ತಮಿಳುನಾಡು ಸರ್ಕಾರದ ಅರಣ್ಯ ಸಚಿವ ಕೆ. ಪೊನ್ಮುಡಿ ಮತ್ತು ವಿದ್ಯುತ್ ಹಾಗೂ ಅಬಕಾರಿ ಇಲಾಖೆ ಸಚಿವ ವಿ. ಸೆಂಥಿಲ್ ಬಾಲಾಜಿ ಭಾನುವಾರ (ಏಪ್ರಿಲ್ 27, 2025) ರಾತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜಭವನದ ಪ್ರಕಟಣೆಯ ಪ್ರಕಾರ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಾಜ್ಯಪಾಲ ಆರ್.ಎನ್. ರವಿ ಅವರಿಗೆ ಇಬ್ಬರು ಸಚಿವರ ರಾಜೀನಾಮೆಯನ್ನು ಅಂಗೀಕರಿಸಲು ಮತ್ತು ಮಾಜಿ ಸಚಿವ ಮನೋ ತಂಗರಾಜ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಶಿಫಾರಸು ಮಾಡಿದ್ದಾರೆ. ಏಪ್ರಿಲ್ 28ರಂದು ರಾಜಭವನದಲ್ಲಿ ನೂತನ ಸಚಿವ ತಂಗರಾಜನ್ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.
ರಾಜೀನಾಮೆ ಬಳಿಕ ಪೊನ್ಮುಡಿ ಅವರ ಖಾತೆಯನ್ನು ಹೈನುಗಾರಿಕೆ ಅಭಿವೃದ್ಧಿ ಸಚಿವ ಆರ್.ಎಸ್. ರಾಜಕನ್ನಪ್ಪನ್ ಅವರಿಗೆ ನೀಡಲಾಗಿದೆ. ಸಾರಿಗೆ ಸಚಿವ ಎಸ್.ಎಸ್. ಶಿವಶಂಕರ್ ವಿದ್ಯುತ್ ಖಾತೆಯನ್ನು ವಹಿಸಿಕೊಂಡಿದ್ದಾರೆ. ವಸತಿ ಮತ್ತು ನಗರಾಭಿವೃದ್ಧಿ ಸಚಿವ ಎಸ್. ಮುತ್ತುಸಾಮಿ ಅವರು ಸೆಂಥಿಲ್‌ಬಾಲಾಜಿ ಅವರು ಹೊಂದಿದ್ದ ಅಬಕಾರಿ ಖಾತೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಸಚಿವರನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡ ನಂತರ ಅವರು ತಮ್ಮ ಹುದ್ದೆಗಳಲ್ಲಿ ಮುಂದುವರಿಯುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂಧಿದ್ದಾರೆ ಎನ್ನಲಾಗಿದೆ.
ಉದ್ಯೋಗಕ್ಕಾಗಿ ಹಣ ಪಡೆದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ಸಂಪುಟಕ್ಕೆ ಮರು ಸೇರ್ಪಡೆಗೊಂಡ ಸೆಂಥಿಲ್ ಬಾಲಾಜಿ ಅವರಿಗೆ ಸುಪ್ರೀಂಕೋರ್ಟ್ ಎರಡು ಆಯ್ಕೆಗಳನ್ನು ನೀಡಿತ್ತು.ಒಂದಾ ತಕ್ಷಣ ಸಚಿವ ಸ್ಥಾನ ತೊರೆದು ಸ್ವಾತಂತ್ರ್ಯ ಅನುಭವಿಸಿ, ಇಲ್ಲ ಮತ್ತೆ ಸಚಿವರಾಗಿ ಜೈಲು ಸೇರಿ ಎಂದು ಖಾರವಾಗಿ ಹೇಳಿತ್ತು.
ಸೆಂಥಿಲ್ ಬಾಲಾಜಿ ಸಚಿವ ಸ್ಥಾನದಿಂದ ಕೆಳಗಿಳಿಯುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಜೂನ್ 2023ರಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ನಂತರ ಅವರು ಖಾತೆ ಇಲ್ಲದ ಸಚಿವರಾಗಿ ಮುಂದುವರಿದಿದ್ದರು. ನಂತರ ಫೆಬ್ರವರಿ 12, 2024ರಂದು ಅವರು ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಸೆಪ್ಟೆಂಬರ್ 26, 2024 ರಂದು ಸುಪ್ರೀಂ ಕೋರ್ಟ್ ಅವರಿಗೆ ಈ ಪ್ರಕರಣದಲ್ಲಿ ಜಾಮೀನು ನೀಡಿದ ನಂತರ ಮತ್ತೆ ಸಂಪುಟ ಸೇರಿದ್ದರು.
ಆದರೆ, ಸುಪ್ರೀಂ ಕೋರ್ಟ್ ಸೆಂಥಿಲ್ ಬಾಲಾಜಿ ಅವರ ಸಂಪುಟ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ನ್ಯಾಯಮೂರ್ತಿಗಳಾದ ಎ.ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಸೆಂಥಿಲ್‌ಬಾಲಾಜಿ ಸಚಿವರಾಗಿ ಮುಂದುವರಿಯುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಮತ್ತು ಅವರು ವಿಚಾರಣೆಯ ಹಳಿ ತಪ್ಪಿಸಬಹುದು ಎಂದು ಏಪ್ರಿಲ್ 23 ರಂದು ಹೇಳಿತ್ತು.
