ವಕ್ಫ್ (ತಿದ್ದುಪಡಿ) ಕಾಯ್ದೆ,2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಏಪ್ರಿಲ್ 15 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರ ಮಂಗಳವಾರ (ಏ.8) ಕೇವಿಯಟ್ ಸಲ್ಲಿಸಿದ್ದು, ವಕ್ಫ್ ಅರ್ಜಿಗಳ ಸಂಬಂಧ ಯಾವುದೇ ಆದೇಶ ಹೊರಡಿಸುವ ಮುನ್ನ ತನ್ನ ವಾದವನ್ನು ಆಲಿಸುವಂತೆ ಕೋರಿದೆ.
ತಮ್ಮ ವಾದವನ್ನು ಆಲಿಸದೆ ಆದೇಶ ನೀಡದಂತೆ ಕೋರಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ಪಕ್ಷಕಾರರು ಸಲ್ಲಿಸುವ ಅರ್ಜಿಯನ್ನು ಕೇವಿಯೆಟ್ ಎನ್ನಲಾಗುತ್ತದೆ.
ಈ ಮಧ್ಯೆ, ಕಳೆದ ವಾರ ಸಂಸತ್ತು ಅಂಗೀಕರಿಸಿದ ವಕ್ಫ್ (ತಿದ್ದುಪಡಿ) ಕಾಯ್ದೆ, 2025 ಮಂಗಳವಾರದಿಂದ ಜಾರಿಗೆ ಬರಲಿದೆ ಎಂದು ಸರ್ಕಾರಿ ಅಧಿಸೂಚನೆ ತಿಳಿಸಿದೆ.
ವಕ್ಫ್ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಜಮಿಯತ್ ಉಲಮಾ-ಇ-ಹಿಂದ್, ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ), ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ, ಸಂಸದರಾದ ಅಸಾದುದ್ದೀನ್ ಓವೈಸಿ, ಮೊಹಮ್ಮದ್ ಜಾವೆದ್, ಅಮಾನುಲ್ಲಾ ಖಾನ್ ಸೇರಿದಂತೆ 10ಕ್ಕೂ ಹೆಚ್ಚು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿವೆ.
ಈ ಅರ್ಜಿಗಳಿಗೆ ಸಂಬಂಧಿತ ಬೆಳವಣಿಗೆಗಳ ಬಗ್ಗೆ ಮಾಹಿತಿಯಿರುವ ವಕೀಲರು, ಏಪ್ರಿಲ್ 15ರಂದು ಅರ್ಜಿಗಳು ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಅರ್ಜಿಗಳ ವಿಚಾರಣೆ ದಿನಾಂಕ ಇನ್ನೂ ಪ್ರಕಟಗೊಂಡಿಲ್ಲ.
ವಕ್ಫ್ ಕಾಯ್ದೆ ಸಂಬಂಧಿತ ಅರ್ಜಿಗಳನ್ನು ತುರ್ತು ವಿಚಾರಣೆ ನಡೆಸುವಂತೆ ಜಮಿಯತ್ ಉಲಮಾ-ಇ-ಹಿಂದ್ ಪರ ವಕೀಲ ಕಪಿಲ್ ಸಿಬಲ್ ಮನವಿ ಮಾಡಿದ್ದರು. ಆದರೆ, ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸರಿಯಾದ ಸಮಯಕ್ಕೆ ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಏಪ್ರಿಲ್ 7ರಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ಭರವಸೆ ನೀಡಿದೆ.
ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರ ಪಡೆದ ವಕ್ಫ್ (ತಿದ್ದುಪಡಿ) ಮಸೂದೆಗೆ ಏಪ್ರಿಲ್ 5ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹಿ ಹಾಕಿದ್ದಾರೆ. ಹಾಗಾಗಿ, ಮಸೂದೆ ಈಗ ಕಾಯ್ದೆ ಆಗಿ ಮಾರ್ಪಟ್ಟಿದೆ.
ಅತ್ಯಾಚಾರ, ಕೊಲೆ ಪ್ರಕರಣ | ಮರಣದಂಡನೆಗೆ ಗುರಿಯಾಗಿದ್ದ ವ್ಯಕ್ತಿಯನ್ನು ಖುಲಾಸೆಗೊಳಿಸಿದ ಸುಪ್ರೀಂ ಕೋರ್ಟ್


