ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ 28 ಜನರು ಪ್ರಾಣ ಕಳೆದುಕೊಂಡಿರುವ ಹಿನ್ನೆಲೆ, ಭಯೋತ್ಪಾದನೆ ವಿರುದ್ಧ ಬಲವಾದ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಜಮ್ಮು ಕಾಶ್ಮೀರದ ಹಲವಾರು ರಾಜಕೀಯ ಪಕ್ಷಗಳು ಬುಧವಾರ (ಏ.23) ‘ಕಾಶ್ಮೀರ ಬಂದ್’ಗೆ ಕರೆ ನೀಡಿವೆ.
ಆಡಳಿತರೂಢ ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್‌ಸಿ) ಪಕ್ಷವು ಭಯೋತ್ಪಾದಕ ದಾಳಿಯಲ್ಲಿ ಸಾವಿಗೀಡಾದವರು ಮತ್ತು ಅವರ ದುಖಃತಪ್ತ ಕುಟುಂಬಗಳಿಗೆ ಬೆಂಬಲ ಸೂಚಿಸುವ ಸಂಕೇತವಾಗಿ ಬಂದ್ ಘೋಷಣೆ ಮಾಡಲಾಗಿದೆ. ಅದನ್ನು ಸಂಪೂರ್ಣ ಯಶಸ್ವಿಗೊಳಿಸುವಂತೆ ಜನರಿಗೆ ಮನವಿ ಮಾಡಿದೆ.
“ಈ ಬಂದ್ ಕೇವಲ ಒಂದು ಪ್ರತಿಭಟನೆಯಲ್ಲ, ಬದಲಾಗಿ ಅರ್ಥಹೀನ ಹಿಂಸಾಚಾರದ ವಿರುದ್ಧ ನೋವು ಮತ್ತು ಆಕ್ರೋಶದ ಸಾಮೂಹಿಕ ಅಭಿವ್ಯಕ್ತಿಯಾಗಿದೆ” ಎಂದು ಜೆಕೆಎನ್‌ಸಿ ಒತ್ತಿ ಹೇಳಿದೆ.
“ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಪಕ್ಷವು ತೀವ್ರವಾಗಿ ಖಂಡಿಸುತ್ತದೆ. ಅಧ್ಯಕ್ಷರ ಸೂಚನೆಯ ಮೇರೆಗೆ, ಪಕ್ಷವು ಕಾಶ್ಮೀರ ಬಂದ್ ಅನ್ನು ಬೆಂಬಲಿಸುತ್ತದೆ. ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಕರೆ ನೀಡಿರುವ ಈ ಬಂದ್ ಸಂಪೂರ್ಣ ಯಶಸ್ವಿಯಾಗುವಂತೆ ಸಹಕರಿಸಲು ನಾವು ಜಮ್ಮು ಕಾಶ್ಮೀರದ ಜನರಿಗೆ ಮನವಿ ಮಾಡುತ್ತೇವೆ” ಎಂದು ಜೆಕೆಎನ್‌ಸಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದೆ.
On the instruction of the Party President, JKNC joins the collective call for a bandh in strong condemnation of the Pahalgam terror attack. We appeal to the people of J&K to ensure the hartal called by religious and social leaders is a complete success.
— JKNC (@JKNC_) April 22, 2025
ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಪ್ರತಿಕ್ರಿಯೆ
ಜಮ್ಮು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೂಡ ಭಯೋತ್ಪಾದಕ ದಾಳಿಯಲ್ಲಿ ಸಾವಿಗೀಡಾದವರ ಕುಟುಂಬಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಿದ್ದಾರೆ ಮತ್ತು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.
