ಸಂವಿಧಾನ ಅಸ್ತಿತ್ವಕ್ಕೆ ಬಂದು 75 ವರ್ಷಗಳಾದರೂ ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳು ಮೂಲಭೂತ ಹಕ್ಕುಗಳ ಬಗ್ಗೆ ಅಜ್ಞಾನಿಗಳಾಗಿದ್ದಾರೆ ಅಥವಾ ಅವುಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಹಾಸ್ಯನಟ ಕುನಾಲ್ ಕಮ್ರಾ ಅವರ ವಕೀಲರು ಬುಧವಾರ ಬಾಂಬೆ ಹೈಕೋರ್ಟ್‌ನಲ್ಲಿ ವಾದಿಸಿದ್ದಾರೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಗ್ಗೆ ವಿಡಂಬನಾತ್ಮಕ ಹೇಳಿಕೆ ನೀಡಿದ್ದ ಕುನಾಲ್ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ವಕೀಲ ನವ್ರೋಜ್ ಸೀರ್ವೈ ಈ ಹೇಳಿಕೆ ನೀಡಿದ್ದಾರೆ. ಹೈಕೋರ್ಟ್ ಈ ವಿಷಯದ ಕುರಿತು ತನ್ನ ಆದೇಶವನ್ನು ಬುಧವಾರ ಕಾಯ್ದಿರಿಸಿದೆ.
ಕುನಾಲ್ ಅವರು ವಾಕ್ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸುವುದನ್ನು ಆಕ್ಷೇಪಿಸಿ ಕಾನೂನು ಯಂತ್ರಗಳನ್ನು ಬಳಸಲಾಗುತ್ತಿದೆ. ಅವರ ವಿರುದ್ಧದ ಪ್ರಕರಣವು “ಅಪರೂಪದಲ್ಲಿ ಅಪರೂಪದ” ವರ್ಗದ ಅಡಿಯಲ್ಲಿ ಬರುತ್ತದೆ ಎಂದು ಸೀರ್ವೈ ವಾದಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಕಾನೂನುಬಾಹಿರ ಸೆನ್ಸಾರ್‌ಶಿಪ್ ಪ್ರಯತ್ನಗಳನ್ನು ಸುಪ್ರೀಂ ಕೋರ್ಟ್ ಯಾವಾಗಲೂ ರದ್ದುಗೊಳಿಸಿದೆ ಎಂದು ಹೇಳುವ ಮೂಲಕ ವಕೀಲರು ತನಿಖೆಗೆ ತಡೆ ನೀಡುವಂತೆ ಕೋರಿದ್ದಾರೆ.
ಕುನಾಲ್ ಅವರಿಗೆ ಮಾರಣಾಂತಿಕ ಬೆದರಿಕೆಗಳು ಬಂದಿದ್ದರೂ ಸಹ, ಮುಂಬೈ ಪೊಲೀಸರು ಅವರ ದೈಹಿಕ ಉಪಸ್ಥಿತಿಯನ್ನು ಕೋರಿ ಅವರಿಗೆ ಮೂರು ಸಮನ್ಸ್‌ಗಳನ್ನು ಏಕೆ ಜಾರಿ ಮಾಡಿದ್ದಾರೆ ಎಂದು ವಕೀಲರು ಪ್ರಶ್ನಿಸಿದ್ದಾರೆ. ಅವರು ಹೇಳಿಕೆ ನೀಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರನ್ನು ಮತ್ತು ಅದನ್ನು ನಡೆಸಿದವರನ್ನು ಪೊಲೀಸರು ಏಕೆ ವಿಚಾರಣೆಗೆ ಕರೆದರು ಎಂದು ಅವರು ಕೇಳಿದ್ದಾರೆ.
