ಸುಪ್ರೀಂ ಕೋರ್ಟ್ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರನ್ನು ಟೀಕಿಸಿದ್ದಕ್ಕಾಗಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ತನ್ನ ಅನುಮತಿ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ (ಏ.21) ಅರ್ಜಿದಾರರಿಗೆ ತಿಳಿಸಿದೆ.
ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠದ ಮುಂದೆ ಈ ವಿಷಯ ವಿಚಾರಣೆಗೆ ಬಂದಿತ್ತು.
ದುಬೆಯವರ ಹೇಳಿಕೆಗಳ ಕುರಿತ ಇತ್ತೀಚಿನ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಅರ್ಜಿದಾರರ ಪರ ವಕೀಲರು, ನ್ಯಾಯಾಲಯದ ಅನುಮತಿಯೊಂದಿಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಬಯಸುವುದಾಗಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಗವಾಯಿ, “ನೀವು ಅರ್ಜಿ ಸಲ್ಲಿಸಿ, ಅದಕ್ಕೆ ನಮ್ಮ ಅನುಮತಿ ಅಗತ್ಯವಿಲ್ಲ. ಆದರೆ, ಈ ವಿಷಯದಲ್ಲಿ ಅಟಾರ್ನಿ ಜನರಲ್ (ಎಜಿ) ಅವರಿಂದ ಅನುಮತಿ ಪಡೆಯಬೇಕಾಗಿದೆ. ಎಜಿ ಮುಂದೆ ಪ್ರಕರಣ ದಾಖಲಿಸಿ, ಅವರು ಅನುಮತಿ ನೀಡುತ್ತಾರೆ” ಎಂದು ಪ್ರತಿಕ್ರಿಯಿಸಿದ್ದಾಗಿ .barandbench.com ವರದಿ ಮಾಡಿದೆ.
ಸುಪ್ರೀಂ ಕೋರ್ಟ್ ಕಾನೂನುಗಳನ್ನು ರೂಪಿಸುವುದಾದರೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳನ್ನು ಮುಚ್ಚಿ ಎಂದು ಬಿಜೆಪಿ ಸಂಸದ ದುಬೆ ಶನಿವಾರ ವಾಗ್ದಾಳಿ ನಡೆಸಿದ್ದರು.
ದೇಶದಲ್ಲಿ “ಅಂತರ್ಯುದ್ಧ ಉಂಟಾದರೆ” ಸಿಜೆಐ ಖನ್ನಾ ಅವರೇ ಅದಕ್ಕೆ ಕಾರಣ ಎಂದು ಟೀಕಿಸಿದ್ದರು.
ಈ ತಿಂಗಳ ಆರಂಭದಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕರಿಸಲ್ಪಟ್ಟ ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಕಳೆದ ಬುಧವಾರ ವಿಚಾರಣೆ ನಡೆಸಿದೆ.
ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರಿಗೆ ಅವಕಾಶ ನೀಡುವುದು ಮತ್ತು ಬಳಕೆದಾರರಿಂದ ವಕ್ಫ್ ಆಸ್ತಿಗಳನ್ನು ತೆಗೆದು ಹಾಕಲು ಅವಕಾಶ ನೀಡುವಂತಹ ಕೆಲವು ನಿಬಂಧನೆಗಳು ಮೂಲಭೂತ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದು ಅರ್ಜಿದಾರರು ವಾದಿಸುತ್ತಿದ್ದಾರೆ. ಇದರಲ್ಲಿ ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸುವುದನ್ನು ದುಬೆಯವರು ಪ್ರಶ್ನಿಸಿದ್ದಾರೆ.
ವಕ್ಫ್ ಕಾಯ್ದೆಯ ತಿದ್ದುಪಡಿಗಳನ್ನು ಪ್ರಶ್ನಿಸಿದ ದಾವೆದಾರರಲ್ಲಿ ಒಬ್ಬರ ಪರ ವಕೀಲರಾಗಿರುವ ಸುಪ್ರೀಂ ಕೋರ್ಟ್ ವಕೀಲ ಅನಸ್ ತನ್ವೀರ್, ಅಟಾರ್ನಿ ಜನರಲ್ ಆರ್ ವೆಂಕಟ್ರಮಣಿ ಅವರಿಗೆ ಪತ್ರ ಬರೆದು, ಸುಪ್ರೀಂ ಕೋರ್ಟ್‌ನ ಘನತೆಯನ್ನು ಕುಗ್ಗಿಸುವ ಗುರಿಯನ್ನು ಹೊಂದಿರುವ ಹೇಳಿಕೆಗಳಿಗಾಗಿ ಸಂಸದ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಒಪ್ಪಿಗೆ ಕೋರಿದ್ದಾರೆ.
“1975ರ ಸುಪ್ರೀಂ ಕೋರ್ಟ್ ನಿಂದನೆ ಪ್ರಕ್ರಿಯೆಗಳನ್ನು ನಿಯಂತ್ರಿಸುವ ನಿಯಮಗಳ ನಿಬಂದನೆ 3 (ಸಿ) ಯೊಂದಿಗೆ ಓದಲಾದ ನ್ಯಾಯಾಂಗ ನಿಂದನೆ ಕಾಯ್ದೆ, 1971 ರ ಸೆಕ್ಷನ್ 15 (1) (ಬಿ) ಅಡಿಯಲ್ಲಿ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ, ಜಾರ್ಖಂಡ್‌ನ ಗೊಡ್ಡಾ ಸಂಸದೀಯ ಕ್ಷೇತ್ರದ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ಅವರು ಸಾರ್ವಜನಿಕವಾಗಿ ನೀಡಿದ ಹೇಳಿಕೆಗಳು ದಾರಿತಪ್ಪಿಸುವ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಘನತೆ ಮತ್ತು ಅಧಿಕಾರವನ್ನು ಕುಗ್ಗಿಸುವ ಗುರಿಯನ್ನು ಹೊಂದಿರುವ ಹೇಳಿಕೆಗಳಾಗಿವೆ. ಹಾಗಾಗಿ, ಅವರ ವಿರುದ್ದ ಕ್ರಿಮಿನಲ್ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಪ್ರಾರಂಭಿಸಲು ನಿಮ್ಮ ಒಪ್ಪಿಗೆ ಕೋರುತ್ತೇನೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸುಪ್ರೀಂ ಕೋರ್ಟ್ ವಿರುದ್ದದ ದುಬೆ ಅವರ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದ್ದು, ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಈ ಹೇಳಿಕೆಗಳನ್ನು ಅವರ ವೈಯಕ್ತಿಕ ಅಭಿಪ್ರಾಯಗಳು ಎಂದಿದ್ದಾರೆ.
ನ್ಯಾಯಾಂಗವು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದೆ. ಅಂತಹ ಹೇಳಿಕೆಗಳನ್ನು ನೀಡದಂತೆ ಪಕ್ಷದ ನಾಯಕರಿಗೆ ನಿರ್ದೇಶನ ನೀಡಿದ್ದೇನೆ ಎಂದು ನಡ್ಡಾ ಹೇಳಿದ್ದಾರೆ.
ಬಿಹಾರ| ಪಾರ್ಕಿಂಗ್ ವಿಚಾರಕ್ಕೆ ಮದುವೆ ಮನೆಯಲ್ಲಿ ಗುಂಡಿನ ದಾಳಿ; ಇಬ್ಬರು ಸಾವು, ಐವರಿಗೆ ಗಾಯ


