ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ-2019 ‘ತಲಾಖ್-ಇ-ಬಿದತ್’ ಹೆಸರಿನ ದಿಢೀರ್ ಮತ್ತು ಬದಲಿಸಲಾಗದ ವಿಚ್ಛೇದನ ನೀಡುವ ಪದ್ದತಿಗೆ ಮಾತ್ರ ಅನ್ವಯಿಸುತ್ತದೆ, ಅಲ್ಲದೆ ಇಸ್ಲಾಂನಲ್ಲಿ ‘ತಲಾಖ್-ಇ-ಅಹ್ಸಾನ್’ ಎಂದು ಕರೆಯಲಾಗುವ ಸಾಂಪ್ರಾದಯಿಕ ವಿಚ್ಛೇದನಕ್ಕೆ ಅಲ್ಲ ಎಂದು ಬಾಂಬೆ ಹೈಕೋರ್ಟ್ ಬುಧವಾರ (ಏ.23) ಸ್ಪಷ್ಟಪಡಿಸಿರುವುದಾಗಿ barandbench.com ವರದಿ ಮಾಡಿದೆ.
ದಿಢೀರ್ ತ್ರಿವಳಿ ತಲಾಖ್ ನಿಷೇಧಿಸುವ ಕಾಯ್ದೆಯಡಿ ಮುಸ್ಲಿಂ ವ್ಯಕ್ತಿ ಮತ್ತು ಅವರ ಪೋಷಕರ ವಿರುದ್ಧ ದಾಖಲಾಗಿದ್ದ ಪೊಲೀಸ್ ಪ್ರಕರಣವನ್ನು ರದ್ದುಗೊಳಿಸುವಾಗ ನ್ಯಾಯಾಲಯ ಈ ಹೇಳಿಕೆ ನೀಡಿದೆ.
ತಲಾಖ್-ಎ-ಅಹ್ಸಾನ್ ವಿಧಾನವನ್ನು ಅನುಸರಿಸಿ ಗಂಡ ತನ್ನ ಹೆಂಡತಿಗೆ ವಿಚ್ಛೇದನ ನೀಡಿದ್ದರು. ಈ ವಿಧಾನದಡಿಯಲ್ಲಿ ತಲಾಖ್ ಅನ್ನು ಒಮ್ಮೆ ಉಚ್ಚರಿಸಲಾಗುತ್ತದೆ ಮತ್ತು ವಿಚ್ಛೇದನ ಜಾರಿಗೆ ಬರಲು 90 ದಿನಗಳ ಕಾಯುವ ಅವಧಿ ಇರುತ್ತದೆ. ಇಸ್ಲಾಮಿಕ್ ಕಾನೂನಿನಡಿಯ ಈ ವಿಚ್ಛೇದನ ಮಾರ್ಗವು ಇನ್ನೂ ಕಾನೂನು ಬದ್ದವಾಗಿ ಇದೆ.
ತಲಾಖ್-ಎ-ಅಹ್ಸಾನ್ ವಿಧಾನದಲ್ಲಿ ವಿಚ್ಛೇದ ನೀಡಿದ್ದ ವ್ಯಕ್ತಿ ಮತ್ತು ಅವರ ಪೋಷಕರ ಮೇಲೆ 2019ರ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದರು.
ನ್ಯಾಯಮೂರ್ತಿ ವಿಭಾ ಕಂಕಣವಾಡಿ ಮತ್ತು ನ್ಯಾಯಮೂರ್ತಿ ಸಂಜಯ್ ದೇಶಮುಖ್ ಅವರಿದ್ದ ಪೀಠವು, ಈ ಪ್ರಕರಣದ ವಿಚ್ಛೇದನದ ರೂಪವು ನಿಷೇಧಿತ ವರ್ಗದ ಅಡಿಯಲ್ಲಿ ಬರುವುದಿಲ್ಲ ಎಂದು ಹೇಳಿದೆ.
ಪ್ರಕರಣದಲ್ಲಿ, ದಂಪತಿ 2022ರಲ್ಲಿ ವಿವಾಹವಾಗಿದ್ದರು. ಬಳಿಕ ಕೆಲ ತಿಂಗಳುಗಳ ಕಾಲ ಭಾರತದ ವಿವಿಧ ನಗರಗಳಲ್ಲಿ ಒಟ್ಟಿಗೆ ವಾಸವಿದ್ದರು. ವೈವಾಹಿಕ ಭಿನ್ನಾಭಿಪ್ರಾಯಗಳನ್ನು ಉಂಟಾದ ನಂತರ, ಪತಿ ಡಿಸೆಂಬರ್ 2023ರಲ್ಲಿ ಸಾಕ್ಷಿಗಳ ಸಮ್ಮುಖದಲ್ಲಿ ಒಂದು ಬಾರಿ ತಲಾಖ್ ಎಂದು ಉಚ್ಚರಿಸಿದ್ದರು. ಅದನ್ನು ಅನುಸರಿಸಿ ಔಪಚಾರಿಕ ನೋಟಿಸ್ ನೀಡಿದ್ದರು.
