ದೆಹಲಿಯ ಹಾಲಿ ಲೆಫ್ಟಿನೆಂಟ್ ಗವರ್ನರ್ (ಎಲ್-ಜಿ) ವಿ.ಕೆ ಸಕ್ಸೇನಾ ಅವರು 24 ವರ್ಷಗಳ ಹಿಂದೆ ಹೂಡಿರುವ ಮಾನನಷ್ಟ ಮೊಕದ್ದಮೆ ಸಂಬಂಧ ‘ನರ್ಮದಾ ಬಚಾವೋ ಆಂದೋಲನ’ದ ನಾಯಕಿ, ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ಪೊಲೀಸರು ಶುಕ್ರವಾರ (ಏ.25) ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಪ್ರೊಬೇಷನ್ ಬಾಂಡ್‌ಗಳನ್ನು ಸಲ್ಲಿಸದ ಕಾರಣ ಮೇಧಾ ಪಾಟ್ಕರ್ ವಿರುದ್ಧ ದೆಹಲಿ ನ್ಯಾಯಾಲಯ ಬುಧವಾರ (ಏ.23) ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು.
2001ರಲ್ಲಿ ಪಾಟ್ಕರ್ ವಿರುದ್ಧ ಸಕ್ಸೇನಾ ಪ್ರಕರಣ ದಾಖಲಿಸಿದ್ದರು. ಆಗ ಅವರು ಅಹಮದಾಬಾದ್ ಮೂಲದ ಎನ್‌ಜಿಒ ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್‌ನ ಮುಖ್ಯಸ್ಥರಾಗಿದ್ದರು.
ನವೆಂಬರ್ 25, 2000ದಲ್ಲಿ “ದೇಶಭಕ್ತನ ನಿಜವಾದ ಮುಖ”ಎಂಬ ಶೀರ್ಷಿಕೆಯಡಿಯಲ್ಲಿ ಪಾಟ್ಕರ್ ಅವರು ನೀಡಿದ್ದ ಪತ್ರಿಕಾ ಪ್ರಕಟಣೆಯ ವಿರುದ್ಧ ಮಾನಹಾನಿ ಆರೋಪ ಮಾಡಿ ಸಕ್ಸೇನಾ ಪ್ರಕರಣ ದಾಖಲಿಸಿದ್ದರು.
“ಹವಾಲಾ ವಹಿವಾಟಿನಲ್ಲಿ ಮುಳುಗಿರುವ ವಿ.ಕೆ ಸಕ್ಸೇನಾ, ಸ್ವತಃ ಮಾಲೆಗಾಂವ್‌ಗೆ ಬಂದು ಎನ್‌ಬಿಎಯನ್ನು ಹೊಗಳಿ ರೂ. 40,000ರ ಚೆಕ್ ಅನ್ನು ನೀಡಿದ್ದಾರೆ. ಲೋಕ ಸಮಿತಿಯು ತ್ವರಿತವಾಗಿ ರಸೀದಿ ಮತ್ತು ಪತ್ರವನ್ನು ಕಳುಹಿಸಿದೆ. ಅದು ಪ್ರಾಮಾಣಿಕತೆ ಮತ್ತು ಉತ್ತಮ ದಾಖಲೆ ಇಟ್ಟುಕೊಳ್ಳುವುದನ್ನು ತೋರಿಸುತ್ತದೆ. ಆದರೆ, ಚೆಕ್ ನಗದೀಕರಿಸಿಲ್ಲ, ಬೌನ್ಸ್ ಆಗಿದೆ. ವಿಚಾರಣೆಯಲ್ಲಿ, ಖಾತೆಯು ಅಸ್ತಿತ್ವದಲ್ಲಿಲ್ಲ ಎಂದು ಬ್ಯಾಂಕ್ ವರದಿ ಮಾಡಿದೆ” ಎಂದು ಪಾಟ್ಕರ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದರು.