“ಇದು ನಮ್ಮೆಲ್ಲರ ಮೇಲಿನ ದಾಳಿ” ಎಂದು ಕರೆದಿರುವ ಮೆಹಬೂಬಾ ಮುಫ್ತಿ “ದಿ ಚೇಂಬರ್ ಅಂಡ್ ಬಾರ್ ಅಸೋಸಿಯೇಷನ್ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲಿನ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸಿ ನಾಳೆ ಸಂಪೂರ್ಣ ಬಂದ್‌ಗೆ ಕರೆ ನೀಡಿದೆ. ಕ್ರೂರ ದಾಳಿಯಲ್ಲಿ ಸಾವನ್ನಪ್ಪಿದ ಮುಗ್ಧ ಜೀವಗಳಿಗೆ ಗೌರವ ಸಲ್ಲಿಸುವ ಸಂಕೇತವಾಗಿ ಈ ಬಂದ್‌ಗೆ ಬೆಂಬಲ ನೀಡಲು ಎಲ್ಲಾ ಕಾಶ್ಮೀರಿಗಳಿಗೆ ನಾನು ಮನವಿ ಮಾಡುತ್ತೇನೆ. ಇದು ಕೇವಲ ಕೆಲವು ಆಯ್ದ ಜನರ ಮೇಲಿನ ದಾಳಿಯಲ್ಲ, ಇದು ನಮ್ಮೆಲ್ಲರ ಮೇಲಿನ ದಾಳಿ. ಜನರ ದುಃಖ ಮತ್ತು ಆಕ್ರೋಶದ ಜೊತೆ ನಾವೂ ಇದ್ದೇವೆ. ಅಮಾಯಕರ ಹತ್ಯಾಕಾಂಡವನ್ನು ಖಂಡಿಸಿ ಈ ಬಂದ್‌ಗೆ ಸಂಪೂರ್ಣ ಬೆಂಬಲ ನೀಡುತ್ತೇವೆ” ಎಂದು ಮುಫ್ತಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
The Chamber & Bar Association Jammu has called for a complete shutdown tomorrow in protest against the horrific militant attack on tourists. I appeal all Kashmiris to unite in solidarity to support this bandh as a mark of respect for the innocent lives lost in the brutal assault…
— Mehbooba Mufti (@MehboobaMufti) April 22, 2025
ಬಂದ್‌ಗೆ ಜೆಕೆಎಸ್‌ಎ ಬೆಂಬಲ
ಜಮ್ಮು ಕಾಶ್ಮೀರ ವಿದ್ಯಾರ್ಥಿ ಸಂಘ (ಜೆಕೆಎಸ್ಎ) ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ‘ಜಮ್ಮು ಮತ್ತು ಕಾಶ್ಮೀರದ ಆತ್ಮದ ಮೇಲಿನ ದಾಳಿ’ ಎಂದು ಕರೆದಿದ್ದು, ಬಂದ್‌ಗೆ ತನ್ನ ಬೆಂಬಲ ವ್ಯಕ್ತಪಡಿಸಿದೆ.
“ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ, ದಿ ಚೇಂಬರ್ ಅಂಡ್ ಬಾರ್ ಅಸೋಸಿಯೇಷನ್ ಜಮ್ಮು ನಾಳೆ ಕರೆ ನೀಡಿರುವ ಬಂದ್‌ಗೆ ಜೆಕೆಎಸ್ಎ ಸಂಪೂರ್ಣ ಬೆಂಬಲ ನೀಡುತ್ತದೆ. ಈ ದುರಂತ ದಾಳಿ ಕೇವಲ ಕೆಲವು ವ್ಯಕ್ತಿಗಳ ಮೇಲಿನ ದಾಳಿಯಲ್ಲ; ಇದು ಜಮ್ಮು ಮತ್ತು ಕಾಶ್ಮೀರದ ಆತ್ಮದ ಮೇಲಿನ ದಾಳಿಯಾಗಿದೆ” ಎಂದು ಜೆಕೆಎಸ್ಎ ಎಕ್ಸ್‌ನಲ್ಲಿ ಬರೆದುಕೊಂಡಿದೆ.
JKSA fully supports the bandh called by the Chamber & Bar Association Jammu tomorrow, in response to the Terrorist Attack on tourists in Pahalgam. This tragic assault is not just an attack on a few individuals; it is an assault on the very soul of Jammu & Kashmir. @ANI @PTI_News
— J&K Students Association (@JKSTUDENTSASSO) April 22, 2025
ಬಂದ್ ಬೆಂಬಲಿಸಿದ ಹುರಿಯತ್ ಕಾನ್ಫರೆನ್ಸ್
ಆಲ್ ಪಾರ್ಟೀಸ್ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್ ಉಮರ್ ಫಾರೂಕ್, ಜಮ್ಮು ಕಾಶ್ಮೀರದ ಜನರು ಬಂದ್ ಬೆಂಬಲಿಸಬೇಕು ಮತ್ತು ಘೋರ ಕೃತ್ಯದ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಬೇಕು ಎಂದು ಮನವಿ ಮಾಡಿದ್ದಾರೆ.
