ಉತ್ತರ ಪ್ರದೇಶದ ವಾರಣಾಸಿಯಲ್ಲಿ 19 ವರ್ಷದ ಯುವತಿ ಮೇಲೆ 23 ಪುರುಷರು ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣ ಸಂಬಂಧ ಇದುವರೆಗೆ 9 ಜನರನ್ನು ಬಂಧಿಸಲಾಗಿದೆ ಎಂದು ವರದಿಗಳು ಬುಧವಾರ (ಏ.9) ಹೇಳಿದೆ.
ಮಾರ್ಚ್ 29ರಂದು ಸಂತ್ರಸ್ತ ಯುವತಿ ಸ್ನೇಹಿತರೊಂದಿಗೆ ಹೊರಗಡೆ ಹೋಗಿದ್ದರು. ಆಕೆ ವಾಪಸ್ ಬಂದಿಲ್ಲ ಎಂದು ಕುಟುಂಬಸ್ಥರು ಏಪ್ರಿಲ್ 4ರಂದು ದೂರು ದಾಖಲಿಸಿದ್ದರು. ಪೊಲೀಸರು ಹುಡುಕಾಟ ನಡೆಸಿ ಯುವತಿಯನ್ನು ಪತ್ತೆ ಹಚ್ಚಿದ್ದರು. ಈ ವೇಳೆ ಆಕೆ ತನ್ನ ಮೇಲೆ ದೌರ್ಜನ್ಯ ನಡೆದಿರುವ ಬಗ್ಗೆ ಹೇಳಿಕೊಂಡಿರಲಿಲ್ಲ. ಆದರೆ, ಏಪ್ರಿಲ್ 6ರಂದು ಕುಟುಂಬಸ್ಥರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ದೂರು ದಾಖಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಆರೋಪಿಗಳು ಯುವತಿಯನ್ನು ಅಪಹರಿಸಿ, ಆಕೆಗೆ ಡ್ರಗ್ ಕೊಟ್ಟು ವಿವಿಧ ಹೋಟೆಲ್, ಹುಕ್ಕಾ ಬಾರ್‌ಗಳು ಮತ್ತು ಇತರ ಸ್ಥಳಗಳಲ್ಲಿ 6 ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು 11 ಅನಾಮಧೇಯ ವ್ಯಕ್ತಿಗಳು ಸೇರಿದಂತೆ 23 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪ್ರಕರಣದ ಒಂಬತ್ತು ಆರೋಪಿಗಳನ್ನು ಇದುವರೆಗೆ ಬಂಧಿಸಲಾಗಿದೆ ಎಂದು ವಾರಣಾಸಿ ಕಂಟೋನ್ಮೆಂಟ್‌ನ ಹೆಚ್ಚುವರಿ ಪೊಲೀಸ್ ಆಯುಕ್ತ ವಿದುಷ್ ಸಕ್ಸೇನಾ ಹೇಳಿದ್ದಾರೆ. ಇತರ ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳು ಶೋಧ ನಡೆಸುತ್ತಿವೆ. ಶೀಘ್ರದಲ್ಲೇ ಅವರನ್ನೂ ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ ವಿಶ್ವಕರ್ಮ, ಸಮೀರ್, ಆಯುಷ್, ಸೊಹೈಲ್, ದಾನಿಶ್, ಅನ್ಮೋಲ್, ಸಾಜಿದ್, ಜಹೀರ್, ಇಮ್ರಾನ್, ಜೈಬ್, ಅಮನ್ ಮತ್ತು ರಾಜ್ ಖಾನ್ ಪ್ರಸ್ತುತ ಗುರುತಿಸಿರುವ ಆರೋಪಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅತ್ಯಾಚಾರ ಸಂತ್ರಸ್ತೆ ಪ್ರಸ್ತುತ ಆರೋಗ್ಯವಾಗಿದ್ದಾರೆ ಮತ್ತು ಪೊಲೀಸರು ಆಕೆಯ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸಕ್ಸೇನಾ ತಿಳಿಸಿದ್ದಾರೆ.
ಸಂತ್ರಸ್ತೆಯ ಕುಟುಂಬಸ್ಥರು ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ. “ನಿಮಗೆ ಬೇಕಾದ ಮಾಹಿತಿ ಪೊಲೀಸರೊಂದಿಗೆ ಕೇಳಿ ಪಡೆದುಕೊಳ್ಳಿ” ಎಂದು ಆಕೆಯ ತಾಯಿ ಹೇಳಿದ್ದಾರೆ.
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ; ಮದರಸಾ ಶಿಕ್ಷಕನಿಗೆ 187 ವರ್ಷಗಳ ಜೈಲು ಶಿಕ್ಷೆ


