ಹಮ್ದರ್ದ್ ಕಂಪನಿಯನ್ನು ಗುರಿಯಾಗಿಸಿ ಮತ್ತೊಂದು ಕೋಮುದ್ವೇಷದ ವಿಡಿಯೋ ಹರಿಬಿಟ್ಟ ಪತಂಜಲಿ ಸಂಸ್ಥೆಯ ಸಹ ಸಂಸ್ಥಾಪಕ ರಾಮ್‌ದೇವ್ ಅವರನ್ನು ದೆಹಲಿ ಹೈಕೋರ್ಟ್ ಗುರುವಾರ(ಮೇ.1) ತೀವ್ರ ತರಾಟೆಗೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ.
ಪತಂಜಲಿ ಸಂಸ್ಥೆಯ ಹೊಸ ಉತ್ಪವನ್ನು ಪರಿಚಯಿಸುವಾಗ ಹಮ್ದರ್ದ್ ಕಂಪನಿಯ ಪ್ರಸಿದ್ದ ಪಾನಿಯಾ ರೂಮ್ ಅಫ್ಝಾವನ್ನು ಗುರಿಯಾಗಿಸಿ ಕೋಮುದ್ವೇಷದ ಹೇಳಿಕೆ ನೀಡಿದ ರಾಮ್‌ದೇವ್ ಅವರಿಗೆ ಹೈಕೋರ್ಟ್ ಕಳೆದವಾರ ಛೀಮಾರಿ ಹಾಕಿತ್ತು. ರಾಮ್‌ದೇವ್ ಹೇಳಿಕೆ ‘ಆಫಾತಕಾರಿ’ ಎಂದಿತ್ತು.
ಈ ವೇಳೆ ತಾನು ವಿಡಿಯೋವನ್ನು ತೆಗೆಯುವುದಾಗಿ ಹೇಳಿದ್ದ ರಾಮ್‌ದೇವ್, ಇನ್ನು ಮುಂದೆ ಇಂತಹ ಕೋಮುದ್ವೇಷದ, ವಿಶೇಷವಾಗಿ ಹಮ್ದರ್ದ್ ಕುರಿತು ಹೇಳಿಕೆ ನೀಡುವುದಿಲ್ಲ ಎಂದು ನ್ಯಾಯಾಲಯದ ಮುಂದೆ ಹೇಳಿದ್ದರು.
ಆದರೆ, ಇಂದು ಪ್ರಕರಣದ ವಿಚಾರಣೆ ವೇಳೆ, ರಾಮ್‌ದೇವ್ ಹಮ್ದರ್ದ್ ಕುರಿತು ಮತ್ತೊಂದು ವಿಡಿಯೋ ಹರಿಬಿಟ್ಟಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.
ರಾಮದೇವ್ ಅವರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿ ಅಮಿತ್ ಬನ್ಸಾಲ್, ಅವರು,ರಾಮ್‌ದೇವ್ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿ, ನ್ಯಾಯಾಲಯಕ್ಕೆ ಹಾಜರಾಗಲು ಸಮನ್ಸ್ ಜಾರಿ ನೀಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
“ಅವರು ಯಾರ ನಿಯಂತ್ರಣಕ್ಕೂ ಸಿಗದೆ, ತನ್ನದೇ ಲೋಕದಲ್ಲಿ ಬದುಕುತ್ತಿದ್ದಾರೆ” ಎಂದು ರಾಮ್‌ದೇವ್ ವಿರುದ್ದ ನ್ಯಾಯಮೂರ್ತಿ ಕಿಡಿಕಾರಿದ್ದಾರೆ.
ನ್ಯಾಯಾಲಯ ತರಾಟೆಗೆ ತೆಗೆದುಕೊಂಡ ನಂತರ, ರಾಮ್‌ದೇವ್ ಪರ ವಕೀಲರು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ 24 ಗಂಟೆಗಳ ಒಳಗೆ ಇತ್ತೀಚಿನ ವಿಡಿಯೋದ ಆಕ್ಷೇಪಾರ್ಹ ಭಾಗಗಳನ್ನು ತೆಗೆದುಹಾಕಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಒಂದು ವಾರದೊಳಗೆ ಆದೇಶ ಅನುಸರಣೆಯ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ರಾಮ್‌ದೇವ್ ಪರ ವಕೀಲರಿಗೆ ಸೂಚಿಸಿದೆ. ಹಿಂದಿನ ಆದೇಶದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಶುಕ್ರವಾರ ಈ ವಿಷಯವನ್ನು ಮತ್ತೆ ವಿಚಾರಣೆ ನಡೆಸಲಿದೆ.
ಏಪ್ರಿಲ್ 3ರಂದು ತಮ್ಮ ಕಂಪನಿಯ ಉತ್ಪನ್ನವಾದ ‘ಗುಲಾಬ್ ಶರ್ಬತ್’ ಅನ್ನು ಪ್ರಚಾರ ಮಾಡುವಾಗ ರಾಮ್‌ದೇವ್ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.
ವಿಡಿಯೋವೊಂದರಲ್ಲಿ, ಅವರು ಹಮ್ದರ್ದ್‌ನ ರೂಹ್ ಅಫ್ಝಾವನ್ನು ಗುರಿಯಾಗಿಸಿಕೊಂಡು, ಹಮ್ದರ್ದ್ ತನ್ನ ಹಣವನ್ನು ಮಸೀದಿ ಮತ್ತು ಮದರಸಾಗಳ ನಿರ್ಮಾಣಕ್ಕೆ ಬಳಸುತ್ತಿದೆ ಎಂದು ದೂರಿದ್ದರು ಮತ್ತು ‘ಶರ್ಬತ್ ಜಿಹಾದ್’ ಎಂಬ ಪದವನ್ನು ಬಳಸಿ ಆರೋಪ ಮಾಡಿದ್ದರು.
