ಸಂಸತ್ತು ಅಂಗೀಕರಿಸಿದ ವಕ್ಫ್ ತಿದ್ದುಪಡಿ ಮಸೂದೆ -2025ರ ಕುರಿತ ಚರ್ಚೆಗೆ ಜಮ್ಮು ಕಾಶ್ಮೀರ ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ಅವರು ಅವಕಾಶ ನಿರಾಕರಿಸಿದ್ದು, ಈ ವಿಷಯವು ಪ್ರಸ್ತುತ ನ್ಯಾಯಾಲಯದಲ್ಲಿದೆ ಎಂದು ಹೇಳಿದ್ದಾರೆ. ಇದರಿಂದ ವಿಧಾನಸಭೆಯಲ್ಲಿ ಭಾರೀ ಗದ್ದಲ ಉಂಟಾಗಿದೆ.
12 ದಿನಗಳ ವಿರಾಮದ ನಂತರ ಸೋಮವಾರ ವಿಧಾನಸಭೆಯಲ್ಲಿ ಕಲಾಪಗಳು ಪುನರಾರಂಭವಾದಾಗ, ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್, ಎಎಪಿ ಮತ್ತು ಸ್ವತಂತ್ರರು ಸೇರಿದಂತೆ ಎಲ್ಲಾ ಶಾಸಕರು ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಚರ್ಚಿಸಲು 10 ಶಾಸಕರು ಮಂಡಿಸಿರುವ ನಿಲುವಳಿ ಸೂಚನೆಯನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿದರು.
“ಸಂಸತ್ತು ಅಂಗೀಕರಿಸಿದ ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಚರ್ಚೆ ನಡೆಸಲು ನಾವು (ಕನಿಷ್ಠ 10-12 ಸದಸ್ಯರು) ನಿಲುವಳಿ ಸೂಚನೆಯನ್ನು ಮಂಡಿಸಿದ್ದೇವೆ. ನಾವು ಸಂಸತ್ತಿನ ಅಧಿಕಾರವನ್ನು ಪ್ರಶ್ನಿಸುತ್ತಿಲ್ಲ. ಆದರೆ, 56ನೇ ವಿಧಿಯ ಅಡಿಯಲ್ಲಿ, ಸಂಸತ್ತು ಅಂಗೀಕರಿಸಲ್ಪಟ್ಟ ವಿಷಯದ ಬಗ್ಗೆ ಮಾತನಾಡಲು ನಮಗೆ ಹಕ್ಕಿದೆ” ಎಂದು ಎನ್‌ಸಿಯ ಹಿರಿಯ ನಾಯಕ ಮತ್ತು ಶಾಸಕ ತನ್ವೀರ್ ಸಾದಿಕ್ ಹೇಳಿದರು.
ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಸಂಸತ್ತು ಅಂಗೀಕರಿಸಿದ ಕಾನೂನುಗಳ ಬಗ್ಗೆ ವಿಧಾನಸಭೆ ಚರ್ಚಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.
ಬಿಜೆಪಿ ಸದಸ್ಯರ ತೀವ್ರ ವಿರೋಧದ ನಡುವೆಯೂ, ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಬಂಗಾಳದ ವಿಧಾನಸಭೆಗಳು ಜಿಎಸ್‌ಟಿ ಮತ್ತು ಕೃಷಿ ಕಾನೂನುಗಳಂತಹ ಕೇಂದ್ರ ಕಾನೂನುಗಳ ಬಗ್ಗೆ ಈ ಹಿಂದೆ ಚರ್ಚಿಸಿದ್ದವು ಎಂದು ಸಾದಿಕ್ ಹಿಂದಿನ ಉದಾಹರಣೆಗಳನ್ನು ಉಲ್ಲೇಖಿಸಿದರು.
“ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಕೇಂದ್ರದ ಕಾನೂನುಗಳನ್ನು ಈ ಹಿಂದೆ ಚರ್ಚಿಸಲಾಗಿದೆ ಎಂದು ಸಾದಿಕ್ ಒತ್ತಿ ಹೇಳಿದರು. ಜಮ್ಮು ಕಾಶ್ಮೀರ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗಿರುವುದರಿಂದ, ಸಂಸತ್ತು ಅಂಗೀಕರಿಸಿದ ವಕ್ಫ್ ಮಸೂದೆಯ ಚರ್ಚೆ ಇಲ್ಲಿ ಬಹಳ ಮುಖ್ಯ. ಅದು ಜಮ್ಮು ಕಾಶ್ಮೀರದ ಜನರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹಾಗಾಗಿ, ನಾವು ಅದರ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗುವಂತೆ ನಿಲುವಳಿ ಸೂಚನೆ ಅಂಗೀಕರಿಸಬೇಕೆಂದು ನಾನು ವಿನಂತಿಸುತ್ತೇನೆ” ಎಂದು ಸಾದಿಕ್ ಹೇಳಿದರು.