“ಸಂವಿಧಾನ ಅಸ್ತಿತ್ವಕ್ಕೆ ಬಂದು 75 ವರ್ಷಗಳ ನಂತರವೂ… ಕಾನೂನು ಜಾರಿ ಯಂತ್ರವು ಮೂಲಭೂತ ಹಕ್ಕಿನ ಬಗ್ಗೆ ತಿಳಿದಿಲ್ಲ ಅಥವಾ ಮೂಲಭೂತ ಹಕ್ಕಿನ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಇದು ತೋರಿಸುತ್ತದೆ” ಎಂದು ಸೀರ್ವೈ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮಾರ್ಚ್ 23 ರಂದು, ಕುನಾಲ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಿಂದಿ ಚಲನಚಿತ್ರವೊಂದರ ಹಾಡನ್ನು ವಿಡಂಬನಾತ್ಮಕವಾಗಿ ಹಾಡಿದ್ದರು. ಈ ವೇಳೆ ಅವರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಶಿಂಧೆ ಅವರ ಹೆಸರನ್ನು ನೇರವಾಗಿ ಹೇಳದೆ ಟೀಕಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರು.
ಈ ಹೇಳಿಕೆಯಲ್ಲಿ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ 2022 ರಲ್ಲಿ ಶಿಂಧೆ ದಂಗೆ ಎದ್ದ ಅವರ ಸರ್ಕಾರವನ್ನು ಉರುಳಿಸಿದ್ದನ್ನು ಉಲ್ಲೇಖಿಸಿದ್ದರು. ಮಹಾರಾಷ್ಟ್ರದ ಈ ರಾಜಕೀಯ ಬಿಕ್ಕಟ್ಟನ್ನು ಉಲ್ಲೇಖಿಸುವಾಗ ಕುನಾಲ್ ಅವರು ಶಿಂಧೆ ಅವರನ್ನು “ದೇಶದ್ರೋಹಿ” ಎಂದು ಹೇಳಿದ್ದರು. ಆದಾಗ್ಯೂ, ಅವರು ಶಿಂಧೆ ಹೆಸರನ್ನು ಉಲ್ಲೇಖಿಸಿರಲಿಲ್ಲ.
ಪ್ರದರ್ಶನದ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆದ ನಂತರ, ಮಾರ್ಚ್ 23 ರ ರಾತ್ರಿ ಶಿವಸೇನೆಯ ಶಿಂಧೆ ನೇತೃತ್ವದ ಬಣದ ಸದಸ್ಯರು ಕಾರ್ಯಕ್ರಮವನ್ನು ರೆಕಾರ್ಡ್ ಮಾಡಲಾದ ಮುಂಬೈನ ಖಾರ್ ಪ್ರದೇಶದಲ್ಲಿ ದಿ ಹ್ಯಾಬಿಟ್ಯಾಟ್ ಸ್ಟುಡಿಯೋವನ್ನು ಧ್ವಂಸಗೊಳಿಸಿದ್ದರು.
ಮರುದಿನ, ಮುಂಬೈ ಪೊಲೀಸರು ಕಮ್ರಾ ವಿರುದ್ಧ ಮಾನನಷ್ಟ ಮತ್ತು ಸಾರ್ವಜನಿಕ ಕಿಡಿಗೇಡಿತನಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತಾ ವಿಭಾಗಗಳ ಅಡಿಯಲ್ಲಿ ಕುನಾಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ದಿ ಹ್ಯಾಬಿಟ್ಯಾಟ್ ಸ್ಟುಡಿಯೋ ಧ್ವಂಸ ಪ್ರಕರಣದಲ್ಲಿ ಶಿಂಧೆ ನೇತೃತ್ವದ ಶಿವಸೇನೆಯ 12 ಸದಸ್ಯರನ್ನು ಪೊಲೀಸರು ಬಂಧಿಸಿದರು. ಆದಾಗ್ಯೂ, ಮಾರ್ಚ್ 24 ರಂದು ಅವರಿಗೆ ಜಾಮೀನು ನೀಡಲಾಯಿತು.


