ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ (ಜೆಎನ್‌ಯುಎಸ್‌ಯು) 2024-25ರ ಚುನಾವಣೆಯಲ್ಲಿ ಎಡ ವಿದ್ಯಾರ್ಥಿಗಳ ಸಂಘಟನೆಗಳ ಮೈತ್ರಿಕೂಟ ನಾಲ್ಕು ಉನ್ನತ ಹುದ್ದೆಗಳಲ್ಲಿ ಮೂರನ್ನು ಗೆಲ್ಲುವ ಮೂಲಕ ತನ್ನ ಭದ್ರಕೋಟೆಯನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಕೂಡ ಪ್ರಮುಖ ಸ್ಥಾನವೊಂದನ್ನು ಗೆದ್ದಿದೆ.
ನಿತೀಶ್ ಕುಮಾರ್ (AISA)ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಮನೀಷಾ (DSF) ಉಪಾಧ್ಯಕ್ಷ ಸ್ಥಾನವನ್ನು ಗೆದ್ದಿದ್ದಾರೆ ಮತ್ತು ಮಂತೆಹಾ ಫಾತಿಮಾ (DSF) ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ. ದಶಕಗಳ ಬಳಿಕ ಎಬಿವಿಪಿ ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಗೆದ್ದುಕೊಂಡಿದೆ. ವೈಭವ್ ಮೀನಾ ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ.
ಮತಗಳ ಎಣಿಕೆ ವೇಳೆ ನಾಲ್ಕೂ ಕೇಂದ್ರಿಯ ಸ್ಥಾನಗಳಲ್ಲಿ ಎಬಿವಿಪಿ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದರು. ಇದು ಎಡ ವಿದ್ಯಾರ್ಥಿ ಒಕ್ಕೂಟದ ಆತಂಕಕ್ಕೆ ಕಾರಣವಾಗಿತ್ತು. ಕೊನೆಗೆ ಎಬಿವಿಪಿ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಹುದ್ದೆಗಳ ಸ್ಪರ್ಧೆಯಲ್ಲಿ ಎಬಿವಿಪಿ ಅಂತಿಮವಾಗಿ ಸೋತರೂ, ಅದರ ಸೋಲಿನ ಅಂತರ ಕಡಿಮೆಯಿದ್ದು, ಇದು ಕ್ಯಾಂಪಸ್‌ನಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ.
ಕ್ಯಾಂಪಸ್ ಹಿಂಸಾಚಾರದಿಂದಾಗಿ ವಿಳಂಬಗೊಂಡಿದ್ದ ಚುನಾವಣೆ, ಏಪ್ರಿಲ್ 25 ರಂದು ನಡೆದಿತ್ತು. ಸುಮಾರು ಶೇ. 70 ರಷ್ಟು ವಿದ್ಯಾರ್ಥಿಗಳು ಮತದಾನ ಮಾಡಿದ್ದರು.
ಸುಮಾರು 5,500 ವಿದ್ಯಾರ್ಥಿಗಳು ತಮ್ಮ ಮತ ಚಲಾಯಿಸಿದ್ದು, ಚತುಷ್ಕೋನ ಸ್ಪರ್ಧೆಯಲ್ಲಿ AISA-DSF, ABVP, ಮತ್ತು NSUI-ಫ್ರಾಟರ್ನಿಟಿ ಮೈತ್ರಿಕೂಟವು ಗೆಲುವಿಗೆ ಪೈಪೋಟಿ ನಡೆಸಿತ್ತು.


