ಐತಿಹಾಸಿಕ ಶಾಹಿ ಜಾಮಾ ಮಸೀದಿಯ ಆವರಣದಲ್ಲಿ ಕತ್ತರಿಸಿದ ಪ್ರಾಣಿಗಳ ತಲೆಯನ್ನು ಎಸೆದ ಆರೋಪದ ಮೇಲೆ ಆಗ್ರಾ ಪೊಲೀಸರು ನಜ಼ರುದ್ದೀನ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಪ್ರಕರಣವು ಕೋಮು ಉದ್ವಿಗ್ನತೆಯನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ತಂಡವು ನಡೆಸಿದ ವ್ಯಾಪಕ ಕಾರ್ಯಾಚರಣೆ ಮೂಲಕ 42 ವರ್ಷದ ಆರೋಪಿಯನ್ನು ಗುರುತಿಸಲಾಗಿದೆ. ನಜ಼ರುದ್ದೀನ್ ಮುಖ ಮುಚ್ಚಿಕೊಂಡು ಮಸೀದಿ ಪ್ರದೇಶಕ್ಕೆ ಪ್ರವೇಶಿಸುವುದು ಮತ್ತು ನಿರ್ಗಮಿಸುವುದನ್ನು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.
“ನಾವು ನಜ಼ರುದ್ದೀನ್ ಅವರನ್ನು ಬಂಧಿಸಿದ್ದೇವೆ, ಘಟನೆಯ ಕುರಿತು ಹೆಚ್ಚಿನ ಒಳನೋಟಗಳಿಗಾಗಿ ಪ್ರಸ್ತುತ ಅವರನ್ನು ವಿಚಾರಣೆ ನಡೆಸುತ್ತಿದ್ದೇವೆ” ಎಂದು ಜಿಲ್ಲಾ ಪೊಲೀಸ್ ಆಯುಕ್ತ (ಡಿಸಿಪಿ) ನಗರ ಸನಮ್ ಕುಮಾರ್ ಹೇಳಿದರು.
ನಜ಼ರುದ್ದೀನ್ ಅವರ ಮೊಬೈಲ್ ಫೋನ್ ಡೇಟಾವನ್ನು ಪರಿಶೀಲಿಸುವುದು, ಹತ್ತಿರದ ರಸ್ತೆಗಳು ಮತ್ತು ಕಟ್ಟಡಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದು ಸೇರಿದಂತೆ ಪೊಲೀಸರು ಈ ವಿಷಯವನ್ನು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ ಎಂದರು.
ಪೊಲೀಸ್ ತನಿಖೆಗಳ ಪ್ರಕಾರ, ನಜ಼ರುದ್ದೀನ್ ಸ್ಥಳೀಯ ಅಂಗಡಿಯಿಂದ ಕತ್ತರಿಸಿದ ಪ್ರಾಣಿಗಳ ತಲೆಯನ್ನು 250 ರೂ.ಗೆ ಖರೀದಿಸಿದ್ದ. ಈ ತನಿಖೆಗಳಿಂದ ಬಂದ ಎಲ್ಲ ಸಂಶೋಧನೆಗಳು ಬೆಳಕಿಗೆ ಬಂದ ತಕ್ಷಣ ಅವುಗಳನ್ನು ಬಹಿರಂಗಪಡಿಸಲಾಗುವುದು ಎಂದು ಡಿಸಿಪಿ ಸನಮ್ ಕುಮಾರ್ ಭರವಸೆ ನೀಡಿದರು.
ನಜ಼ರುದ್ದೀನ್‌ನ ಉದ್ದೇಶ, ಕೃತ್ಯದ ಹಿಂದಿನ ಯೋಜನೆಯ ಅವಧಿ ಮತ್ತು ಇತರರು ಈ ಘಟನೆಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಈಗ ಪ್ರಯತ್ನಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಅನೈತಿಕ ಪೊಲೀಸ್‌ಗಿರಿ; ಸ್ಕೂಟರ್ ಮೇಲೆ ಕುಳಿತಿದ್ದ ಜೋಡಿಗೆ ಹಲ್ಲೆ


