ದಾವಣಗೆರೆ: ಏ.26ರಂದು ನಡೆಯುತ್ತಿರುವ ಸಂವಿಧಾನ ಸಂರಕ್ಷಕರ ಸಮಾವೇಶದ ಮಹತ್ವವನ್ನು ತಿಳಿಸುವುದಕ್ಕಾಗಿ ಏ.14ರಿಂದ ಪ್ರಾರಂಭವಾಗಿರುವ ದೇಶಪ್ರೇಮಿ ಯುವಾಂದೋಲನ ಬೈಕ್ ಜಾಥಾದ ಕೊನೆ ದಿನವಾದ ನಾಳೆ (ಏ.25) ದಾವಣಗೆರೆ ಪ್ರವೇಶಿಸಲಿದ್ದು, ಅಲ್ಲಿನ ಯುವಕ-ಯುವತಿಯರು ಅದ್ದೂರಿ ಸ್ವಾಗತ ಕೊರಲಿದ್ದಾರೆ ಎಂದು ಎದ್ದೇಳು ಕರ್ನಾಟಕದ ಸೆಂಟ್ರಲ್ ವರ್ಕಿಂಗ್ ಕಮಿಟಿ ಸದಸ್ಯರಾದ ತಾರ ರಾವ್ ತಿಳಿಸಿದ್ದಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು, ಏ.14ರಿಂದ ಈ ಜಾಥಾದಲ್ಲಿ ಭಾಗವಹಿಸಿದ ಯುವಕ-ಯುವತಿಯರ ಜೊತೆ ದಾವಣಗೆರೆಯ ಹಲವಾರು ಯುವಕ ಯುವತಿಯರು ಜೊತೆಗೂಡಿ ನಗರದಾದ್ಯಂತ ನಾಳೆ (ಏ.25) ಬೃಹತ್ ಬೈಕ್ ರ್ಯಾಲಿ ನಡೆಸಲಿದ್ದು 26ರಂದು ನಡೆಯುವ ಸಂವಿಧಾನ ಸಂರಕ್ಷಕರ ಸಮಾವೇಶದ ಕುರಿತು ಪ್ರಚಾರ ನಡೆಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗದಿಂದ ಸುಮಾರು 10,000ಕ್ಕೂ ಹೆಚ್ಚು ಸಂವಿಧಾನ ಸಂರಕ್ಷಕ ಹೋರಾಟಗಾರರು ಭಾಗವಹಿಸಲಿದ್ದಾರೆ. ಈ ಸಮಾವೇಶದ ಕುರಿತು ಜನರಿಗೆ ಮಾಹಿತಿ ಮತ್ತು ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಇದೇ ಏ.14ರಿಂದ ಬೈಕ್ ಯಾನವು ಅಂಬೇಡ್ಕರ್ ಭೇಟಿ ನೀಡಿದ ಸ್ಥಳವಾದ ಗುಲ್ಬರ್ಗ ಜಿಲ್ಲೆಯ ವಾಡಿಯಿಂದ ಪ್ರಾರಂಭವಾಗಿದ್ದು ಅದೀಗ ಅದು ರಾಜ್ಯದ ಸುಮಾರು 20 ಜಿಲ್ಲೆಗಳ ಮೂಲಕ ಹಾದು, ಸರಿ ಸುಮಾರು 2000 ಕಿ.ಮೀ. ಕ್ರಮಿಸಿ ನಾಳೆ ದಾವಣಗೆರೆಗೆ ಆಗಮಿಸಲಿದೆ ಎಂದಿದ್ದಾರೆ.