90 ದಿನಗಳ ಕಾಯುವ ಅವಧಿಯಲ್ಲಿ ದಂಪತಿ ಮತ್ತೆ ಒಂದಾಗಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ವಿಚ್ಛೇದನವು ಊರ್ಜಿತವಾಗಿತ್ತು.
ಆದರೆ, ವಿಚ್ಛೇದಿತ ಮಹಿಳೆ ಜಲಗಾಂವ್‌ನ ಭೂಸಾವಲ್ ಬಜಾರ್ ಪೇಠ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. 2019ರ ಕಾಯ್ದೆಯಡಿಯಲ್ಲಿ ವಿಚ್ಛೇದನವು ಕಾನೂನುಬಾಹಿರವಾಗಿದೆ. ತನ್ನ ಅತ್ತೆ ಮಾವ ಕೂಡ ನನಗೆ ತಲಾಖ್ ನೀಡಿರುವುದನ್ನು ಬೆಂಬಲಿಸಿದ್ದಾರೆ. ಅವರನ್ನೂ ಕೂಡ ತಪ್ಪಿತಸ್ಥರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದರು.
ತಲಾಖ್-ಎ-ಅಹ್ಸಾನ್ ವಿಧಾನವನ್ನು ತಾನು ಅನುಸರಿಸಿದ್ದೇನೆ ಎಂದು ಮಹಿಳೆಯ ವಿಚ್ಛೇದಿತ ಪತಿ ನ್ಯಾಯಾಲಯದಲ್ಲಿ ವಾದಿಸಿದ್ದರು. ಇದು ತಲಾಖ್-ಎ-ಬಿದತ್ (ದಿಢೀರ್ ತ್ರಿವಳಿ ತಲಾಖ್) ನಂತೆ ಅಲ್ಲ. ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ತಲಾಖ್-ಎ-ಅಹ್ಸಾನ್ ಅನ್ನು ಮಾನ್ಯ ಮತ್ತು ಅಂಗೀಕೃತ ವಿಚ್ಛೇದನದ ರೂಪವೆಂದು ಗುರುತಿಸಿದ ಹಿಂದಿನ ನ್ಯಾಯಾಲಯದ ತೀರ್ಪುಗಳನ್ನು ಅವರ ವಕೀಲರು ಉಲ್ಲೇಖಿಸಿದ್ದರು. ಈ ನಿರ್ಧಾರದಲ್ಲಿ ನಮ್ಮದು ಯಾವುದೇ ಪಾತ್ರವಿಲ್ಲ ಎಂದು ಅತ್ತೆ-ಮಾವ ಹೇಳಿದ್ದರು.
ತಲಾಖ್-ಎ-ಅಹ್ಸಾನ್ ಮೂಲಕ ವಿಚ್ಛೇಧನ ನೀಡಿದ್ದರೂ, ಅದನ್ನು ವಾಪಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ಇದು 2019ರ ಕಾನೂನಿನ ಉಲ್ಲಂಘಣೆಯಾಗಿದೆ ಎಂದು ಮಹಿಳೆ ವಾದಿಸಿದ್ದರು.
ಆದರೆ, ಹೈಕೋರ್ಟ್ ಮಹಿಳೆಯ ವಾದವನ್ನು ಒಪ್ಪಿಲ್ಲ. ಯಾವುದೇ ಮಾತುಕತೆಗಳು ಇಲ್ಲದೆ, ತಕ್ಷಣ ತಲಾಖ್ ನೀಡುವುದನ್ನು ಮಾತ್ರ ನಿಷೇಧಿಸಲಾಗಿದೆ. ಅರ್ಜಿದಾರರು ವಿಚಾರಣೆ ಎದುರಿಸಬೇಕು ಎಂದು ಸೂಚಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ. ಆದ್ದರಿಂದ ವಿಚಾರಣೆ ಮತ್ತು ಎಫ್‌ಐಆರ್ ರದ್ದುಗೊಳಿಸಲಾಗುತ್ತಿದೆ ಎಂದಿದೆ.
ಪಹಲ್ಗಾಮ್ ದಾಳಿ | ಸರ್ವಪಕ್ಷ ಸಭೆಯಿಂದ ಸಣ್ಣ ಪಕ್ಷಗಳನ್ನು ಕೈಬಿಟ್ಟ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿದ ಓವೈಸಿ


