“ಶಾಸಕಾಂಗ ಮತ್ತು ಕಾರ್ಯಾಂಗದ ಕಾರ್ಯಗಳಲ್ಲಿ ನಾವು ಹಸ್ತಕ್ಷೇಪ ಮಾಡುತ್ತಿದ್ದೇವೆ ಎಂಬ ಆರೋಪವಿದೆ” ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್ ಗವಾಯಿ ಸೋಮವಾರ (ಏ.21) ನ್ಯಾಯಾಂಗದ ಮೇಲಿನ ಇತ್ತೀಚಿನ ದಾಳಿಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ದದ ಪ್ರತಿಭಟನೆಗಳ ಸಂದರ್ಭದಲ್ಲಿ ನಡೆದ ಹಿಂಸಾಚಾರದ ತನಿಖೆ ಕೋರಿ ಸಲ್ಲಿಸಲಾದ ಹೊಸ ಅರ್ಜಿಯನ್ನು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೂ ಒಳಗೊಂಡ ಸುಪ್ರೀಂ ಕೋರ್ಟ್ ಪೀಠ ವಿಚಾರಣೆಗೆ ಪರಿಗಣಿಸುತ್ತಿರುವಾಗ ನ್ಯಾಯಮೂರ್ತಿ ಗವಾಯಿ ಅವರು ಈ ಹೇಳಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ನಂತರದ ಹಿಂಸಾಚಾರದ ಹಿನ್ನೆಲೆ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲು ಕೋರಿದ್ದ ಇಬ್ಬರ ಪರವಾಗಿ 2021ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವಕೀಲ ವಿಷ್ಣುಶಂಕರ್ ಜೈನ್, ಮಂಗಳವಾರ ಹೊಸ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಪೀಠಕ್ಕೆ ಮನವಿ ಮಾಡಿದ್ದಾರೆ.
2021ರ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿದೆ ಮತ್ತು ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಹಿಂಸಾಚಾರದ ಘಟನೆಗಳನ್ನು ಎತ್ತಿ ತೋರಿಸುವ ಹೊಸ ಅರ್ಜಿಯ ವಿಚಾರಣೆಯೂ ನಡೆಯಲಿದೆ ಎಂದು ಜೈನ್ ತಿಳಿಸಿದ್ದಾರೆ.
“ನಾಳೆಯ ವಿಚಾರಣೆಗೆ ಪಟ್ಟಿಯಾಗಿರುವುದರಲ್ಲಿ 42ನೆಯದ್ದು ಪಶ್ಚಿಮ ಬಂಗಾಳ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಗೆ ಸಂಬಂಧಿಸಿದೆ. ಆ ಅರ್ಜಿಯನ್ನು ನಾನು ಸಲ್ಲಿಸಿದ್ದೇನೆ. ಆ ಅರ್ಜಿಯಲ್ಲಿ, ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಡೆದಿರುವ ಕೆಲವು ಹಿಂಸಾಚಾರದ ಘಟನೆಗಳನ್ನು ಹೊರತರಲು ನಿರ್ದೇಶನಗಳು ಮತ್ತು ರಾಷ್ಟ್ರಪತಿ ಜಾರಿ ಕೋರಿ ನಾನು ಅರ್ಜಿ ಸಲ್ಲಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.
ಬಂಗಾಳದಲ್ಲಿ ಅರೆಸೈನಿಕ ಪಡೆಗಳ ನಿಯೋಜನೆ ಮತ್ತು ತಕ್ಷಣದ ಕ್ರಮ ಅಗತ್ಯ ಎಂದು ಜೈನ್ ವಾದಿಸಿದ್ದಾರೆ.
ಬಾಹ್ಯ ಆಕ್ರಮಣ ಮತ್ತು ಆಂತರಿಕ ಅಡಚಣೆಗಳಿಂದ ರಾಜ್ಯಗಳನ್ನು ರಕ್ಷಿಸುವುದು ಕೇಂದ್ರದ ಕರ್ತವ್ಯಕ್ಕೆ ಸಂಬಂಧಿಸಿದ ಸಂವಿಧಾನದ 355ನೇ ವಿಧಿಯನ್ನು ಅವರು ವಕೀಲ ಜೈನ್ ಉಲ್ಲೇಖಿಸಿದ್ದು, ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಸುಪ್ರೀಂ ಕೋರ್ಟ್ ವರದಿಯನ್ನು ಕೇಳಬಹುದು ಎಂದಿದ್ದಾರೆ.
“2021ರ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಈ ಹಿಂದೆ ನೋಟಿಸ್ ಜಾರಿ ಮಾಡಿತ್ತು. ವಿಷಯ ಬಂದಾಗ, ಹಿಂಸಾಚಾರ ಹೇಗೆ ನಡೆಯಿತು ಎಂಬುದನ್ನು ನಾನು ವಿವರಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಜುಲೈ 2021ರಲ್ಲಿ, ಸುಪ್ರೀಂ ಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದೆ. ಇದು ರಾಜ್ಯದಲ್ಲಿ ಸಶಸ್ತ್ರ/ಅರೆಸೈನಿಕ ಪಡೆಗಳನ್ನು ನಿಯೋಜಿಸಲು ಕೇಂದ್ರಕ್ಕೆ ನಿರ್ದೇಶನವನ್ನು ಕೋರಿದೆ. ಈ ಅರ್ಜಿ ಸಂಬಂಧ ಕೇಂದ್ರ ಸರ್ಕಾರ, ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಹೊಸದಾಗಿ ಜಾರಿಗೆ ತಂದ ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಪ್ರತಿಭಟನೆ ವೇಳೆ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಎರಡು ಪ್ರತ್ಯೇಕ ಅರ್ಜಿಗಳನ್ನೂ ಸಲ್ಲಿಸಲಾಗಿದೆ.


