ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಎಸಗಿ ಕೊಂದ ಆರೋಪದ ಮೇಲೆ 21 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬಾಲಕಿ ಶುಕ್ರವಾರ ಥಾನ್ಲೋನ್ ಉಪವಿಭಾಗದ ಕಾಡುಗಳಲ್ಲಿ ಕಟ್ಟಿಗೆ ಸಂಗ್ರಹಿಸಲು ಹೋಗಿದ್ದಳು. ತುಂಬಾ ಹೊತ್ತಿನವರೆಗೂ ಆಕೆ ಮನೆಗೆ ಹಿಂತಿರುಗದೇ ಇದ್ದಾಗ, ಆಕೆಯ ತಂದೆ ಬಾಲಕಿಯನ್ನು ಹುಡುಕಲು ಹೋದಾಗ ಹರಿದ ಬಟ್ಟೆಗಳು ಮತ್ತು ಗಾಯದ ಗುರುತುಗಳೊಂದಿಗೆ ಆಕೆಯ ದೇಹ ಸಿಕ್ಕಿದೆ.
ತನಿಖೆಯ ನಂತರ, ಆರೋಪಿಯನ್ನು ಜಿಲ್ಲೆಯ ಖೋಕೆನ್ ಗ್ರಾಮದಿಂದ ಬಂಧಿಸಲಾಯಿತು, ಆತ ಫೆರ್ಜಾಲ್ ಜಿಲ್ಲೆಯ ಮೂಲದವರು ಎಂದು ಗುರುತಿಸಲಾಗಿದೆ.
ಈ ಘಟನೆಯು ಆಕ್ರೋಶವನ್ನು ಹುಟ್ಟುಹಾಕಿದೆ, ಜೋಮಿ ತಾಯಂದಿರ ಸಂಘವು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. “ಅತ್ಯಾಚಾರದ ಪುನರಾವರ್ತನೆಯು ಗೌರವದ ಕೊರತೆ ಮತ್ತು ಮಹಿಳೆಯರ ಘನತೆಯನ್ನು ರಕ್ಷಿಸುವಲ್ಲಿ ವಿಫಲತೆಗೆ ಸಾಕ್ಷಿಯಾಗಿದೆ” ಎಂದು ಸಂಘವು ಹೇಳಿಕೆಯಲ್ಲಿ ತಿಳಿಸಿದೆ.
ಇತ್ತೀಚಿನ ವಾರಗಳಲ್ಲಿ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ವರದಿಯಾದ ಮೂರನೇ ಘಟನೆ ಇದು.
ಈ ತಿಂಗಳ ಆರಂಭದಲ್ಲಿ, 10 ವರ್ಷದ ಬಾಲಕಿಯ ಮೇಲೆ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಾರ್ಚ್‌ನಲ್ಲಿ, ಒಂಬತ್ತು ವರ್ಷದ ಬಾಲಕಿಯೊಬ್ಬಳು ಪರಿಹಾರ ಶಿಬಿರದ ಬಳಿ ಅನುಮಾನಾಸ್ಪದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು.
ಈ ಪ್ರದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ನ್ಯಾಯವನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಸುರಕ್ಷತೆಯನ್ನು ಹೆಚ್ಚಿಸಲು ತ್ವರಿತ ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಿವಾಸಿಗಳು ಹಾಗೂ ನಾಗರಿಕ ಹಕ್ಕುಗಳ ಗುಂಪುಗಳು ಅಧಿಕಾರಿಗಳನ್ನು ಒತ್ತಾಯಿಸಿವೆ.
ಮಧ್ಯಪ್ರದೇಶ| ದೇವಾಲಯದ ಬಾಗಿಲು ತೆರೆಯದ ಅರ್ಚಕನನ್ನು ಥಳಿಸಿದ ಬಿಜೆಪಿ ಎಂಎಲ್‌ಎ ಮಗನ ಸಹಚರರು


