ಋತುಮತಿಯಾದ ಪರಿಶಿಷ್ಟ ಜಾತಿಯ (ಅರುಂಥತಿಯಾರ್) 8ನೇ ತರಗತಿ ವಿದ್ಯಾರ್ಥಿನಿಯನ್ನು ಶಿಕ್ಷಕರು ತರಗತಿ ಕೊಠಡಿಯ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಅಮಾನವೀಯ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕಿನಾತುಕಡವು ತಾಲೂಕಿನ ಸೆಂಗುಟ್ಟೈಪಾಳ್ಯಂ ಗ್ರಾಮದ ಖಾಸಗಿ ಶಾಲೆಯಲ್ಲಿ ನಡೆದಿದೆ.
ಶಾಲೆಗೆ ಭೇಟಿ ನೀಡಿದ ವೇಳೆ ಮಗಳು ತರಗತಿಯ ಹೊರಗಡೆ ಕುಳಿತು ಪರೀಕ್ಷೆ ಬರೆಯುತ್ತಿರುವುದನ್ನು ವಿಡಿಯೋ ಮಾಡಿಕೊಂಡಿದ್ದ ವಿದ್ಯಾರ್ಥಿನಿಯ ತಾಯಿ, ಇತರರಿಗೆ ವಿಷಯ ತಿಳಿಸಿದ್ದರು. ಬಳಿಕ ಆ ವಿಡಿಯೋ ವೈರಲ್ ಆಗಿದೆ.
ಸೆಂಗುಟ್ಟೈಪಾಳ್ಯಂ ಗ್ರಾಮದಲ್ಲಿರುವ ಸ್ವಾಮಿ ಚಿದ್ಭವಾನಂದ ಮೆಟ್ರಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಘಟನೆ ನಡೆದಿದೆ. ಏಪ್ರಿಲ್ 5ರಂದು ವಿದ್ಯಾರ್ಥಿನಿಗೆ ಮುಟ್ಟಾಗಿತ್ತು. ಏಪ್ರಿಲ್ 7ರಂದು ಸಮಾಜ ವಿಜ್ಞಾನ ಪರೀಕ್ಷೆ ಬರೆಯಲು ಆಕೆ ಶಾಲೆಗೆ ತೆರಳಿದಾಗ ಶಿಕ್ಷಕರು ಹೊರಗಡೆ ಕೂರಿಸಿ ಪರೀಕ್ಷೆ ಬರೆಸಿದ್ದಾರೆ. ಏಪ್ರಿಲ್ 9ರಂದು ವಿಜ್ಞಾನ ಪರೀಕ್ಷೆ ವೇಳೆಯೂ ಇದೇ ರೀತಿ ನಡೆದಿದೆ ಎಂದು ವರದಿಗಳು ಹೇಳಿವೆ.
ಘಟನೆಯ ಬಗ್ಗೆ ಕೊಯಮತ್ತೂರು ಗ್ರಾಮೀಣ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಕೊಯಮತ್ತೂರು ಜಿಲ್ಲಾಧಿಕಾರಿ ಪವನಕುಮಾರ್ ಜಿ ಗಿರಿಯಪ್ಪನವರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಕುರಿತು ಜಿಲ್ಲಾಡಳಿತಕ್ಕೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಮೆಟ್ರಿಕ್ಯುಲೇಷನ್ ಶಾಲೆಯ ಇನ್ಸ್‌ಪೆಕ್ಟರ್‌ಗೆ ನಿರ್ದೇಶಿಸಲಾಗಿದೆ. ಶಾಲಾ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಕೊಯಮತ್ತೂರು ಮುಖ್ಯ ಶಿಕ್ಷಣಾಧಿಕಾರಿ (ಸಿಇಒ) ಆರ್ ಬಾಲಮುರಳಿ ಮತ್ತು ಖಾಸಗಿ ಶಾಲೆಗಳ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಪುನಿತಾ ಅಂತೋನಿಮಾಳ್ ಗುರುವಾರ ಶಾಲೆಗೆ ಭೇಟಿ ನೀಡಿ ಶಾಲಾ ಆಡಳಿತ ಮಂಡಳಿಯವರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
“ನನ್ನ ಮಗಳಿಗೆ ಮುಟ್ಟಾಗಿತ್ತು. ಹಾಗಾಗಿ, ಆಕೆ ಆರಾಮಾಗಿ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ನಾವು ಶಿಕ್ಷಕರಲ್ಲಿ ಕೋರಿದ್ದೆವು. ಶಿಕ್ಷಕರು ಪ್ರತ್ಯೇಕ ವ್ಯವಸ್ಥೆ ಮಾಡುವ ಬದಲು ಆಕೆಯನ್ನು ಬಲವಂತವಾಗಿ ತರಗತಿ ಕೊಠಡಿಯಿಂದ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ್ದಾರೆ. ಏಪ್ರಿಲ್ 7ರಂದು ಸುಮಾರು ಎರಡೂವರೆಗೆ ತಾಸು ತರಗತಿಯ ಹೊರಗೆ ಮೆಟ್ಟಿಲ ಮೇಲೆ ಕುಳಿತು ಪರೀಕ್ಷೆ ಬರೆದು ಆಕೆಗೆ ಕಾಲು ನೋವು ಬಂದಿತ್ತು” ಎಂದು ವಿದ್ಯಾರ್ಥಿನಿಯ ತಂದೆ ಹೇಳಿದ್ದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಮಗಳು ಶಾಲೆಯಲ್ಲಿ ನಡೆದ ವಿಷಯ ನಮಗೆ ತಿಳಿಸಿದ್ದಳು. ನಾವು ಏಪ್ರಿಲ್ 9ರಂದು ಖುದ್ದಾಗಿ ಶಾಲೆಗೆ ತೆರಳಿದಾಗ ಮಗಳು ಮೆಟ್ಟಿಲ ಮೇಲೆ ಕುಳಿತು ಪರೀಕ್ಷೆ ಬರೆಯುವುದು ಕಂಡಿತು. ಈ ಬಗ್ಗೆ ಶಿಕ್ಷಕರನ್ನು ವಿಚಾರಿಸಿದಾಗ, “ಅದೊಂದು ದೊಡ್ಡ ಸಮಸ್ಯೆನಾ?” ಎಂದು ಪ್ರಶ್ನಿಸಿದರು. ಮಗಳು ತರಗತಿಯ ಹೊರಗೆ ಕುಳಿತು ಪರೀಕ್ಷೆ ಬರೆಯುತ್ತಿರುವುದನ್ನು ನಾವು ವಿಡಿಯೋ ಮಾಡಿಕೊಂಡು ಬಂದಿದ್ದೆವು. ಅದನ್ನು ಸಂಬಂಧಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ” ಎಂದು ವಿದ್ಯಾರ್ಥಿನಿಯ ತಂದೆ ವಿವರಿಸಿದ್ದಾಗಿ ವರದಿ ತಿಳಿಸಿದೆ.
ಮಹಾರಾಷ್ಟ್ರ | ‘ಎಕ್ಸ್‌ಕ್ಯೂಸ್‌ಮಿ’ ಎಂದ ಮಹಿಳೆಯರಿಗೆ ಮರಾಠಿ ಮಾತನಾಡಿ ಎಂದು ಹಲ್ಲೆ ನಡೆಸಿದ ದುಷ್ಕರ್ಮಿಗಳು


