ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಭೂಷಣ್ ರಾಮಕೃಷ್ಣ ಗವಾಯಿ (ಬಿ.ಆರ್ ಗವಾಯಿ) ಅವರ ಹೆಸರನ್ನು ಹಾಲಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಬುಧವಾರ (ಏಪ್ರಿಲ್.16) ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಮೇ 13ರಂದು ಹಾಲಿ ಸಿಜೆಐ ಖನ್ನಾ ಅವರ ನಿವೃತ್ತಿಯ ನಂತರ, ಮೇ 14ರಂದು ಸುಪ್ರೀಂ ಕೋರ್ಟ್‌ನ 52ನೇ ಸಿಜೆಐ ಆಗಿ ಅಧಿಕಾರ ವಹಿಸಿಕೊಳ್ಳಲಿರುವ ನ್ಯಾಯಮೂರ್ತಿ ಗವಾಯಿ, ಹಾಲಿ ಸಿಜೆಐ ಖನ್ನಾ ನಂತರ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ.
ಕಳೆದ ವರ್ಷದ ನವೆಂಬರ್ 11 ರಂದು 51ನೇ ಸಿಜೆಐ ಸಂಜೀವ್ ಖನ್ನಾ ಪ್ರಮಾಣ ವಚನ ಸ್ವೀಕರಿಸಿದ್ದರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸು 65 ವರ್ಷ ಆಗಿದೆ.
ಮೇ 24, 2019ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಬಡ್ತಿ ಪಡೆದ ನ್ಯಾಯಮೂರ್ತಿ ಗವಾಯಿ ಅವರು ಆರು ತಿಂಗಳಿಗಿಂತ ಹೆಚ್ಚು ಕಾಲ ಸಿಜೆಐ ಆಗಿ ಸೇವೆ ಸಲ್ಲಿಸಲಿದ್ದಾರೆ. ಅವರು ನವೆಂಬರ್ 23, 2025 ರಂದು ನಿವೃತ್ತರಾಗಲಿದ್ದಾರೆ.
ನವೆಂಬರ್ 24, 1960ರಂದು ಅಮರಾವತಿಯಲ್ಲಿ ಜನಿಸಿದ ನ್ಯಾಯಮೂರ್ತಿ ಗವಾಯಿ ಅವರು, ನವೆಂಬರ್ 14, 2003ರಂದು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಬಡ್ತಿ ಪಡೆದರು. ಅವರು ನವೆಂಬರ್ 12, 2005ರಂದು ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾದರು.
ನ್ಯಾಯಮೂರ್ತಿ ಗವಾಯಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಸಾಂವಿಧಾನಿಕ ಪೀಠಗಳ ಭಾಗವಾಗಿದ್ದರು, ಅವುಗಳು ಮಹತ್ವದ ತೀರ್ಪುಗಳನ್ನು ನೀಡಿವೆ.
ಡಿಸೆಂಬರ್ 2023ರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯ ನಿಬಂಧನೆಗಳನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಸರ್ವಾನುಮತದಿಂದ ಎತ್ತಿಹಿಡಿದ ಐದು ನ್ಯಾಯಾಧೀಶರ ಸಂವಿಧಾನ ಪೀಠದ ಭಾಗವಾಗಿದ್ದರು.
ರಾಜಕೀಯ ನಿಧಿ ಸಂಗ್ರಹಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ‘ಚುನಾವಣಾ ಬಾಂಡ್ ಯೋಜನೆ’ಯನ್ನು ರದ್ದುಗೊಳಿಸಿ ಐತಿಹಾಸಿಕ ತೀರ್ಪು ನೀಡಿದ ಐವರು ನ್ಯಾಯಾಧೀಶರ ಸಂವಿಧಾನ ಪೀಠದಲ್ಲಿ ನ್ಯಾಯಮೂರ್ತಿ ಗವಾಯಿ ಇದ್ದರು.
4:1 ಬಹುಮತದಿಂದ, 2016ರಲ್ಲಿ 1,000 ಮತ್ತು 500 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದುಗೊಳಿಸಿದ ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದ ಐವರು ನ್ಯಾಯಾಧೀಶರ ಸಂವಿಧಾನ ಪೀಠದಲ್ಲಿ ನ್ಯಾಯಮೂರ್ತಿ ಗವಾಯಿ ಭಾಗವಾಗಿದ್ದರು.
6:1 ಬಹುಮತದಿಂದ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಗಳು ಸಾಂವಿಧಾನಿಕ ಅಧಿಕಾರ ಹೊಂದಿವೆ ಎಂದು ಮಹತ್ವದ ತೀರ್ಪು ನೀಡಿದ ಏಳು ನ್ಯಾಯಾಧೀಶರ ಸಂವಿಧಾನ ಪೀಠದಲ್ಲಿ ನ್ಯಾಯಮೂರ್ತಿ ಗವಾಯಿ ಇದ್ದರು.