ಜಾಥಾದಲ್ಲಿ ಹೇಮಂತ ಹಾಸನ, ಗೀತಾ ಗುಲ್ಬರ್ಗ, ಕೌಶಲ್ಯ ಮಂಡ್ಯ, ಸರೋವರ ಬೆಂಗಳೂರು, ಮರಿಸ್ವಾಮಿ ಕಟ್ಟಿಮನಿ ಬೆಂಗಳೂರು, ರವಿ ನವಲಹಳ್ಳಿ ರಾಯಚೂರು ಜಿಲ್ಲೆ, ಉಮೇಶ್ ಬಡಗಿ ಕೊಪ್ಪಳ, ಶರಣು ಈಳಿಗನೂರು (ಕೊಪ್ಪಳ), ಯಮುನಾ ಚಳ್ಳೂರು(ಕೊಪ್ಪಳ), ಯಮನೂರ ಈಳಿಗನೂರು(ಕೊಪ್ಪಳ), ದುರ್ಗೆಶ್ ಕೆ. ಬರಗೂರು(ಕೊಪ್ಪಳ), ರಾಜೇಂದ್ರ ರಾಜವಾಳ (ಗುಲ್ಬರ್ಗಾ), ಶಾಂತಾ ಗುಲ್ಬರ್ಗಾ, ಕೇಶವ್ ಕೋಲಾರ ಭಾಗವಹಿಸಿದ್ದು, ಇವರೆಲ್ಲರಿಗೂ ಎದ್ದೇಳು ಕರ್ನಾಟಕವು ಹೃದಯತುಂಬಿ ವಂದಿಸುತ್ತದೆ ಮತ್ತು ನಾಳಿನ ಅದ್ದೂರಿ ಸ್ವಾಗತ ಕಾರ್ಯಕ್ರಮದಲ್ಲಿ ನಾವು ಹಲವರು ಭಾಗಿಯಾಗಿ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗುತ್ತೇವೆ ಎಂದು ಅವರು ತಿಳಿಸಿದರು.
ಜಾಥಾವು ದಾರಿಯುದ್ದಕ್ಕೂ ಕಾರ್ಯಕ್ರಮದ ಬಗ್ಗೆ ಮಾತ್ರ ಜನರಲ್ಲಿ ಜಾಗೃತಿ ಮೂಡಿಸಲಿಲ್ಲ, ಬದಲಾಗಿ ಇಂದಿನ ಯುವಕರು–ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿತು ಮತ್ತು ಅದರ ಪರಿಹಾರಕ್ಕೆ ಹೋರಾಟವೊಂದೇ ದಾರಿ ಎಂದು ಜನರಿಗೆ ತಿಳಿಸಿತು. ಇಂದಿನ ಶಿಕ್ಷಣವು ಅನುಕೂಲಸ್ಥರಿಗೆ ಸಿಗುವ ಐಶಾರಿಮಿ ವಸ್ತುವಲ್ಲ, ಬದಲಿಗೆ ದೇಶದ ಎಲ್ಲರಿಗೂ ಸಿಗಬೇಕಾದ ಮೂಲಭೂತ ಹಕ್ಕು. ಆದರೆ ಈಗ ಶಿಕ್ಷಣದ ಕನಸು ಕಮರುತ್ತಿದೆ. ಸರಕಾರಿ ಶಾಲಾ ಕಾಲೇಜುಗಳು ಮುಚ್ಚುತ್ತಿವೆ. ಫೀಸು ಡೊನೇಷನ್ ಎಂಬ ಭೂತವು ಅಡ್ಡಾದಿಡ್ಡಿಯಾಗಿ ಕುಣಿಯುತ್ತಿದೆ. ಅದರ ಕಾಲ ಕೆಳಗೆ ಸಿಕ್ಕು ದಮನಿತರು ಬಡವರು ನರಳುತ್ತಿದ್ದಾರೆ ಎಂಬುದನ್ನು ಜಾಥಾವು ಜನರಿಗೆ ತಿಳಿಸಿತು ಎಂದು ತಾರಾ ರಾವ್ ಹೇಳಿದರು.
