ಕೇಂದ್ರದ ಬಿಜೆಪಿ ಜಾರಿಗೆ ತಂದಿರುವ ವಿವಾದಾತ್ಮಕ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಪ್ರಕಾರ ಮಹಾರಾಷ್ಟ್ರ ಸರ್ಕಾರವು ರಾಜ್ಯದ ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಯವರೆಗೆ ಹಿಂದಿಯನ್ನು ಕಡ್ಡಾಯವಾಗಿ ಮೂರನೇ ಭಾಷೆಯನ್ನಾಗಿ ಮಾಡಿದೆ ಎಂದು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಎನ್‌ಇಪಿ ಜಾರಿ
ಸರ್ಕಾರದ ಈ ನಿರ್ಧಾರವನ್ನು ವಿರೋಧ ಪಕ್ಷ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ಕ್ರಮವು ಹಿಂದಿ ಹೇರಿಕೆಗೆ ಸಮನಾಗಿದೆ ಎಂದು ಹೇಳಿದೆ. ಪ್ರಸ್ತುತ, ಈ ಶಾಲೆಗಳಲ್ಲಿ 1 ರಿಂದ 4 ನೇ ತರಗತಿಯವರೆಗೆ ಮರಾಠಿ ಮತ್ತು ಇಂಗ್ಲಿಷ್ ಅನ್ನು ಮಾತ್ರ ಕಡ್ಡಾಯ ಭಾಷೆಗಳಾಗಿ ಕಲಿಸಲಾಗುತ್ತಿದೆ.
ಗುರುವಾರ ಹೊರಡಿಸಲಾದ ಸರ್ಕಾರಿ ನಿರ್ಣಯದ (GR) ಪ್ರಕಾರ, ಮುಂದಿನ ಶೈಕ್ಷಣಿಕ ವರ್ಷದಿಂದ 1 ರಿಂದ 5 ನೇ ತರಗತಿಯವರೆಗೆ ಮೂರನೇ ಭಾಷೆಯಾಗಿ ಹಿಂದಿ ಕಡ್ಡಾಯವಾಗಲಿದೆ. ಎನ್‌ಇಪಿ ಪ್ರಕಾರ ಹೊಸ ಪಠ್ಯಕ್ರಮವನ್ನು 2025-26 ರಲ್ಲಿ 1 ನೇ ತರಗತಿಗೆ ಜಾರಿಗೆ ತರಲಾಗುವುದು ಎಂದು ಹೇಳಿದೆ.
2, 3, 4 ಮತ್ತು 6 ನೇ ತರಗತಿಗಳಿಗೆ, ಈ ನೀತಿಯನ್ನು 2026-27 ರಲ್ಲಿ, 5, 9 ಮತ್ತು 11 ನೇ ತರಗತಿಗಳಿಗೆ 2027-28 ರಿಂದ ಮತ್ತು 8, 10 ಮತ್ತು 12 ನೇ ತರಗತಿಗಳಿಗೆ 2028-29 ರಿಂದ ಜಾರಿಗೆ ತರಲಾಗುವುದು ಎಂದು ಸರ್ಕಾರಿ ನಿರ್ಣಯ ತಿಳಿಸಿದೆ.
ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮವನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ಶಾಲೆಗಳು ಪ್ರಸ್ತುತ ತ್ರಿಭಾಷಾ ಸೂತ್ರವನ್ನು ಅನುಸರಿಸುತ್ತಿವೆ. ಅಂತಹ ಶಾಲೆಗಳಿಗೆ, ಮಾಧ್ಯಮದ ಭಾಷೆಯಾಗಿ, ಇಂಗ್ಲಿಷ್ ಮತ್ತು ಮರಾಠಿಗಳನ್ನು ಕಲಿಸಲಾಗುವುದು ಎಂದು ಸರ್ಕಾರ ಹೇಳಿದೆ. 6 ರಿಂದ 10 ನೇ ತರಗತಿಯವರೆಗೆ, ಭಾಷಾ ನೀತಿಯು ರಾಜ್ಯ ಪಠ್ಯಕ್ರಮದ ಪ್ರಕಾರ ಇರುತ್ತದೆ ಎಂದು ಅದು ಹೇಳಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ರಾಜ್ಯವು ಈಗಾಗಲೇ ಎನ್‌ಇಪಿ ಅನ್ನು ಜಾರಿಗೆ ತಂದಿದೆ ಎಂದು ಹೇಳಿದ್ದಾರೆ. ಮರಾಠಿಯನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿದೆ ಎಂದು ಅವರು ಹೇಳಿದ್ದು, ಇಡೀ ದೇಶದಲ್ಲಿ ಸಂವಹನ ಸಾಧನವಾಗಿರುವುದರಿಂದ ಹಿಂದಿಯನ್ನು ಸಹ ಕಲಿಯಬೇಕು ಎಂದು ಸಿಎಂ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಅವರು ಈ ಕ್ರಮವು ಮರಾಠಿ ‘ಅಸ್ಮಿತೆ’ಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. “ಹಿಂದಿ ಐಚ್ಛಿಕ ಭಾಷೆಯಾಗಿದ್ದರೆ ನಮಗೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಅದನ್ನು ಕಡ್ಡಾಯಗೊಳಿಸುವುದು ಅದನ್ನು ಹೇರಿದಂತೆ. ಮರಾಠಿ ಭಾವನೆಗಳನ್ನು ನೋಯಿಸುವುದು ತಪ್ಪು. ಮಧ್ಯಪ್ರದೇಶ, ಯುಪಿಯಲ್ಲಿ ಮರಾಠಿಯನ್ನು ಮೂರನೇ ಭಾಷೆಯಾಗಿ ನಾವು ಒತ್ತಾಯಿಸಲು ಸಾಧ್ಯವೆ” ಎಂದು ಅವರು ಕೇಳಿದ್ದಾರೆ.
ಭಾಷಾವಾರು ಪುನರ್ವಿಂಗಡಣೆಯ ಮೂಲಕ ರಾಜ್ಯಗಳನ್ನು ರಚಿಸಲಾಗಿದೆ. ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕು ಮತ್ತು ಹಿಂದಿಯನ್ನು ಐಚ್ಛಿಕಗೊಳಿಸಬೇಕು ಎಂದು ಅವರು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಎನ್‌ಇಪಿ ಜಾರಿ