ಪಾಟ್ಕರ್ ಅವರ ಪ್ರಕಟಣೆ ದುರುದ್ದೇಶಪೂರಿತವಾಗಿದ್ದು, ಸಕ್ಸೇನಾ ಅವರ ಒಳ್ಳೆಯ ಹೆಸರನ್ನು ಹಾಳುಮಾಡುವ ಗುರಿಯನ್ನು ಹೊಂದಿತ್ತು. ಇದರಿಂದ ಅವರ ಸ್ಥಾನಮಾನ ಮತ್ತು ಕ್ರೆಡಿಟ್‌ಗೆ ಗಣನೀಯ ಹಾನಿಯುಂಟಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದರು.
“ಆರೋಪಿಯ ಹೇಳಿಕೆಗಳು ದೂರುದಾರರನ್ನು ಹೇಡಿ, ದೇಶಪ್ರೇಮಿ ಅಲ್ಲ ಮತ್ತು ಹವಾಲಾ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದಿದೆ. ಇದು ಮಾನಹಾನಿಕರ ಮಾತ್ರವಲ್ಲದೆ, ದೂರದಾರರ ಬಗ್ಗೆ ನಕಾರಾತ್ಮಕ ಭಾವನೆ ಹುಟ್ಟಿಸುತ್ತದೆ”ಎಂದಿದ್ದರು.
ಮೇ 24, 2023ರಂದು, ದೆಹಲಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪಾಟ್ಕರ್ ಅವರ ಹೇಳಿಕೆಗಳನ್ನು ಮಾನನಷ್ಟಕರವೆಂದು ಪರಿಗಣಿಸಿ ಜುಲೈ 1ರಂದು ಅವರಿಗೆ ಐದು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆದಾಗ್ಯೂ, ಸಾಕೇತ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ಎಎಸ್‌ಜೆ) ವಿಶಾಲ್ ಸಿಂಗ್ ಅವರು ಕಳೆದ ವರ್ಷ ಜುಲೈ 29ರಂದು ಶಿಕ್ಷೆಯನ್ನು ಅಮಾನತುಗೊಳಿಸಿ ಮೇಧಾ ಪಾಟ್ಕರ್ ಅವರಿಗೆ ಜಾಮೀನು ನೀಡಿದ್ದರು.
ನಂತರ, 1 ಲಕ್ಷ ರೂ. ದಂಡವನ್ನು ಪಾವತಿಸುವ ಷರತ್ತಿನೊಂದಿಗೆ ಮೇಧಾ ಪಾಟ್ಕರ್ ಉತ್ತಮ ನಡವಳಿಕೆಯ ಪ್ರೊಬೇಷನ್ ಅನ್ನು ಪಡೆದರು. ಸಾಕೇತ್ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಸಿಂಗ್ ಅವರ ನೇತೃತ್ವದ ಸೆಷನ್ಸ್ ನ್ಯಾಯಾಲಯವು ಏಪ್ರಿಲ್ 8, 2025 ರಂದು ಈ ಸಡಿಲಿಕೆಯನ್ನು ನೀಡಿತ್ತು.
ಈ ರಿಯಾಯಿತಿಯ ಹೊರತಾಗಿಯೂ, ಏಪ್ರಿಲ್ 23 ರಂದು ಪ್ರೊಬೇಷನ್ ಬಾಂಡ್‌ಗಳನ್ನು ಔಪಚಾರಿಕವಾಗಿ ಸಲ್ಲಿಸಲು ಮತ್ತು ದಂಡವನ್ನು ಪಾವತಿಸುವ ಸಲುವಾಗಿ ನ್ಯಾಯಾಲಯಕ್ಕೆ ಹಾಜರಾಗಲು ಪಾಟ್ಕರ್ ವಿಫಲರಾಗಿದ್ದರು. ಅವರ ಗೈರುಹಾಜರಿ ಮತ್ತು ನಿಯಮ ಪಾಲಿಸದ ಕಾರಣ ನ್ಯಾಯಾಲಯವು ದೆಹಲಿ ಪೊಲೀಸ್ ಆಯುಕ್ತರ ಮೂಲಕ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದ ಪ್ರೊಬೇಷನ್ ಬಾಂಡ್ ಜಾರಿಗೊಳಿಸುವ ಪ್ರಕ್ರಿಯೆಗೆ ಎರಡು ವಾರಗಳ ತಡೆ ನೀಡಬೇಕೆಂಬ ಪಾಟ್ಕರ್ ಅವರ ಮನವಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ (ಏ.22) ತಿರಸ್ಕರಿಸಿತ್ತು.