ಹಾಗೆಯೇ ಶಿಕ್ಷಣದ ವ್ಯಾಪಾರದ ಚಕ್ರವ್ಯೂಹವನ್ನು ಬೇಧಿಸಿ, ವಿದ್ಯಾರ್ಥಿಗಳು ಉದ್ಯೋಗ ಸಿಗುತ್ತದೆಂಬ ಬಹುನಿರೀಕ್ಷೆಯಿಂದ ತಮ್ಮ ಪದವಿಯನ್ನು ಮುಗಿಸುತ್ತಿದ್ದಾರೆ. ಆದರೆ ಭಾರತದಲ್ಲಿ 45 ವರ್ಷದಲ್ಲೇ ಐತಿಹಾಸಿಕ ನಿರುದ್ಯೋಗ ಏರಿಕೆ ಕಂಡಿದೆ ಎಂದು ವರದಿಗಳು ಹೇಳುತ್ತಿವೆ. ಕೇವಲ 60 ಸಾವಿರ ಉದ್ಯೋಗ ನೇಮಕಾತಿಯ ಕರೆಗೆ 48 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು ಇತ್ತೀಚೆಗೆ ದೊಡ್ಡ ಸುದ್ದಿಯಾಗಿತ್ತು. ಪ್ರಪಂಚದ ಅತ್ಯಂತ ಹೆಚ್ಚು ಯುವಜನರನ್ನು ಹೊಂದಿರುವ ಭಾರತದ ಯುವಜನರ ಕೌಶಲ್ಯ, ಶ್ರಮ ಮತ್ತು ಪ್ರತಿಭೆಗಳು ವ್ಯರ್ಥವಾಗುತ್ತಿದೆ. ಇದರ ಜೊತೆಗೆ ಸಮಾಜದಲ್ಲಿ ದ್ವೇಷಕ್ಕೆ ಬದಲಾಗಿ ಪ್ರೀತಿ ಹಂಚೋಣ ಎಂದು ಕರೆ ನೀಡಿತು. ನಾವು ಬರೀ ಮಾತನಾಡುತ್ತಿಲ್ಲ. ಉಚಿತ ಗುಣಮಟ್ಟದ ಶಿಕ್ಷಣಕ್ಕಾಗಿ, ಸುಭದ್ರ ಉದ್ಯೋಗ, ಸುಸ್ಥಿರ ಪರಿಸರಕ್ಕಾಗಿ ಪ್ರೀತಿ ಮತ್ತು ನೆಮ್ಮದಿ ತುಂಬಿದ ನಾಡಿಗಾಗಿ ರಚನಾತ್ಮಕ ಕೆಲಸವನ್ನು ಮಾಡುತ್ತಿದ್ದೇವೆ. ಇದು ಒಂದು ದಿನದ ಹೋರಾಟವಲ್ಲ, ಯುವಜನರ ಭವಿಷ್ಯಕ್ಕಾಗಿನ ಬದ್ಧತೆ ಇದಾಗಿದೆ. ನೀವು ನಮ್ಮೊಡನೆ ಸೇರಿದಾಗ ನಮ್ಮ ದನಿ ದೊಡ್ಡದಾಗುತ್ತದೆ. ನಾವು ಒಟ್ಟಿಗೆ ಕೂಗಿದಾಗ ದೇಶದ ಉದ್ದಗಲಕ್ಕೂ ದನಿ ಪ್ರತಿಧ್ವನಿಯಾಗುತ್ತದೆ ಎಂದು ಜನತೆಗೆ ಜಾಥಾವು ಕರೆ ಕೊಟ್ಟಿತು ಎಂದು ಅವರು ಹೇಳಿದರು.
26ರ ಸಂವಿಧಾನ ಸಂರಕ್ಷಕರ ಸಮಾವೇಶದ ವೇಳಾಪಟ್ಟಿ ಬಿಡುಗಡೆ ಮಾಡಿದ ಅಧ್ಯಕ್ಷೀಯ ಮಂಡಳಿ