ರಾಮ್‌ದೇವ್ ಅವರ ಕೋಮುದ್ವೇಷದ ವಿಡಿಯೋ ವಿರುದ್ಧ ಹಮ್ದರ್ದ್ ಕಂಪನಿ ನ್ಯಾಯಾಲಯ ಮೆಟ್ಟಿಲೇರಿತ್ತು.
ಹಮ್ದರ್ದ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೀಪ್ ಸೇಥಿ, ರಾಮದೇವ್ ಕೋಮುದ್ವೇಷದ ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮೊದಲ ವಿಡಿಯೋ ಮತ್ತು ಈಗ ಬಿಟ್ಟಿರುವ ವಿಡಿಯೋ ಎರಡರಲ್ಲೂ ರಾಮ್‌ದೇವ್ ಅವರು ಹಮ್ದರ್ದ್ ಕಂಪನಿಯನ್ನು ಉಲ್ಲೇಖಿಸಿದ್ದಾರೆ. ಎರಡರಲ್ಲೂ ಹಮ್ದರ್ದ್ ಹಣವನ್ನು ಮಸೀದಿ, ಮದ್ರಸಕ್ಕೆ ನಿರ್ಮಾಣಕ್ಕೆ ಬಳಸುತ್ತದೆ ಎಂದಿದ್ದಾರೆ. ಎರಡೂ ವಿಡಿಯೋಗಳಲ್ಲಿ ಹಮ್ದರ್ದ್ ನಿರ್ದಿಷ್ಟ ಸಮುದಾಯಕ್ಕೆ ಸೇರಿದ್ದು ಮತ್ತು ಅದು ಆ ಸಮುದಾಯದ ಹಿತಾಸಕ್ತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ ಎಂದು ವಕೀಲ ಸೇಥಿ ನ್ಯಾಯಾಲಯಕ್ಕೆ ವಿವರಿಸಿದ್ದಾರೆ.
ರಾಮದೇವ್ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್ ನಾಯರ್, ಇತ್ತೀಚಿನ ವಿಡಿಯೋದಲ್ಲಿ ಹಮ್ದರ್ದ್ ಉತ್ಪನ್ನವನ್ನು ಅವಹೇಳನ ಮಾಡಿಲ್ಲ ಮತ್ತು ಹಿಂದಿನ ವಿಡಿಯೋವನ್ನು ತೆಗೆದುಹಾಕುವ ಆದೇಶವನ್ನು ಈಗಾಗಲೇ ಪಾಲಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಮದೇವ್ ಸಲ್ಲಿಸಿದ ಅಫಿಡವಿಟ್‌ನ ವಿಷಯಗಳ ಕಡೆಗೆ ನ್ಯಾಯಾಲಯದ ಗಮನ ಸೆಳೆಯಲು ನಾಯರ್ ಪ್ರಯತ್ನಿಸಿದ್ದಾರೆ.
“ಅಫಿಡವಿಟ್‌ನಲ್ಲಿ ಪ್ಯಾರಾ 3 ಮುಖ್ಯವಾಗಿದೆ, ಅಲ್ಲಿ ಅವರು “ನಾನು ಧರ್ಮಗಳ ನಡುವೆ ವ್ಯತ್ಯಾಸವನ್ನು ನೋಡುವುದಿಲ್ಲ” ಎಂಬುವುದಾಗಿ ಹೇಳಿದ್ದಾರೆ” ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಅಮಿತ್ ಬನ್ಸಾಲ್, “ನಮಗೆ ಅವರ ರಾಜಕೀಯ ದೃಷ್ಟಿಕೋನದ ಬಗ್ಗೆ ತಿಳಿಯಬೇಕಾಗಿಲ್ಲ. ನನಗೆ ಈ ಮೊಕದ್ದಮೆಯ ಬಗ್ಗೆ ಮಾತ್ರ ತಿಳಿಯಬೇಕಿದೆ. ಅವರು ಅವರ (ಹಮ್ದರ್ದ್) ಹೆಸರು ಉತ್ಪನ್ನಗಳ ಬಗ್ಗೆ ಉಲ್ಲೇಖಿಸದಂತೆ ತಡೆಯುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ರಾಮದೇವ್ ಅವರ ಇತ್ತೀಚಿನ ವಿಡಿಯೋವನ್ನೂ ತೆಗೆದುಹಾಕಲಾಗುವುದು ಎಂದು ಅವರ ಪರ ವಕೀಲರು ತಿಳಿಸಿದ ಕಾರಣ ನ್ಯಾಯಾಲಯ ನ್ಯಾಯಾಂಗ ನಿಂದನೆ ನೋಟಿಸ್ ನೀಡಿಲ್ಲ ಎಂದು ವರದಿಯಾಗಿದೆ.
‘ಕೇಂದ್ರ ಹೆಡ್‌ಲೈನ್ ಕೊಟ್ಟಿದೆ, ಡೆಡ್‌ಲೈನ್ ಯಾವಾಗ?’ ಜಾತಿ ಗಣತಿ ಕುರಿತು ಕಾಂಗ್ರೆಸ್ ಪ್ರಶ್ನೆ


