ಪಹಲ್ಗಾಮ್ ಭಯೋತ್ಪಾದಕ ದಾಳಿ ಹಿನ್ನೆಲೆ ಕೇಂದ್ರ ಸರ್ಕಾರ ಇಂದು (ಏ.24) ಸರ್ವಪಕ್ಷ ಸಭೆ ಕರೆದಿದೆ ಎಂದು ವರದಿಯಾಗಿದೆ.
ಸಂಜೆ 6 ಗಂಟೆಯಿಂದ ಸಂಸತ್ತಿನ ಅನೆಕ್ಸ್‌ನಲ್ಲಿ ಸಭೆ ಪ್ರಾರಂಭವಾಗುವ ನಿರೀಕ್ಷೆಯಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆಯ ಅಧ್ಯಕ್ಷತೆ ವಹಿಸುವ ಸಾಧ್ಯತೆ ಇದ್ದು, ಪ್ರತಿ ಪಕ್ಷದಿಂದ ಒಬ್ಬೊಬ್ಬ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.
ಗೃಹ ಸಚಿವ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅವರು ಈ ವಿಷಯದ ಬಗ್ಗೆ ವಿವಿಧ ಪಕ್ಷಗಳ ನಾಯಕರೊಂದಿಗೆ ಮಾತನಾಡಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ಮೂಲಗಳನ್ನು ಉಲ್ಲೇಖಿಸಿ ತಿಳಿಸಿವೆ. ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಸಭೆಯಲ್ಲಿ ಭಾಗವಹಿಸಲು ನಾಯಕರನ್ನು ಆಹ್ವಾನಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಸಭೆಯಲ್ಲಿ, ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಕ್ರೂರ ಭಯೋತ್ಪಾದಕ ದಾಳಿಯ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿವಿಧ ಪಕ್ಷಗಳ ನಾಯಕರಿಗೆ ವಿವರಿಸಲಿದ್ದಾರೆ ಎನ್ನಲಾಗಿದೆ. ಸಣ್ಣ ಪಕ್ಷಗಳನ್ನು ಸಭೆಗೆ ಆಹ್ವಾನಿಸಲಾಗಿಲ್ಲ ಎಂದು ತಿಳಿದುಬಂದಿದೆ.
ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿಯ ಸಭೆ ನಡೆದು, ಪಾಕಿಸ್ತಾನದೊಂದಿಗೆ ಸಂಬಂಧ ಕಡಿದುಕೊಳ್ಳುವ ಬಗ್ಗೆ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.


