ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಕರೇಗುಟ್ಟಾ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಬೃಹತ್ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಮೂವರು ನಕ್ಸಲರು ಸಾವಿಗೀಡಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಗುರುವಾರ (ಏ.24) ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಏಪ್ರಿಲ್ 21ರಿಂದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಛತ್ತೀಸ್‌ಗಢದ ನಾರಾಯಣಪುರದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಐವರು ನಕ್ಸಲರು ಶರಣಾದ ಬಳಿಕ ಏಪ್ರಿಲ್ 21 ಸೋಮವಾರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಇಂಡೋ ಟಿಬೆಟಿಯನ್ ಗಡಿ ಪೊಲೀಸರು (ಐಟಿಬಿಪಿ) ತಿಳಿಸಿದ್ದಾರೆ.
ಇಲ್ಲಿಯವರೆಗೆ, ಎನ್‌ಕೌಂಟರ್ ನಡೆದ ಸ್ಥಳದಿಂದ ಮೂವರು ನಕ್ಸಲರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಭೀಕರ ಗುಂಡಿನ ಚಕಮಕಿಯಲ್ಲಿ ಹಲವಾರು ಇತರ ಮಾವೋವಾದಿಗಳು ಸಾವನ್ನಪ್ಪಿರುವ ಶಂಕೆಯಿದೆ ಎಂದು ವರದಿಗಳು ಹೇಳಿವೆ.
ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಪ್ರಾರಂಭಿಸಲಾದ ಅತಿದೊಡ್ಡ ದಂಗೆ ನಿಗ್ರಹ ಕಾರ್ಯಾಚರಣೆಗಳಲ್ಲಿ ಒಂದಾದ ಈ ಕಾರ್ಯಾಚರಣೆಯಲ್ಲಿ, ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ), ಬಸ್ತಾರ್ ಫೈಟರ್ಸ್, ವಿಶೇಷ ಕಾರ್ಯಪಡೆ (ಎಸ್‌ಟಿಎಫ್), ರಾಜ್ಯ ಪೊಲೀಸರ ಎಲ್ಲಾ ಘಟಕಗಳು, ಹಾಗೆಯೇ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಅದರ ಕಮಾಂಡೋ ಬೆಟಾಲಿಯನ್ಸ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಸೇರಿದಂತೆ ವಿವಿಧ ಘಟಕಗಳಿಗೆ ಸೇರಿದ ಸುಮಾರು 10,000 ಭದ್ರತಾ ಸಿಬ್ಬಂದಿ ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ.
ಈ ಕಾರ್ಯಾಚರಣೆಗೆ ತೆಲಂಗಾಣ ಪೊಲೀಸರು ಕೂಡ ಸಹಕಾರ ನೀಡಿದ್ದಾರೆ ಎಂದು ತಿಳಿದು ಬಂದಿದೆ.
“ಮಾವೋವಾದಿಗಳ ಪ್ರಬಲ ಮಿಲಿಟರಿ ಗುಂಪಾದ ಬೆಟಾಲಿಯನ್ ನಂ.1 ಮತ್ತು ತೆಲಂಗಾಣ ರಾಜ್ಯ ಮಾವೋವಾದಿಗಳ ಸಮಿತಿಯ ಹಿರಿಯ ಕೇಡರ್‌ಗಳ ಉಪಸ್ಥಿತಿಯ ಬಗ್ಗೆ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಇದು ಇನ್ನೂ ಹಲವು ದಿನಗಳವರೆಗೆ ಮುಂದುವರೆಯಲಿದೆ ಎಂದು ವರದಿಗಳು ಹೇಳಿವೆ.
“ದಟ್ಟ ಕಾಡು ಮತ್ತು ಬೆಟ್ಟಗಳಿಂದ ಆವೃತವಾದ ಪ್ರದೇಶವನ್ನು ಮಾವೋವಾದಿಗಳ ಬೆಟಾಲಿಯನ್ ನಂ. 1 ರ ನೆಲೆ ಎಂದು ಪರಿಗಣಿಸಲಾಗಿದೆ” ಎಂದು ವರದಿ ತಿಳಿಸಿದೆ.
“ಐವರು ಸಕ್ರಿಯ ನಕ್ಸಲರಾದ ದಾಸ್ರಿ ಧ್ರುವ (26), ಚನ್ನು ಗೋಟಾ (28), ಜ್ಯೋತಿ ವಡ್ಡೆ (19), ಸೀತಾ ವಡ್ಡೆ (19), ಸುನೀತಾ ವಡ್ಡೆ (25) ಶರಣಾಗಿದ್ದಾರೆ. ಅವರಿಗೆ ತಲಾ 50,000 ರೂಪಾಯಿ ಚೆಕ್ ಹಸ್ತಾಂತರಿಸಲಾಗಿದೆ,” ಎಂದು ಐಟಿಬಿಪಿ ಹೇಳಿದೆ.
ನಕ್ಸಲರ ಶರಣಾಗತಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಗಂಗಾರಾಮ್ ಚವಾಣ್, “ಶರಣಾದ ನಕ್ಸಲರು ಸರ್ಕಾರದ ಶರಣಾಗತಿ ನೀತಿಯಡಿಯಲ್ಲಿ ಎಲ್ಲಾ ಪ್ರಯೋಜನಗಳನ್ನು ಪಡೆಯಲಿದ್ದಾರೆ” ಎಂದಿದ್ದಾರೆ.
“ಶರಣಾದ ನಕ್ಸಲರು ಮಾದ್ (ಛತ್ತೀಸ್‌ಗಢ) ಮತ್ತು ನುವಾಪಾ (ಒಡಿಶಾ) ವಿಭಾಗಗಳಿಂದ ಬಂದವರು. ಸರ್ಕಾರದ ಎಲ್ಲಾ ಸವಲತ್ತುಗಳನ್ನು ಅವರಿಗೆ ನೀಡಲಾಗುವುದು. ಶರಣಾದವರಲ್ಲಿ ವಿವಿಧ ಶ್ರೇಣಿಯ ನಕ್ಸಲರಿದ್ದಾರೆ. ಕೆಲವು ನಕ್ಸಲರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಣೆಯಾಗಿದ್ದರೆ, ಇನ್ನು ಕೆಲವರಿಗೆ 8 ಲಕ್ಷ ರೂಪಾಯಿ ಬಹುಮಾನ ಘೋಷಣೆಯಾಗಿತ್ತು ಎಂದು ಸುಕ್ಮಾ ಎಸ್‌ಪಿ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ, ದಂತೇವಾಡದಲ್ಲಿ ಮೂವರು ನಗದು ಬಹುಮಾನ ಘೋಷಣೆಯಾದವರು ಸೇರಿದಂತೆ 26 ಮಾವೋವಾದಿಗಳು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅಧಿಕಾರಿಗಳ ಮುಂದೆ ಶರಣಾಗಿದ್ದರು.


