ರಸ್ತೆಯಲ್ಲಿ ಲಾರಿಗಳ ಓಡಾಟದ ವಿಚಾರವಾಗಿ ನಡೆದ ವಾಗ್ವಾದದ ವೇಳೆ ಗಣಿ ಮಾಲಿಕ ಹಾಡಹಗಲೆ ಕ್ಯಾಮೆರಾ ಮುಂದೆಯೆ ರೈತರೊಬ್ಬರನ್ನು ಗುಂಡಿಕ್ಕಿದ ಘಟನೆ ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ಬುಧವಾರ ನಡೆದಿದೆ. ಘಟನೆಯ ವಿಡಿಯೊ ಇದೀಗ ವೈರಲ್ ಆಗಿದ್ದು ವ್ಯಾಪಕ ಆಕ್ರೋಶ ಹುಟ್ಟುಹಾಕಿದೆ. ಮಾಜಿ MLC ಒಬ್ಬರ ಸಂಬಂಧಿಕರ ಮಾಲೀಕತ್ವದ ಕ್ರಷರ್ ಕಂಪನಿಗಾಗಿ ಇದನ್ನು ಮಾಡಲಾಗಿದೆ ಎಂದು ಅರೋಪಿಸಲಾಗಿದೆ. ಚಿಕ್ಕಬಳ್ಳಾಪುರ
ಗಣಿಗಾರಿಕೆ ಲಾರಿಗಳ ಓಡಾಟ ಮತ್ತು ರಸ್ತೆ ನಿರ್ಮಾಣ ವಿರೋಧಿಸಿ ಫೆಬ್ರುವರಿಯಲ್ಲಿ ಮಂಚೇನಹಳ್ಳಿಯಲ್ಲಿ ರೈತ ಸಂಘ, ಮಂಚೇನಹಳ್ಳಿ ತಾಲ್ಲೂಕು ಪರಿಸರ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿದ್ದರು. ಈ ವೇಳೆ ಬೆಟ್ಟದ ತಪ್ಪಲಿನಲ್ಲಿ ಮುನೇಶ್ವರ ಗುಡಿ, ತಿಮ್ಮರಾಯನಗುಡಿ ಇದೆ. ಸ್ವಚ್ಛಗಾಳಿ, ನೀರು, ಮೇವು ನೀಡುತ್ತಿರುವ ನಮ್ಮ ಊರಿನ ಬೆಟ್ಟ ಗುಡ್ಡಗಳಲ್ಲಿ ಗಣಿಗಾರಿಕೆ ಮಾಡಲು ಬಿಡುವುದಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದರು. ದಾರಿ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ಸಭೆಗಳು ಸಹ ನಡೆದಿದ್ದವು ಎಂದು ಪ್ರಜಾವಾಣಿ ವರದಿ ಮಾಡಿದೆ.
ಅದಾಗ್ಯೂ, ಬುಧವಾರ ಗಣಿ ಮಾಲಿಕ ಸಕಲೇಶ್ ಮತ್ತು ಆತನ ಕಡೆಯವರು ಜೆಸಿಬಿಗಳ ಮೂಲಕ ರಸ್ತೆ ನಿರ್ಮಿಸಲು ಮುಂದಾಗಿದ್ದರು. ಈ ವೇಳೆ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಆರೋಪಿ ಸಕಲೇಶ್, ರಿವಾಲ್ವರ್ ಹಿಡಿದು ‘ಯಾರು ಬರುತ್ತಿರೊ ಬರ್ರೊ’ ಎನ್ನುತ್ತ ರೈತ ರವಿ ಮೇಲೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.
ಮಂಚೇನಹಳ್ಳಿ ತಾಲ್ಲೂಕಿನ ಬಂಡಿರಾಮನಹಳ್ಳಿ, ಕನಗಾನಕೊಪ್ಪ, ರಾಯನಕಲ್ಲು ಗ್ರಾಮಗಳ ಸಮೀಪದ ಬೆಟ್ಟಗುಡ್ಡಗಳಲ್ಲಿ ಕಲ್ಲುಗಣಿಗಾರಿಕೆ ಹಾಗೂ ಗಣಿಗಾರಿಕೆ ಲಾರಿಗಳ ಓಡಾಟಕ್ಕೆ ದಾರಿ ಮಾಡುವ ವಿಚಾರವಾಗಿ ಈ ಗಲಾಟೆ ನಡೆದಿತ್ತು ಎಂದು ವರದಿಯಾಗಿದೆ. ಗುಂಡಿನ ದಾಳಿಯಿಂದಾಗಿ ರೈತ ರವಿ ಅವರ ತೊಡೆಗೆ ಗಾಯಗಾಳಾಗಿವೆ ಎಂದು ವರದಿಯಾಗಿದೆ.
ಗಾಯಾಳುವನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಂಚೇನಹಳ್ಳಿ ಮತ್ತು ಗೌರಿಬಿದನೂರು ಪೊಲೀಸರು ಭೇಟಿ ನೀಡಿದ್ದು ಬಿಗುವಿನ ವಾತಾವರಣವಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಇಡೀ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಶ್ರೀನಿವಾಸ್ ಸಿ.ವಿ., ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾನೂನು ಸು ವ್ಯವಸ್ಥೆ ಇದೆಯೋ ಸತ್ತು ಹೋಗಿದೆಯೆ? ಎಂದು ಪ್ರಶ್ನಿಸಿದ್ದಾರೆ.
“ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನಲ್ಲಿ ಮಟ ಮಟ ಮಧ್ಯಾಹ್ನ ಹಾಡು ಆಗಲೇ ಅನ್ನದಾತನ ಮೇಲೆ ಗುಂಡಿನ ಸುರಿಮಳೆ ನಡೆಯುತ್ತಿದೆ. ಪೊಲೀಸ್ ಇಲಾಖೆಯ ಮೇಲೆ ಇದ್ದಂತಹ ನಂಬಿಕೆ ರೈತಾಪಿ ವರ್ಗಕ್ಕೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದಕ್ಕೆ ಕಾರಣ ಕಳೆದ ಐದಾರು ವರ್ಷಗಳಿಂದ ಇದೇ ಗ್ರಾಮದ ರೈತಾಪಿ ವರ್ಗ ಮತ್ತು ಕ್ರೇಶರ್ ಮಾಲೀಕರ ನಡುವೆ ನಡೆಯುತ್ತಿದ್ದಂತಹ ಗಲಾಟೆ ವಾಕ್ಸಮರಗಳು. ಇಂದು ಬಂದೂಕಿನ ಗುಂಡಿನ ಸದ್ದಿನವರಿಗೂ ಕಾಲಿಟ್ಟಿದೆ ಎಂದರೆ ಬೇಸರವಾಗುತ್ತದೆ ಮತ್ತು ಅಸಹ್ಯವಾಗುತ್ತದೆ” ಎಂದು ಹೇಳಿದ್ದಾರೆ.
“ಮಾಜಿ MLC ಒಬ್ಬರ ಸಂಬಂಧಿಕರ ಮಾಲೀಕತ್ವದ ಕ್ರಷರ್ ಕಂಪನಿಗೆ ಇಲ್ಲಿನ ಎಲ್ಲಾ ಇಲಾಖೆಯ ಆಡಳಿತ ವ್ಯವಸ್ಥೆಗಳು ಒಂದಾಗಿ ನೇರವಾಗಿ ಮತ್ತು ಪರೋಕ್ಷವಾಗಿ ಸಹಾಯ ಮಾಡಿದ್ದಾರೆಯೆ ಹೊರತು ಇಲ್ಲಿನ ರೈತರ ಪರ ಎಂದು ಕೆಲಸ ಮಾಡಿಲ್ಲದಿರುವುದು ಎದ್ದು ಕಾಣಿಸುತ್ತದೆ. ಏಕೆಂದರೆ ಈ ಸಮಸ್ಯೆ ಉದ್ಭವಿಸಿದ ದಿನವೇ ಇಲ್ಲಿನ ಪೊಲೀಸ್ ಇಲಾಖೆಯಾಗಲಿ ಕಂದಾಯ ಇಲಾಖೆಯಾಗಲಿ ಕ್ರಮ ಕೈಗೊಂಡಿದ್ದರೆ ಇವತ್ತಿನ ಘಟನೆ ನಡೆಯುತ್ತಿರಲಿಲ್ಲ” ಎಂದು ಅವರು ಹೇಳಿದ್ದಾರೆ.
“ದುಷ್ಟ ವ್ಯವಸ್ತೆಯ ಕೈಗೆ ಅಧಿಕಾರ ಕೊಟ್ಟು ಪೊಲೀಸ್ ವ್ಯವಸ್ಥೆ ಮತ್ತು ಕಂದಾಯ ಇಲಾಖೆಯನ್ನು ತಮ್ಮ ಕೈ ಗೊಂಬೆಗಳಂತೆ ಮಾಡಿಕೊಂಡಿದ್ದಾರೆ. ಹೊಲಸು ರಾಜಕೀಯ ಪಕ್ಷಗಳು ಅಕ್ರಮ ಕ್ರಷರ್ ಮಾಲೀಕರ ಎಂಜಲು ಕಾಸಿಗೆ ಅವರು ಒಡ್ಡುವಂತಹ ಆಸೆ ಆಮೀಷಗಳಿಗೆ ಜಿಲ್ಲೆಯ ಅಮಾಯಕ ರೈತಪಿ ವರ್ಗದ ಮತ್ತು ಸಾರ್ವಜನಿಕರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಜಿಲ್ಲೆಯ ವ್ಯವಸ್ಥೆಯ ಮೇಲೆ ಅಸಹ್ಯವಾಗುತ್ತದೆ” ಎಂದು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಗುಪ್ತಚರ ಎಲ್ಲಿದೆ? ಕಣ್ಗಾವಲು ಎಲ್ಲಿದೆ? ಜೇಮ್ಸ್ ಬಾಂಡ್ ದೋವಲ್ ಎಲ್ಲಿದ್ದಾರೆ?: ಪ್ರಿಯಾಂಕ್ ಪ್ರಶ್ನೆ
ಗುಪ್ತಚರ ಎಲ್ಲಿದೆ? ಕಣ್ಗಾವಲು ಎಲ್ಲಿದೆ? ಜೇಮ್ಸ್ ಬಾಂಡ್ ದೋವಲ್ ಎಲ್ಲಿದ್ದಾರೆ?: ಪ್ರಿಯಾಂಕ್ ಪ್ರಶ್ನೆ

