದ ಪೊಲೀಸ್ ತಂಡ ಅವರನ್ನು ಲಾಕಪ್‌ನಲ್ಲಿ ಬಂಧಿಸಿಟ್ಟಿತ್ತು. ಮರುದಿನ ವಿನ್ಸೆಂಟ್ ಅನುಮಾನಾಸ್ಪದ ರೀತಿಯಲ್ಲಿ ಲಾಕಪ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು.
ವಿನ್ಸೆಂಟ್ ಸಾವಿನ ಸಂಬಂಧ ಅವರ ಪತ್ನಿ ಕೃಷ್ಣಮ್ಮಾಳ್ ಅದೇ ಪೊಲೀಸ್ ಠಾಣೆಯಲ್ಲಿ ತನ್ನ ಪತಿಯನ್ನು ಪೊಲೀಸರು ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಸಂಬಂಧ ಸಬ್-ಇನ್ಸ್‌ಪೆಕ್ಟರ್ ರಾಮಕೃಷ್ಣನ್, ಪೊಲೀಸ್ ಸಿಬ್ಬಂದಿ ಸೋಮಸುಂದರಂ, ಜಯಶೇಖರನ್, ಜೋಸೆಫ್ ರಾಜ್, ಪಿಚಯ್ಯ, ಚೆಲ್ಲಾತುರೈ, ವೀರಬಾಹು, ಶಿವಸುಬ್ರಮಣಿಯನ್, ಸುಬ್ಬಯ್ಯ, ರತಿನಸಾಮಿ ಮತ್ತು ಬಾಲಸುಬ್ರಮಣಿಯನ್ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದ ವಿಚಾರಣೆಯನ್ನು ತೂತುಕುಡಿಯ ಮೊದಲ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದೆ. ನ್ಯಾಯಮೂರ್ತಿ ಎಂ. ತಾಂಡವನ್ ಅವರು ಪ್ರಕರಣದ ಅಪರಾಧಿಗಳಾದ ರಾಮಕೃಷ್ಣನ್, ಸೋಮಸುಂದರಂ, ಜಯಶೇಖರನ್, ಜೋಸೆಫ್ ರಾಜ್, ಪಿಚಯ್ಯ, ಚೆಲ್ಲಾತುರೈ, ವೀರಬಾಹು, ಸುಬ್ಬಯ್ಯ ಮತ್ತು ಬಾಲಸುಬ್ರಮಣಿಯನ್ ಅವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 10,000 ರೂಪಾಯಿ ದಂಡ ವಿಧಿಸಿದ್ದಾರೆ.
ಆರೋಪಿಗಳಾದ ರತಿನಸಾಮಿ ಮತ್ತು ಶಿವಸುಬ್ರಮಣಿಯನ್ ಇಬ್ಬರೂ ಈಗ ಸೇವೆಯಿಂದ ನಿವೃತ್ತರಾಗಿದ್ದಾರೆ. ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ. ಸರ್ಕಾರಿ ವಕೀಲ ಎಸ್.ಪಿ ಆನಂದ್ ಗೇಬ್ರಿಯಲ್ ರಾಜ್ ಪ್ರಾಸಿಕ್ಯೂಷನ್ ಪರವಾಗಿ ವಾದ ಮಂಡಿಸಿದ್ದಾರೆ.
ಶಿಕ್ಷೆಗೊಳಗಾದವರಲ್ಲಿ ಸಬ್-ಇನ್ಸ್‌ಪೆಕ್ಟರ್ ರಾಮಕೃಷ್ಣನ್ ಈಗ ಶ್ರೀವೈಕುಂಠಂ ಡಿಎಸ್‌ಪಿ ಆಗಿದ್ದಾರೆ. ಸೋಮಸುಂದರಂ ಪ್ರಸ್ತುತ ಇನ್ಸ್‌ಪೆಕ್ಟರ್ ಆಗಿ ಮತ್ತು ಪಿಚಯ್ಯ ಭೂಕಬಳಿಕೆ ತಡೆ ವಿಭಾಗದಲ್ಲಿ ವಿಶೇಷ ಸಬ್-ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಇತರರು ಸೇವೆಯಿಂದ ನಿವೃತ್ತರಾಗಿದ್ದಾರೆ.
ಮರಣೋತ್ತರ ಪರೀಕ್ಷಾ ವರದಿಯ ಪ್ರಕಾರ ವಿನ್ಸೆಂಟ್ ಸಾವು 1999, ಸೆ.18ರಂದು ಮಧ್ಯಾಹ್ನ 1:30ರಿಂದ ಸಂಜೆ 7:30ರ ನಡುವೆ ಸಂಭವಿಸಿತ್ತು. ವಿನ್ಸೆಂಟ್ ಮುನ್ನಾದಿನ ತೀವ್ರವಾಗಿ ಗಾಯಗೊಂಡಿದ್ದರು ಎಂದು ವೈದ್ಯಕೀಯ ಸಾಕ್ಷ್ಯವು ದೃಢಪಡಿಸಿದೆ. ಹೀಗಾಗಿ, ಇದು ಕಸ್ಟಡಿ ಸಾವು ಅಲ್ಲದೆ ಬೇರೇನೂ ಅಲ್ಲ ಎಂದು ಶನಿವಾರ ವಿಚಾರಣೆ ಸಂದರ್ಭದಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ತಾಂಡವನ್ ಹೇಳಿದ್ದಾರೆ.
ಕಸ್ಟಡಿಯಲ್ಲಿ ಸಾವು ಸಂಭವಿಸಿದಾಗ ಅದು ಕಸ್ಟಡಿ ಸಾವು ಅಲ್ಲ ಎಂದು ಸಾಬೀತಾಗುವವರೆಗೂ ಪೋಲಿಸರ ಮೇಲೆಯೇ ಶಂಕೆಯಿರುತ್ತದೆ. ಇಲ್ಲಿ ಆರೋಪಿ ಪೋಲಿಸರು ಅದು ಕಸ್ಟಡಿ ಸಾವು ಅಲ್ಲ ಎಂದು ಸಾಬೀತುಗೊಳಿಸಿಲ್ಲ. ಹೀಗಾಗಿ, ಇದು ಕಸ್ಟಡಿ ಸಾವು ಎಂದು ಭಾವಿಸಲೇಬೇಕು ಎಂದಿದ್ದಾರೆ.
ಪೋಲಿಸರು ಲಾಠಿಗಳಿಂದ ವಿನ್ಸೆಂಟ್‌ರನ್ನು ಥಳಿಸಿದ್ದರು ಎನ್ನುವುದನ್ನು ಸಾಕ್ಷ್ಯಾಧಾರಗಳು ಸ್ಪಷ್ಟಪಡಿಸಿವೆ. ತಮ್ಮ ಹಲ್ಲೆಯಿಂದ ಆತ ಸಾಯಬಹುದು ಎನ್ನುವುದು ಗೊತ್ತಿದ್ದರೂ ಪೋಲಿಸರು ಅವರ ಮೇಲೆ ದಾಳಿ ನಡೆಸಿದ್ದರು ಎಂದೂ ನ್ಯಾ.ತಾಂಡವನ್ ತೀರ್ಪಿನಲ್ಲಿ ತಿಳಿಸಿದ್ದಾರೆ.
ಟಾರ್ಗೆಟ್ ತಲುಪದ ಉದ್ಯೋಗಿಗೆ ನಾಯಿಯಂತೆ ತೆವಳುವ ಶಿಕ್ಷೆ; ವ್ಯವಸ್ಥಾಪಕನ ಅಮಾನವೀಯ ವರ್ತನೆ