ಸೆಂಥಿಲ್ ಬಾಲಾಜಿ ಸಚಿವರಾಗಿ ಮುಂದುವರಿದಲ್ಲಿ ಜಾಮೀನು ಆದೇಶವನ್ನು ಹಿಂಪಡೆಯುತ್ತೇವೆ. ಅವರಿಗೆ ಜಾಮೀನು ನೀಡಿದ ಕ್ರಮ ನಮ್ಮ ಪ್ರಮಾದ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಅವರಿಗೆ ಅರ್ಹತೆಯ ಮೇಲೆ ಜಾಮೀನು ನೀಡಿಲ್ಲ. ಸಂವಿಧಾನದ 21ನೇ ವಿಧಿಯ ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಪರವಾಗಿ ನ್ಯಾಯಾಲಯ ನಿಂತಿದ್ದರಿಂದ ಜಾಮೀನು ನೀಡಲಾಗಿದೆ ಎಂದು ನ್ಯಾಯಮೂರ್ತಿ ಎ ಎಸ್.ಓಕಾ ಹೇಳಿದ್ದರು.
ಆಕ್ಷೇಪಾರ್ಹ ಹೇಳಿಕೆ
ಶೈವರು, ವೈಷ್ಣವರು ಮತ್ತು ಮಹಿಳೆಯರ ವಿರುದ್ಧ ನೀಡಿದ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ರಿಟ್ ಅರ್ಜಿಯನ್ನು ಕೈಗೆತ್ತಿಕೊಳ್ಳುವಂತೆ ಮದ್ರಾಸ್ ಹೈಕೋರ್ಟ್ ತನ್ನ ರಿಜಿಸ್ಟ್ರಿಗೆ ಸೂಚಿಸಿದ ನಂತರ ಪೊನ್ಮುಡಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಪೊನ್ಮುಡಿ ಅವರ ಅಪರಾಧ ಮತ್ತು ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದ ಸ್ವಾತಂತ್ರ್ಯವನ್ನು ಅವರು ಪ್ರಾಥಮಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದಿದ್ದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎನ್. ಆನಂದ್ ವೆಂಕಟೇಶ್ ಅವರು, ಪೊನ್ಮುಡಿ ವಿರುದ್ಧ ಸ್ವಯಂಪ್ರೇರಿತ ರಿಟ್ ಅರ್ಜಿಯನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶನ ನೀಡಿದ್ದರು.
ಆಕ್ಷೇಪಾರ್ಹ ಹೇಳಿಕೆ ನೀಡಿದ ಪೊನ್ಮುಡಿ ಅವರನ್ನು ಎಲ್ಲಾ ಸಾಂವಿಧಾನಿಕ ಹುದ್ದೆಗಳಿಂದ ಅನರ್ಹಗೊಳಿಸುವಂತೆ ಕೋರಿ ವಕೀಲರು ಸಲ್ಲಿಸಿದ್ದ ಪಿಐಎಲ್ ಸಂಬಂಧ ಪ್ರತಿಕ್ರಿಯಿಸಲು ತಮಿಳುನಾಡು ಸರ್ಕಾರ ಮತ್ತು ಪೊನ್ಮುಡಿ ಅವರಿಗೆ ಜೂನ್ 5ರವರೆಗೆ ನ್ಯಾಯಾಲಯ ಸಮಯ ನೀಡಿತ್ತು.
ಮುಖ್ಯ ನ್ಯಾಯಮೂರ್ತಿ ಕೆ.ಆರ್. ಶ್ರೀರಾಮ್ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ಶಫೀಕ್ ಅವರು ರಾಜ್ಯ ಸರ್ಕಾರಿ ವಕೀಲರಿಗೆ ಗೃಹ ಕಾರ್ಯದರ್ಶಿ ಪರವಾಗಿ ನೋಟಿಸ್ ನೀಡುವಂತೆ ನಿರ್ದೇಶಿಸಿದ್ದರು. ಜೂನ್ 5ರೊಳಗೆ ನೋಟಿಸ್‌ಗೆ ಪ್ರತಿಕ್ರಿಯೆ ನೀಡುವಂತೆ ಪೊನ್ಮುಡಿ ಅವರಿಗೂ ಆದೇಶಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಜೂನ್ 19 ರಂದು ಮತ್ತೆ ಪ್ರಕರಣವನ್ನು ಪಟ್ಟಿ ಮಾಡುವಂತೆ ನ್ಯಾಯಾಧೀಶರು ಹೈಕೋರ್ಟ್ ರಿಜಿಸ್ಟ್ರಿಗೆ ಸೂಚಿಸಿದ್ದರು. ಈ ನಡುವೆ ಪೊನ್ಮುಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


