ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ 28 ಜನರನ್ನು ಹತ್ಯೆಗೈದಿರುವುದನ್ನು ಖಂಡಿಸಿ ಇಂದು (ಬುಧವಾರ) ಜಮ್ಮು ಕಾಶ್ಮೀರದಾದ್ಯಂತ ಬಂದ್ ಆಚರಿಸಲಾಗಿದೆ.
ವರದಿಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ವಿವಿಧ ಪ್ರದೇಶಗಳು ಇಂದು ಬೆಳಿಗ್ಗೆಯಿಂದಲೇ ಸಂಪೂರ್ಣ ಸ್ಥಬ್ದವಾಗಿದ್ದು, ಶಾಲಾ, ಕಾಲೇಜುಗಳು, ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದೆ.
ಇಂದಿನ ಬಂದ್‌ಗೆ ಜಮ್ಮು ಕಾಶ್ಮೀರದ ಆಡಳಿತರೂಢ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ), ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಾದ ಪಿಡಿಪಿ, ಹುರಿಯತ್ ಕಾನ್ಫರೆನ್ಸ್, ವಿದ್ಯಾರ್ಥಿ ಸಂಘಟನೆ ಜೆಕೆಎಸ್‌ಎ ಸಂಪೂರ್ಣ ಬೆಂಬಲ ಸೂಚಿಸಿವೆ.
ಪಿಡಿಪಿ ಪಕ್ಷ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ನೇತೃತ್ವದಲ್ಲಿ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಮೌನ ಪ್ರತಿಭಟನಾ ಜಾಥಾ ನಡೆಸಿದೆ. ಶ್ರೀನಗರದ ಶೇರ್-ಎ-ಕಾಶ್ಮೀರ್ ಪಾರ್ಕ್ ಬಳಿಯ ಪಿಡಿಪಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಜಮಾಯಿಸಿ ಜನರು, “ಇದು ನಮ್ಮೆಲ್ಲರ ಮೇಲಿನ ದಾಳಿ”, “ಅಮಾಯಕರನ್ನು ಕೊಲ್ಲುವುದು ಭಯೋತ್ಪಾದಕ ಕೃತ್ಯ” ಮತ್ತು “ಅಮಾಯಕ ಹತ್ಯೆಗಳನ್ನು ನಿಲ್ಲಿಸಿ” ಎಂಬ ಫಲಕಗಳನ್ನು ಹಿಡಿದುಕೊಂಡು ನಗರದ ಲಾಲ್ ಚೌಕ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
Killing innocents is an act of terror. Jammu & Kashmir stands against it. This is an attack on all of us!
— J&K PDP (@jkpdp) April 23, 2025
ಘಟನೆ ಸಂಬಂಧ ದೇಶದ ಜನರ ಕ್ಷಮೆ ಯಾಚಿಸಿದ ಮೆಹಬೂಬಾ ಮುಫ್ತಿ, “ಇದರಿಂದ ಕಾಶ್ಮೀರದ ಜನತೆ ನಾಚಿಕೆಪಡುವಂತಾಗಿದೆ. ತಮ್ಮವರನ್ನು ಕಳೆದುಕೊಂಡ ಜನರ ಜೊತೆ ದುಖಃದಲ್ಲಿ ಕಾಶ್ಮೀರದ ಜನತೆಯೂ ಇದ್ದಾರೆ” ಎಂದು ಹೇಳಿದ್ದಾರೆ.
ಜನರು ಸ್ವಯಂಪ್ರೇರಿತರಾಗಿ ಇಂದು ಬಂದ್ ಆಚರಿಸಿದ್ದಾರೆ. ಜಮ್ಮು ನಗರದಲ್ಲಿ ಅಗತ್ಯ ಸಾಮಗ್ರಿಗಳ ಮಾರಾಟ ಹೊರತು, ಇತರ ಎಲ್ಲಾ ವಹಿವಾಟುಗಳು ಬಂದ್ ಆಗಿವೆ. ಸರ್ಕಾರ ಶಿಕ್ಷಣ ಸಂಸ್ಥೆಗಳು ತೆರೆದಿದ್ದು, ಖಾಸಗಿ ಶಾಲೆಗಳು ಮುಚ್ಚಿವೆ. ಜಮ್ಮು ಮತ್ತು ಕಾಶ್ಮೀರದ ಖಾಸಗಿ ಶಾಲೆಗಳ ಸಂಘ (ಪಿಎಸ್‌ಎಜೆಕೆ) ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ವರದಿಗಳು ಹೇಳಿದೆ.
ಭಯೋತ್ಪಾದಕ ದಾಳಿಯನ್ನು ಖಂಡಿಸಿ ಜಮ್ಮು ಕಾಶ್ಮೀರದ ವಿವಿಧ ಭಾಗಗಳಲ್ಲಿ ಜನರು ನಿನ್ನೆ (ಮಂಗಳವಾರ) ರಾತ್ರಿ ಮೇಣದ ಬತ್ತಿ ಮೆರವಣಿಗೆ ನಡೆಸಿದ್ದಾರೆ.
ಪಹಲ್ಗಾಮ್ | ಪ್ರವಾಸಿಗರ ರಕ್ಷಣೆಗಾಗಿ ಭಯೋತ್ಪಾದಕರ ವಿರುದ್ಧ ಹೋರಾಡುತ್ತಲೆ ಮೃತಪಟ್ಟ ಆದಿಲ್ ಹುಸೇನ್


