ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ನಡೆದ ಭೂಕಬಳಿಕೆ ಪ್ರಕರಣದಲ್ಲಿ ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ವಿರುದ್ಧದ ವಿಚಾರಣೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಶುಕ್ರವಾರ ವರದಿ ಮಾಡಿದೆ. ಆರು ಎಕರೆ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿದ್ದಾರೆ ಎಂಬ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿದ್ದು, ಮಾರ್ಚ್ 18 ರಂದು ರಾಮನಗರ ತಹಶೀಲ್ದಾರ್ ಈ ಬಗ್ಗೆ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಕೇತಗಾನಹಳ್ಳಿ ಭೂಕಬಳಿಕೆ ಪ್ರಕರಣ
ಆದಾಗ್ಯೂ, ಈ ಆರೋಪವನ್ನು ಕುಮಾರಸ್ವಾಮಿ ನಿರಾಕರಿಸಿದ್ದು, 1985 ಮತ್ತು 1987 ರ ನಡುವೆ ನೋಂದಾಯಿತ ಮಾರಾಟ ಪತ್ರಗಳ ಮೂಲಕ ಗ್ರಾಮದಲ್ಲಿ ಕಾನೂನುಬದ್ಧವಾಗಿ ವಿವಿಧ ನಿವೇಶನಗಳನ್ನು ಖರೀದಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ತಾನು ಸುಮಾರು 40 ವರ್ಷಗಳಿಂದ ಭೂಮಿಯನ್ನು ಕಾನೂನುಬದ್ಧವಾಗಿ ಹೊಂದಿರುವುದಾಗಿ ಅವರು ಹೇಳಿದ್ದಾರೆ.
ನೋಟಿಸ್‌ನ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಕುಮಾರಸ್ವಾಮಿ ಅವರು ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯಲ್ಲಿ, ತಾನು ಮತ್ತು ಮಾರಾಟಗಾರರು ಇಬ್ಬರೂ ಮಾನ್ಯ ಮಾಲೀಕತ್ವದ ಹಕ್ಕುಗಳನ್ನು ಹೊಂದಿದ್ದೇವೆ ಎಂದು ಎಲ್ಲಾ ದಾಖಲೆಗಳು ದೃಢಪಡಿಸಿವೆ ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಸಹಾಯಕ ಆಯುಕ್ತರಿಗೆ ಮಾತ್ರ ಅಂತಹ ಅಧಿಕಾರವಿರುವುದರಿಂದ ತಹಸೀಲ್ದಾರ್‌ಗೆ ನೋಟಿಸ್ ನೀಡುವ ಅಧಿಕಾರವಿಲ್ಲ ಎಂದು ಅವರು ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಮಂಗಳವಾರ, ನ್ಯಾಯಮೂರ್ತಿ ಎನ್.ಎಸ್. ಸಂಜಯ್ ಗೌಡ ಅವರ ಏಕ ಪೀಠವು ತಹಸೀಲ್ದಾರ್ ಅವರ ನೋಟಿಸ್ ಶೋಕಾಸ್ ನೋಟಿಸ್ ಆಗಿರುವುದರಿಂದ, ಮೊದಲು ಪ್ರತಿಕ್ರಿಯೆಯನ್ನು ಸಲ್ಲಿಸಬೇಕು ಎಂದು ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. “ನೋಟಿಸ್‌ಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯವನ್ನು ನೀಡಲಾಗಿದೆ” ಎಂದು ನ್ಯಾಯಾಲಯವು ಹೇಳಿದ್ದು, ಏಪ್ರಿಲ್ 22 ರಂದು ಪ್ರಕರಣವನ್ನು ಮುಂದಿನ ವಿಚಾರಣೆಗೆ ನಿಗದಿಪಡಿಸಿದೆ.
ಪ್ರತ್ಯೇಕ ಪ್ರಕರಣದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯ ಭ್ರಷ್ಟಾಚಾರ ಪ್ರಕರಣದಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಈ ಪ್ರಕರಣದ ವಿಚಾರಣೆಗೆ ತಡೆ ನೀಡಲು ಸುಪ್ರೀಂಕೋರ್ಟ್ ಫೆಬ್ರವರಿಯಲ್ಲಿ ನಿರಾಕರಿಸಿತು. ಬನಶಂಕರಿ ಪ್ರದೇಶದ ಹಲಗಿ ವಡೇರಹಳ್ಳಿ ಗ್ರಾಮದಲ್ಲಿ 1997 ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸ್ವಾಧೀನಪಡಿಸಿಕೊಂಡ ಎರಡು ಎಕರೆ 24 ಗುಂಟೆ ಭೂಮಿಯನ್ನು ಡಿ-ನೋಟಿಫೈ ಮಾಡಿದ ಪ್ರಕರಣ ಇದಾಗಿದೆ.
2007 ರಲ್ಲಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಕ್ಷೇಪಣೆಗಳ ಹೊರತಾಗಿಯೂ ಭೂಮಿಯನ್ನು ಡಿ-ನೋಟಿಫೈ ಮಾಡಲು ಆದೇಶಿಸಿದ್ದರು. ನಂತರ 2010 ರಲ್ಲಿ ಈ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ 4.14 ಕೋಟಿ ರೂ.ಗೆ ಮಾರಾಟ ಮಾಡಲಾಯಿತು ಎಂದು ವರದಿಯಾಗಿದೆ. ಕೇತಗಾನಹಳ್ಳಿ ಭೂಕಬಳಿಕೆ ಪ್ರಕರಣ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ಪ್ರತಿ ಊರಿನಲ್ಲಿ 8-10 ಜನ ಸಾಯಲಿ..’; ವಕ್ಫ್ ಕಾಯ್ದೆ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಕಾಂಗ್ರೆಸ್ ಮುಖಂಡ
‘ಪ್ರತಿ ಊರಿನಲ್ಲಿ 8-10 ಜನ ಸಾಯಲಿ..’; ವಕ್ಫ್ ಕಾಯ್ದೆ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಕಾಂಗ್ರೆಸ್ ಮುಖಂಡ