ಈ ನಡುವೆ, ಬಿಜೆಪಿ ಸದಸ್ಯರು ತಮ್ಮ ಆಸನಗಳಿಂದ ಎದ್ದು ನಿಂತು ವಕ್ಫ್ ಮಸೂದೆ ಕುರಿತ ಚರ್ಚೆಗೆ ವಿರೋಧ ವ್ಯಕ್ತಪಡಿಸಿದರು. ಸಂಸತ್ತು ಅಂಗೀಕರಿಸಿದ ಕಾನೂನುಗಳನ್ನು ವಿಧಾನಸಭೆಯಲ್ಲಿ ಚರ್ಚಿಸಲು ಸಾಧ್ಯವಿಲ್ಲ ಎಂದರು. ಆಡಳಿತ ಮೈತ್ರಿಕೂಟ ಮತ್ತು ಬಿಜೆಪಿ ಸದಸ್ಯರು ಇಬ್ಬರೂ ತಮ್ಮ ನಿಲುವುಗಳಿಗೆ ಅಂಟಿಕೊಂಡಿದ್ದರಿಂದ ಸದನದಲ್ಲಿ ಭಾರೀ ಗದ್ದಲ ಉಂಟಾಯಿತು.
ಗದ್ದಲದ ನಡುವೆಯೇ, ರಾಷ್ಟ್ರಪತಿಗಳ ಸಹಿ ಬಿದ್ದು ಕಾನೂನಾಗಿ ಮಾರ್ಪಟ್ಟಿರುವ ಮಸೂದೆಯ ಕುರಿತು ಚರ್ಚೆ ಕೋರಿ ಒಂಬತ್ತು ಶಾಸಕರು ಮಂಡಿಸಿರುವ ನಿಲುವಳಿ ಸೂಚನೆಗಳನ್ನು ತಾನು ಸ್ವೀಕರಿಸಿರುವುದಾಗಿ ಸ್ಪೀಕರ್ ರಾಥರ್ ಸ್ಪಷ್ಟಪಡಿಸಿದರು.
ಆದರೆ, ಚರ್ಚೆಗೆ ಅವಕಾಶ ನೀಡ ಸ್ಪೀಕರ್, “ನಿಯಮ 58 ಉಪ-ನಿಯಮ 7ರ ಪ್ರಕಾರ, ನ್ಯಾಯಾಲಯದಲ್ಲಿರುವ ವಿಷಯದ ಕುರಿತ ಚರ್ಚೆಯನ್ನು ನಿಲುವಳಿ ಸೂಚನೆ ಮೂಲಕ ಕೈಗೆತ್ತಿಕೊಳ್ಳಲಯ ಸಾಧ್ಯವಿಲ್ಲ” ಎಂದರು. ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ರಿಟ್ ಅರ್ಜಿಗಳ ಪ್ರತಿಗಳು ನನ್ನ ಬಳಿ ಇವೆ ಎಂದು ತಿಳಿಸಿದರು.
ಕಾನೂನು ಆಗಿರುವ ವಕ್ಫ್ ತಿದ್ದುಪಡಿ ಮಸೂದೆ ಸಾಂವಿಧಾನಿಕವಾಗಿದೆಯೇ ಎಂಬುದನ್ನು ನಿರ್ಧರಿಸುವುದು ಸುಪ್ರೀಂ ಕೋರ್ಟ್‌ಗೆ ಬಿಟ್ಟದ್ದು ಎಂದು ಅವರು ಒತ್ತಿ ಹೇಳಿದರು.
ವಕ್ಫ್ ಕಾಯ್ದೆ ಪ್ರಶ್ನಿಸಿದ ಅರ್ಜಿ: ತುರ್ತು ವಿಚಾರಣೆ ಇಲ್ಲ ಎಂದ ಸುಪ್ರೀಂ ಕೋರ್ಟ್


