ರಾಜ್ಯದಲ್ಲಿ ಶಿಕ್ಷಣ ಮತ್ತು ಉದ್ಯೋಗ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಯವರನ್ನು (ಎಸ್‌ಸಿ) ಮೂರು ಉಪ ವರ್ಗಗಳಾಗಿ ವರ್ಗೀಕರಿಸಿ ಒಳ ಮೀಸಲಾತಿ ನೀಡಲು ಆಂಧ್ರ ಪ್ರದೇಶ ಸರ್ಕಾರ ಗುರುವಾರ (ಏ.17) ಸುಗ್ರಿವಾಜ್ಞೆ ಹೊರಡಿಸಿದೆ.
ಸಮುದಾಯದೊಳಗಿನ ಅಸಮಾನತೆಗಳು ಮತ್ತು ಸರ್ಕಾರಿ ಯೋಜನೆಗಳ ಪ್ರವೇಶವನ್ನು ನಿಭಾಯಿಸಲು ಪರಿಶಿಷ್ಟ ಜಾತಿಗಳನ್ನು ಮೂರು ಉಪ-ವರ್ಗಗಳಾಗಿ ವರ್ಗೀಕರಿಸಲು ಈ ಸುಗ್ರೀವಾಜ್ಞೆಯು ಒಂದು ಚೌಕಟ್ಟನ್ನು ಒದಗಿಸುತ್ತದೆ.
‘ಆಂಧ್ರ ಪ್ರದೇಶ ಪರಿಶಿಷ್ಟ ಜಾತಿ (ಉಪ-ವರ್ಗೀಕರಣ) ಸುಗ್ರೀವಾಜ್ಞೆ-2025 ಅನ್ನು ರಾಜ್ಯದ ಗೆಜೆಟ್‌ನಲ್ಲಿ ಇಂಗ್ಲಿಷ್, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಆಂಧ್ರ ಪ್ರದೇಶ ಸುಗ್ರೀವಾಜ್ಞೆ 2025ರ ನಂ. 2 ಎಂದು ಪ್ರಕಟಿಸಲಾಗಿದೆ’ ಎಂದು ಕಾನೂನು ಇಲಾಖೆಯ ಆದೇಶದಲ್ಲಿ ತಿಳಿಸಿದೆ.
ಸುಗ್ರೀವಾಜ್ಞೆಯ ಪ್ರಕಾರ, ಚಂಡಾಲ, ಪಾಕಿ, ರೆಲ್ಲಿ ಮತ್ತು ಡೋಮ್ ಸಮುದಾಯಗಳು ಸೇರಿದಂತೆ ಹನ್ನೆರಡು ಉಪ-ಜಾತಿಗಳನ್ನು ವರ್ಗ 1ರಲ್ಲಿ (ಅತ್ಯಂತ ಹಿಂದುಳಿದ) ಇರಿಸಲಾಗಿದೆ. ಈ ವರ್ಗ ಶೇ. 1ರಷ್ಟು ಮೀಸಲಾತಿ ಪಡೆಯಲಿದೆ.
ವರ್ಗ 2ರಲ್ಲಿ ಚಾಮರ್, ಮಾದಿಗ, ಸಿಂಧೋಲ ಮತ್ತು ಮಾತಂಗಿಯಂತಹ 18 ಉಪಜಾತಿಗಳಿದ್ದು, ಶೇ. 6.5 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
ವರ್ಗ 3ರಲ್ಲಿ ಮಾಲಾ ಗುಂಪಿನ 29 ಜಾತಿಗಳಾದ, ಆದಿ ದ್ರಾವಿಡ, ಅಣಮುಕ್, ಅರಯಮಾಲ, ಅರ್ವಮಾಲ, ಬಾರಿಕಿ, ಬ್ಯಾಗಾರ, ಚಲವಾದಿ, ಯೆಲ್ಲಾಮಾಲಾವರ್, ಹೊಲೆಯ, ಹೊಲೆಯ ದಾಸರಿ, ಮಾದಸಿ ಕುರುವ, ಮಹಾರ್, ಮಾಲಾ, ಮಾಲಾ ದಾಸರಿ, ಮಾಲಾ ದಾಸು, ಮಾಲಾ ಹಣ್ಣಾಯಿ, ಮಾಲಾ ಜಂಗಮ, ಮಾಲಾ ಮಾಸ್ತಿ, ಮಾಲಾ ಸಾಲೆ, ಮಾಲಾ ಸನ್ಯಾಸಿ, ಮನ್ನೆ, ಮುಂಡಾಲ, ಸಾಂಬನ್, ಯಾತಳ, ವಳ್ಳುವನ್, ಆದಿ ಆಂಧ್ರ, ಮಾಸ್ತಿ, ಮಿತ್ತ ಅಯ್ಯಳವರ್, ಪಂಚಮವನ್ನು ಕಡಿಮೆ ಹಿಂದುಳಿದವರು ಎಂದು ವರ್ಗೀಕರಿಸಿ ಶೇ.7.5 ಮೀಸಲಾತಿ ನೀಡಲಾಗಿದೆ.