ನ್ಯಾಯಮೂರ್ತಿ ಗವಾಯಿ ಅವರನ್ನೊಳಗೊಂಡ ಏಳು ನ್ಯಾಯಾಧೀಶರ ಸಂವಿಧಾನ ಪೀಠವು, ಪಕ್ಷಗಳ ನಡುವಿನ ಮುದ್ರೆಯಿಲ್ಲದ ಅಥವಾ ಸರಿಯಾದ ಮುದ್ರೆಯಿಲ್ಲದ ಒಪ್ಪಂದದಲ್ಲಿನ ಮಧ್ಯಸ್ಥಿಕೆ ಷರತ್ತು ಜಾರಿಗೊಳಿಸಬಹುದಾಗಿದೆ. ಏಕೆಂದರೆ, ಅಂತಹ ದೋಷವನ್ನು ಸರಿಪಡಿಸಬಹುದು ಮತ್ತು ಒಪ್ಪಂದವನ್ನು ಅಮಾನ್ಯಗೊಳಿಸುವುದಿಲ್ಲ ಎಂದು ತೀರ್ಪು ನೀಡಿತ್ತು.
ಕಾರಣ ಕೇಳಿ ನೋಟಿಸ್ ನೀಡದೆ ಯಾವುದೇ ಕಟ್ಟಡಗಳನ್ನು ಕೆಡವಬಾರದು, ನೋಟಿಸ್ ನೀಡಿದ ಬಳಿಕ ಅದಕ್ಕೆ ಪ್ರತಿಕ್ರಿಯಿಸಲು ಕಟ್ಟಡ ಮಾಲೀಕರಿಗೆ 15 ದಿನಗಳ ಸಮಯವಕಾಶ ನೀಡಬೇಕು ಎಂಬುವುದು ಸೇರಿದಂತೆ ಕಟ್ಟಡಗಳ ತೆರವು ಕಾರ್ಯಾಚರಣೆ ಇಡೀ ದೇಶಕ್ಕೆ ಮಾರ್ಗಸೂಚಿಗಳನ್ನು ರೂಪಿಸಿ ನೀಡಿದ ಮಹತ್ವದ ತೀರ್ಪು ನೀಡಿದ ಪೀಠದ ನೇತೃತ್ವವನ್ನು ನ್ಯಾಯಮೂರ್ತಿ ಗವಾಯಿ ವಹಿಸಿದ್ದರು.
ಇದಲ್ಲದೆ, ನ್ಯಾಯಮೂರ್ತಿ ಗವಾಯಿ ಅವರು ಅರಣ್ಯಗಳು, ವನ್ಯಜೀವಿಗಳು ಮತ್ತು ಮರಗಳ ರಕ್ಷಣೆಗೆ ಸಂಬಂಧಿಸಿದ ವಿಷಯಗಳನ್ನು ಆಲಿಸುವ ಪೀಠದ ಮುಖ್ಯಸ್ಥರಾಗಿದ್ದಾರೆ.
ಮಾರ್ಚ್ 16, 1985ರಂದು ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ ನ್ಯಾಯಮೂರ್ತಿ ಗವಾಯಿ ಅವರು, ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್, ಅಮರಾವತಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಅಮರಾವತಿ ವಿಶ್ವವಿದ್ಯಾಲಯದ ಸ್ಥಾಯಿ ಸಲಹೆಗಾರರಾಗಿದ್ದರು.
ಆಗಸ್ಟ್ 1992ರಿಂದ ಜುಲೈ 1993ರವರೆಗೆ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ಸಹಾಯಕ ಸರ್ಕಾರಿ ವಕೀಲ ಮತ್ತು ಹೆಚ್ಚುವರಿ ಸಾರ್ವಜನಿಕ ಅಭಿಯೋಜಕರಾಗಿ ನ್ಯಾಯಮೂರ್ತಿ ಗವಾಯಿ ನೇಮಕಗೊಂಡಿದ್ದರು.
ಜನವರಿ 17, 2000ದಂದು ನಾಗಪುರ ಪೀಠಕ್ಕೆ ಸರ್ಕಾರಿ ಪ್ಲೀಡರ್ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನ್ಯಾಯಮೂರ್ತಿ ಗವಾಯಿ ಅವರನ್ನು ನೇಮಿಸಲಾಗಿತ್ತು.
ಲಡ್ಕಿ ಬಹಿನ್ ಯೋಜನೆಯ ಫಲಾನುಭವಿ 8 ಲಕ್ಷ ಮಹಿಳೆಯರಿಗೆ 1500 ರಿಂದ 500 ಗೆ ಕಡಿತಗೊಳಿಸಿದ ಮಹಾರಾಷ್ಟ್ರ ಸರ್ಕಾರ


