ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನ ಬೈಸರನ್ ಪ್ರದೇಶದಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರಗಾಮಿ ದಾಳಿಯನ್ನು ವಿರೋಧಿಸಿ ಕಾಶ್ಮೀರ ಜಮ್ಮು ಎರಡೂ ಪ್ರದೇಶಗಳಲ್ಲಿ ಸಂಪೂರ್ಣ ಬಂದ್ ಆಚರಿಸಲಾಗುತ್ತಿದೆ. ಮಂಗಳವಾರ ನಡೆದ ಈ ದಾಳಿಯಲ್ಲಿ 28 ಜನರು ಸಾವನ್ನಪ್ಪಿದ್ದಾರೆ. 35 ವರ್ಷಗಳಲ್ಲೆ ಭಯೋತ್ಪಾದಕ ದಾಳಿಯನ್ನು ವಿರೋಧಿಸಿ ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಮೊದಲ ಬಂದ್ ಇದಾಗಿದೆ. ಪಹಲ್ಗಾಮ್ ದಾಳಿ
ಶ್ರೀನಗರ ಮತ್ತು ಕಣಿವೆಯ ಇತರ ಭಾಗಗಳಲ್ಲಿ ಅಂಗಡಿಗಳು, ವ್ಯಾಪಾರ ಸಂಸ್ಥೆಗಳು ಮತ್ತು ಇಂಧನ ಕೇಂದ್ರಗಳು ಮುಚ್ಚಲ್ಪಟ್ಟವು. ರಸ್ತೆಗಳಲ್ಲಿ ಖಾಸಗಿ ವಾಹನಗಳು ಕಂಡುಬಂದರೂ ಸಾರ್ವಜನಿಕ ಸಾರಿಗೆ ವಿರಳವಾಗಿತ್ತು. ಖಾಸಗಿ ಶಾಲೆಗಳು ಮುಚ್ಚಲ್ಪಟ್ಟಿದ್ದರೂ, ಸರ್ಕಾರಿ ಶಾಲೆಗಳು ತೆರೆದಿದ್ದವು.
ಕಾಶ್ಮೀರ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಕೆಸಿಸಿಐ), ಕಾಶ್ಮೀರ ವ್ಯಾಪಾರಿಗಳು ಮತ್ತು ತಯಾರಕರ ಒಕ್ಕೂಟ (ಕೆಟಿಎಂಎಫ್), ಮುಸ್ಲಿಂ ಧಾರ್ಮಿಕ ಗುಂಪು ಮುತ್ತಹಿದಾ ಮಜ್ಲಿಸ್ ಉಲೇಮಾ (ಎಂಎಂಯು) ಮತ್ತು ಜಮ್ಮು ಕಾಶ್ಮೀರದ ಗ್ರ್ಯಾಂಡ್ ಮುಫ್ತಿ ನಾಸಿರ್-ಉಲ್-ಇಸ್ಲಾಂ ಸೇರಿದಂತೆ ಹಲವಾರು ಗುಂಪುಗಳು ಜಂಟಿಯಾಗಿ ಈ ಬಂದ್‌ಗೆ ಕರೆ ನೀಡಿವೆ.
“ಇಂತಹ ಭಯೋತ್ಪಾದಕ ಮತ್ತು ಹಿಂಸಾಚಾರದ ಕೃತ್ಯಗಳು ಸ್ವೀಕಾರಾರ್ಹವಲ್ಲ. ಇದಕ್ಕೆ ನಮ್ಮ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲ. ಭಯೋತ್ಪಾದನೆಯ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ನಿಂತು ಶಾಂತಿಯುತ ಮತ್ತು ಸಾಮರಸ್ಯದ ಸಮುದಾಯವನ್ನು ಸೃಷ್ಟಿಸಲು ಶ್ರಮಿಸಬೇಕೆಂದು ನಾನು ಒತ್ತಾಯಿಸುತ್ತೇನೆ” ಎಂದು ಕಾಶ್ಮೀರದ ಗ್ರಾಂಡ್ ಮುಫ್ತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಮ್ಮುವಿನಲ್ಲಿಯೂ ಸಹ, ಬಂದ್‌ಗೆ ಬಲವಾದ ಬೆಂಬಲ ದೊರೆಯಿತು. ಜಮ್ಮು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯಕ್ಷ ಅರುಣ್ ಗುಪ್ತಾ, ಜಮ್ಮು ಬಾರ್ ಅಸೋಸಿಯೇಷನ್ ಜೊತೆಗೆ ಸಂಪೂರ್ಣ ಬಂದ್‌ಗೆ ಕರೆ ನೀಡಿದ್ದಾರೆ. ಬಂದ್‌ನಲ್ಲಿ ಜಮ್ಮು ನಗರ ಮತ್ತು ಇತರ ಪ್ರಮುಖ ಪ್ರದೇಶಗಳಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದವು.
ಹಲವಾರು ರಾಜಕೀಯ ನಾಯಕರು ಮತ್ತು ಪಕ್ಷಗಳು ಸಹ ಬಂದ್‌ಗೆ ತಮ್ಮ ಬೆಂಬಲವನ್ನು ನೀಡಿವೆ. ಅವರಲ್ಲಿ ಪೀಪಲ್ಸ್ ಕಾನ್ಫರೆನ್ಸ್ (ಪಿಸಿ) ಅಧ್ಯಕ್ಷ ಮತ್ತು ಶಾಸಕ ಹಂದ್ವಾರ, ಸಜಾದ್ ಗನಿ ಲೋನ್ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೂಡ ಸೇರಿದ್ದಾರೆ. ಅವರು ಸಂತ್ರಸ್ತರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಈ ಘೋರ ಕೃತ್ಯವನ್ನು ಖಂಡಿಸಿದ್ದಾರೆ.
ಕಣಿವೆಯಾದ್ಯಂತ, ವಿಶೇಷವಾಗಿ ಪ್ರಮುಖ ಪ್ರವಾಸಿ ತಾಣಗಳ ಸುತ್ತಲೂ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಮಾತ್ರ ತೆರೆದಿಡಲು ಅನುಮತಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಅದಾಗ್ಯೂ, ಬಂದ್‌ನ ಪರಿಣಾಮ ಕಣಿವೆಯ ಬಹುತೇಕ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ ಎಂದು ವರದಿಯಾಗಿದೆ.
ಜನರು, ರಾಜಕೀಯ ಪಕ್ಷಗಳು, ಧಾರ್ಮಿಕ ಸಂಸ್ಥೆಗಳು ಮತ್ತು ನಾಗರಿಕ ಸಮಾಜ ಗುಂಪುಗಳ ಸಾಮೂಹಿಕ ಧ್ವನಿಯು ಭಯೋತ್ಪಾದನೆಯ ವಿರುದ್ಧ ಬಲವಾದ ಸಂದೇಶವನ್ನು ರವಾನಿಸಿದೆ ಎಂದು ವರದಿಗಳು ಉಲ್ಲೇಖಿಸಿವೆ. ಪಹಲ್ಗಾಮ್ ದಾಳಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಪಹಲ್ಗಾಮ್ ಭಯೋತ್ಪಾದಕ ದಾಳಿ: ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದೇನು?

