ಈ ವರ್ಷದ ಹಜ್ ಯಾತ್ರೆಗೆ ಮುಂಚಿತವಾಗಿ ಭಾರತ ಸೇರಿದಂತೆ 14 ದೇಶಗಳ ನಾಗರಿಕರಿಗೆ ವೀಸಾ ನೀಡುವುದನ್ನು ಸೌದಿ ಅರೇಬಿಯಾ (ಕೆಎಸ್ಎ) ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹಜ್ ಅಂತ್ಯದೊಂದಿಗೆ ಹೊಂದಿಕೆಯಾಗುವ 2025ರ ಜೂನ್ ಮಧ್ಯಭಾಗದವರೆಗೆ ಉಮ್ರಾ, ವ್ಯಾಪಾರ ಮತ್ತು ಕುಟುಂಬ ಭೇಟಿ ವೀಸಾಗಳನ್ನು ನೀಡುವುದಕ್ಕೆ ಸರ್ಕಾರ ತಡೆಯೊಡ್ದಿದೆ ಎಂದು ವರದಿಯಾಗಿದೆ.
ಹಜ್ ಯಾತ್ರೆಯ ವೇಳೆ ಜನದಟ್ಟಣೆಯನ್ನು ನಿರ್ವಹಿಸಲು ಮತ್ತು ಸರಿಯಾದ ನೋಂದಣಿ ಇಲ್ಲದೆ ವ್ಯಕ್ತಿಗಳು ಹಜ್ ಮಾಡಲು ಪ್ರಯತ್ನಿಸುವುದನ್ನು ತಡೆಯಲು ಸೌದಿ ಸರ್ಕಾರ ವೀಸಾ ನಿಷೇಧ ಜಾರಿಗೊಳಿಸಿದೆ.
ಕಳೆದ ವರ್ಷದ ಹಜ್ ಸಮಯದಲ್ಲಿ ತೀವ್ರ ಶಾಖ ಮತ್ತು ನೋಂದಾಯಿಸದ ಯಾತ್ರಿಕರ ದಟ್ಟಣೆಯಿಂದ ಕಾಲ್ತುಳಿತ ಸಂಭವಿಸಿತ್ತು. ಅಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ವೀಸಾ ನಿಯಮಗಳನ್ನು ಬಲಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪರಿಷ್ಕೃತ ನಿಯಮಗಳ ಪ್ರಕಾರ, ಏಪ್ರಿಲ್ 13, 2025 ಉಮ್ರಾ ವೀಸಾಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ನಂತರ ಹಜ್ ಮುಗಿಯುವವರೆಗೆ ಯಾವುದೇ ಹೊಸ ಉಮ್ರಾ ವೀಸಾಗಳನ್ನು ನೀಡಲಾಗುವುದಿಲ್ಲ.
ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಇತರ ದೇಶಗಳು ಸೌದಿ ಅರೇಬಿಯಾದ ವೀಸಾ ನಿಷೇಧಕ್ಕೆ ಒಳಗಾಗಲಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇದು ಉಮ್ರಾ ಯಾತ್ರಿಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಸುರಕ್ಷಿತ ಮತ್ತು ಕಾನೂನುಬದ್ಧ ಹಜ್ ಕಾರ್ಯವಿಧಾನಗಳ ಬಗ್ಗೆ ಯಾತ್ರಿಕರಿಗೆ ಮಾಹಿತಿ ನೀಡಲು ಸೌದಿ ಸರ್ಕಾರ 16 ಭಾಷೆಗಳಲ್ಲಿ ಡಿಜಿಟಲ್ ಹಜ್ ಮತ್ತು ಉಮ್ರಾ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದೆ. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ. ಹಜ್ ಸಮಯದಲ್ಲಿ ಯಾರಾದರು ಅಕ್ರಮವಾಗಿ ಉಳಿದುಕೊಂಡರೆ, ಅಂತವರು ಸೌದಿ ಅರೇಬಿಯಾಕ್ಕೆ ಮರು ಪ್ರವೇಶಿಸಲು ಐದು ವರ್ಷಗಳ ನಿಷೇಧ ಮತ್ತು 10,000 ಸೌದಿ ರಿಯಾಲ್‌ಗಳ ದಂಡವನ್ನು ವಿಧಿಸಲಾಗುವುದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಎಲ್ಲಾ ಯಾತ್ರಿಕರು ಹಜ್ ಪರವಾನಗಿಯನ್ನು ಬಳಸಿಕೊಂಡು ಪ್ರವೇಶಿಸಲು ಸಲಹೆ ನೀಡಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ವೀಸಾ ನಿಷೇಧಕ್ಕೊಳಪಟ್ಟ ರಾಷ್ಟ್ರಗಳು
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಈಜಿಪ್ಟ್, ಇಂಡೋನೇಷ್ಯಾ, ಇರಾಕ್, ನೈಜೀರಿಯಾ, ಜೋರ್ಡಾನ್, ಅಲ್ಜೀರಿಯಾ, ಸುಡಾನ್, ಇಥಿಯೋಪಿಯಾ, ಟುನೀಶಿಯಾ, ಯೆಮೆನ್ ಮತ್ತು ಮೊರಾಕೊ.
ಟ್ರಂಪ್ ವಿರುದ್ಧ ಅಮೆರಿಕನ್ನರಿಂದ ‘ಹ್ಯಾಂಡ್ಸ್ ಆಫ್’ ಚಳವಳಿ; ನ್ಯೂಯಾರ್ಕ್‌ನಿಂದ ಅಲಾಸ್ಕಾವರೆಗೆ ಪ್ರತಿಭಟನಾ ರ್‍ಯಾಲಿ