“ಸಮಾಜದಲ್ಲಿನ ಎಲ್ಲಾ ಪರಿಶಿಷ್ಟ ಜಾತಿ ಸಮುದಾಯಗಳ ಸಮಗ್ರ ಮತ್ತು ಸಮಾನ ಪ್ರಗತಿಯನ್ನು ಖಚಿತಪಡಿಸಿಕೊಳ್ಳುವುದು ಈ ಸುಗ್ರೀವಾಜ್ಞೆಯ ಮುಖ್ಯ ಉದ್ದೇಶವಾಗಿದೆ” ಎಂದು ಸಮಾಜ ಕಲ್ಯಾಣ ಸಚಿವ ಡಾ.ದೋಲ ವೀರಾಂಜನೇಯ ಸ್ವಾಮಿ ಹೇಳಿದ್ದಾರೆ.
ತೆಲುಗು ದೇಶಂ ಪಕ್ಷ (ಟಿಡಿಪಿ) ನೇತೃತ್ವದ ಆಂಧ್ರ ಪ್ರದೇಶ ರಾಜ್ಯ ಸರ್ಕಾರ ಒಳ ಮೀಸಲಾತಿ ಸಂಬಂಧ ನವೆಂಬರ್ 2024ರಲ್ಲಿ ನಿವೃತ್ತ ಐಎಎಸ್ ಅಧಿಕಾರಿ ರಾಜೀವ್ ರಂಜನ್ ಮಿಶ್ರಾ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿತ್ತು. ಇದು ಉಪ-ವರ್ಗೀಕರಣವನ್ನು ಶಿಫಾರಸು ಮಾಡಿತ್ತು.
ರಾಜ್ಯದ 26 ಜಿಲ್ಲೆಗಳಿಂದ ಸಾರ್ವಜನಿಕ ಪ್ರತಿಕ್ರಿಯೆಯನ್ನು ಅನುಸರಿಸಿ, ರಂಜನ್ ಮಿಶ್ರಾ ಈ ವರ್ಷದ ಮಾರ್ಚ್ 10 ರಂದು ಸಮಗ್ರ ವರದಿಯನ್ನು ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ಕಳೆದ ವರ್ಷ ತನ್ನ ತೀರ್ಪಿನಲ್ಲಿ, ಮೀಸಲಾದ ವರ್ಗಗಳಲ್ಲಿ ಒಳ ಮೀಸಲಾತಿ ನೀಡಲು ಎಸ್‌ಸಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಉಪ ವರ್ಗೀಕರಣ ಮಾಡಲು ರಾಜ್ಯಗಳಿಗೆ ಅನುಮತಿ ನೀಡಿದೆ.
ಹಣ, ಹೆಂಡಕ್ಕೆ ಮತ ನೀಡಿದರೆ ಮುಂದಿನ ಜನ್ಮದಲ್ಲಿ ನಾಯಿ, ಬೆಕ್ಕುಗಳಾಗಿ ಹುಟ್ಟುತ್ತೀರಿ: ಬಿಜೆಪಿ ಶಾಸಕಿ ಉಷಾ ಠಾಕೂರ್