“ಯಾರು ಮುಗ್ದರನ್ನು ಕೊಂದಿದ್ದಾರೋ.. ಅವರು ಇಡೀ ಮಾನವಕುಲವನ್ನುಕೊಂದಂತೆ. ಪ್ರವಾಸಿಗರನ್ನು ಅತ್ಯಂತ ಭೀಕರ ರೀತಿಯಲ್ಲಿ ನಿರ್ದಯವಾಗಿ ಕೊಂದಿರುವುದು ಕಾಶ್ಮೀರದ ರಕ್ತಸಿಕ್ತ ಇತಿಹಾಸದಲ್ಲಿ ಮತ್ತೊಂದು ಹತ್ಯಾಕಾಂಡದ ದಿನ. ಕಾಶ್ಮೀರದ ಜನರಿಗೆ ಇಂತಹ ದುರಂತಗಳ ನೋವು ಮತ್ತು ದುಃಖ ತಿಳಿದಿದೆ. ಶಾಂತಿ, ಸದ್ಭಾವನೆ ಮತ್ತು ಮಾನವೀಯ ಮೌಲ್ಯಗಳನ್ನು ಹೊಂದಿರುವ ಇಸ್ಲಾಂ ಧರ್ಮ ಇಂತಹ ಭೀಕರತೆಯನ್ನು ಒಪ್ಪುವುದಿಲ್ಲ. ಜಮ್ಮು ಕಾಶ್ಮೀರದ ಇಸ್ಲಾಮಿಕ್ ಸಮೂಹವು ಮುತಾಹಿದಾ ಮಜ್ಲಿಸ್ ಉಲೇಮಾ (ಎಂಎಂಯು) ಮೂಲಕ ಸಾವಿಗೀಡಾದವರ ಕುಟುಂಬಗಳ ಜೊತೆಗೆ ನಿಲ್ಲಲಿದೆ. ಜಮ್ಮು ಕಾಶ್ಮೀರದ ಜನರು ನಾಳೆ ಬಂದ್ ಮೂಲಕ ಈ ಘೋರ ಅಪರಾಧವನ್ನು ಶಾಂತಿಯುತವಾಗಿ ಪ್ರತಿಭಟಿಸುವಂತೆ ಮನವಿ ಮಾಡುತ್ತೇವೆ” ಎಂದು ಮಿರ್ವೈಜ್ ಫಾರೂಕ್ ಮಂಗಳವಾರ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
Whoever kills an innocent soul…it is as if he had slain mankind entirely”
﴿مَنْ قَتَلَ نَفْسًا بِغَيْرِ نَفْسٍ…فَكَأَنَّمَا قَتَلَ النَّاسَ جَمِيعًا﴾ (Al Quran)
Another day of carnage in the blood soaked history of Kashmir when visiting tourists in a most gruesome manner…— Mirwaiz Umar Farooq (@MirwaizKashmir) April 22, 2025
ಭಯೋತ್ಪಾದಕ ದಾಳಿಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಹಲವಾರು ಸ್ಥಳಗಳಲ್ಲಿ ಮಂಗಳವಾರ ರಾತ್ರಿ ಮೇಣದ ಬತ್ತಿ ಮೆರವಣಿಗೆ ನಡೆದಿದೆ. ಬಾರಾಮುಲ್ಲಾ, ಶ್ರೀನಗರ, ಪೂಂಚ್, ಕುಪ್ವಾರಾದ ಮತ್ತು ಅಖೂರ್ ಪ್ರದೇಶದ ಖೋಡ್ ಗ್ರಾಮದಲ್ಲಿ ಸ್ಥಳೀಯರು ಮೇಣದ ಬತ್ತಿ ಮೆರವಣಿಗೆ ನಡೆಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ: ಸಾವಿಗೀಡಾದವರ ಸಂಖ್ಯೆ 28ಕ್ಕೆ ಏರಿಕೆ; ಕರ್ನಾಟಕದ ಇಬ್ಬರು ಬಲಿ