“ಪ್ರೊಬೇಷನ್ ಬಾಂಡ್ ಜಾರಿ ತಡೆಯುವಂತೆ ಕೋರಿರುವ ಮೇಧಾ ಪಾಟ್ಕರ್ ಅರ್ಜಿಯು ನ್ಯಾಯಾಲಯವನ್ನು ಮೋಸಗೊಳಿಸುವ ಉದ್ದೇಶದಿಂದ ಕೂಡಿದೆ” ಎಂದು ಎಎಸ್‌ಜೆ ವಿಶಾಲ್ ಸಿಂಗ್ ಹೇಳಿದ್ದರು.
“ಮುಂದಿನ ದಿನಾಂಕದಂದು, ಅಪರಾಧಿಯು 08/04/2025ರ ಶಿಕ್ಷೆಯ ಆದೇಶದ ನಿಯಮಗಳನ್ನು ಪಾಲಿಸಲು ವಿಫಲವಾದರೆ, ನ್ಯಾಯಾಲಯವು ದಯಾಪರ ಶಿಕ್ಷೆಯನ್ನು ಮರುಪರಿಶೀಲಿಸಬೇಕಾಗುತ್ತದೆ ಮತ್ತು ಶಿಕ್ಷೆಯ ಮೇಲಿನ ಆದೇಶವನ್ನು ಬದಲಾಯಿಸಬೇಕಾಗುತ್ತದೆ” ಎಂದು ಸಾಕೇತ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ಎಎಸ್‌ಜೆ) ವಿಶಾಲ್ ಸಿಂಗ್ ಏಪ್ರಿಲ್ 23ರ ತಮ್ಮ ಆದೇಶದಲ್ಲಿ ಹೇಳಿದ್ದರು.
“ಬಲವಂತದ ಆದೇಶದ ಮೂಲಕ ಅಪರಾಧಿ ಮೇಧಾ ಪಾಟ್ಕರ್ ಅವರನ್ನು ಹಾಜರುಪಡಿಸುವುದನ್ನು ಜಾರಿಗೊಳಿಸುವುದನ್ನು ಬಿಟ್ಟು ನ್ಯಾಯಾಲಯಕ್ಕೆ ಬೇರೆ ದಾರಿಯಿಲ್ಲ” ಎಂದು ನ್ಯಾಯಾಧೀಶ ಸಿಂಗ್ ಹೇಳಿದ್ದರು. ಮುಂದಿನ ದಿನಾಂಕಕ್ಕೆ ದೆಹಲಿ ಪೊಲೀಸ್ ಆಯುಕ್ತರ ಕಚೇರಿಯ ಮೂಲಕ ಅಪರಾಧಿ ಮೇಧಾ ಪಾಟ್ಕರ್ ವಿರುದ್ಧ ಜಾಮೀನುರಹಿತ ಆದೇಶ ಹೊರಡಿಸಿ” ಎಂದಿದ್ದರು.
ನ್ಯಾಯಾಲಯದ ಆದೇಶದಂತೆ ಮೇಧಾ ಪಾಟ್ಕರ್ ವಿರುದ್ಧ ಪೊಲೀಸರು ಬುಧವಾರ (ಏ.23) ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದರು. ಇಂದು ಅವರ ಬಂಧನವಾಗಿದೆ.
ಮಣಿಪುರ | ಕಸ್ಟಡಿ ಸಾವು ಖಂಡಿಸಿ ರಾಜ್ಯ ಬಂದ್‌ಗೆ ಕರೆಕೊಟ್ಟ ಹೋರಾಟಗಾರರು


