ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಹನುಮಾನ್ ಜಯಂತಿ ಆಚರಣೆಯ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆ ಮೇಧಾ ಕುಲಕರ್ಣಿ ಮುಸ್ಲಿಂ ಧಾರ್ಮಿಕ ಸ್ಥಳದ ಟ್ರಸ್ಟಿಗಳಿಗೆ ಬೆದರಿಕೆ ಹಾಕಿ, ಆಜಾನ್ (ಇಸ್ಲಾಮಿಕ್ ಪ್ರಾರ್ಥನೆ ಕರೆ) ತಡೆಯಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಿಜೆಪಿ ಸಂಸದೆ ಮತ್ತು ಮುಸ್ಲಿಂ ಸದಸ್ಯರ ನಡುವಿನ ವಾಗ್ವಾದದ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಈ ಘಟನೆ ಏಪ್ರಿಲ್ 12 ರಂದು ಪುಣ್ಯಶ್ವರ ದೇವಸ್ಥಾನ ಮತ್ತು ಶೇಖ್ ಸಲಾಹುದ್ದೀನ್ ದರ್ಗಾ ಬಳಿ ಸಂಭವಿಸಿದೆ.
ವಿಡಿಯೋದಲ್ಲಿ, ಕೇಸರಿ ಶಾಲು ಧರಿಸಿ ತಮ್ಮ ಬೆಂಬಲಿಗರೊಂದಿಗೆ ಮುಸ್ಲಿಂ ಸಮುದಾಯದ ಸದಸ್ಯರನ್ನು ಸಮೀಪಿಸುತ್ತಿರುವ ಸಂಸದೆ ಕುಲಕರ್ಣಿ ಕಾಣಿಸಿಕೊಳ್ಳುತ್ತಿದ್ದಾರೆ. ಧ್ವನಿವರ್ಧಕದಲ್ಲಿ ಹೆಚ್ಚಿನ ಶಬ್ದದಲ್ಲಿ ಆಜಾನ್ ನುಡಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಶೇಖ್ ಸಲಾಹುದ್ದೀನ್ ದರ್ಗಾದ ಟ್ರಸ್ಟಿಗಳು ಬಿಜೆಪಿ ಸಂಸದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಆದರೂ, ಕುಲಕರ್ಣಿ ಆರೋಪಗಳನ್ನು ತೀವ್ರವಾಗಿ ನಿರಾಕರಿಸಿದ್ದಾರೆ. ಹೇಳಿಕೆಗಳು ತಪ್ಪು ಎಂದು ಸಾಬೀತಾದರೆ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಕೆ ಹಾಕಿದ್ದಾರೆ.
“ಆರತಿ ಮತ್ತು ಹನುಮಾನ್ ಪ್ರಾರ್ಥನೆಗಳು ನಡೆಯುತ್ತಿರುವಾಗ, ಪಕ್ಕದ ದರ್ಗಾದಲ್ಲಿ ಅಜಾನ್ ಜೋರಾಗಿ ನುಡಿಸಲಾಯಿತು. ನಮ್ಮ ಆಚರಣೆಗಳು ನಡೆಯುತ್ತಿರುವುದರಿಂದ ನಾವು ಅವರ ಧ್ವನಿಯನ್ನು ಕಡಿಮೆ ಮಾಡಲು ವಿನಂತಿಸಿದ್ದೇವೆ. ಆದರೆ, ಅವರು ನನ್ನೊಂದಿಗೆ ವಾದಿಸಿದರು” ಎಂದು ಕುಲಕರ್ಣಿ ಅವರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
“ವಿವಾದದ ನಂತರ ನಾನು ಪ್ರಯಾಣಿಸುತ್ತಿದ್ದೆ, ನಂತರದ ಬೆಳವಣಿಗೆಗಳ ಬಗ್ಗೆ ನನಗೆ ತಿಳಿದಿರಲಿಲ್ಲ. ಆದರೆ, ಘಟನೆಯ ವೀಡಿಯೊಗಳು ವೈರಲ್ ಆಗಿವೆ ಎಂದು ತಿಳಿದುಬಂದಿದೆ. ಆ ಕ್ಲಿಪ್‌ಗಳಲ್ಲಿ, ಜೋರಾದ ಶಬ್ದದಿಂದಾಗಿ ನಾನು ನನ್ನ ಕಿವಿಗಳನ್ನು ಮುಚ್ಚಿಕೊಂಡಿರುವುದು ಗೋಚರಿಸುತ್ತದೆ. ನಾನು ಅವರ ಧ್ವನಿಯನ್ನು ಕಡಿಮೆ ಮಾಡಲು ವಿನಂತಿಸಿದೆ. ಆದರೆ, ಅವರು ವಾದಿಸಿದರು. ಪೊಲೀಸರು ನಮ್ಮನ್ನು ಸಂಪರ್ಕಿಸಿದಾಗ ಅವರನ್ನು ತಡೆಯುವುದನ್ನು ಸಹ ಚಿತ್ರಗಳು ತೋರಿಸುತ್ತವೆ. ಈಗ ಅವರ ಆರೋಪಗಳನ್ನು ಸಾಬೀತುಪಡಿಸುವುದು ಟ್ರಸ್ಟಿಗಳ ಮೇಲಿದೆ. ಅವರು ವಿಫಲವಾದರೆ, ನಾನು ಅವರ ವಿರುದ್ಧ ದೂರು ದಾಖಲಿಸುತ್ತೇನೆ” ಎಂದು ಅವರು ಹೇಳಿದರು.
ಮಹಾರಾಷ್ಟ್ರದಲ್ಲಿ ಮರಾಠಿ ಕಡ್ಡಾಯ, ಇತರ ಭಾಷೆ ಕಲಿಯುವುದು ವೈಯಕ್ತಿಕ ಆಯ್ಕೆ: ದೇವೇಂದ್ರ ಫಡ್ನವೀಸ್


