ಮಂಗಳೂರು: 2022ರ ಜುಲೈ 26ರಂದು ನಡೆದ ಮೊಹಮ್ಮದ್ ಫಾಝಿಲ್ ಕೊಲೆ ಪ್ರಕರಣದ ಆರೋಪಿ ರೌಡಿಶೀಟರ್ ಕಾಟಿಪಳ್ಳ-ಕೋಡಿಕೆರೆ ನಿವಾಸಿ ಸುಹಾಸ್ ಶೆಟ್ಟಿ (42) ಎಂಬಾತನನ್ನು 6 ಮಂದಿಯ ತಂಡವೊಂದು ಬೆನ್ನಟ್ಟಿ ಭೀಭತ್ಸವಾಗಿ ಕೊಲೆಗೈದ ಘಟನೆ ಗುರುವಾರ ರಾತ್ರಿ ಬಜಪೆ ಕಿನ್ನಿಪದವು ಎಂಬಲ್ಲಿ ನಡೆದಿದೆ.
ಈ ಹಿಂದೆ ಸುಹಾಸ್ ಶೆಟ್ಟಿ ವಿರುದ್ಧ ಎರಡು ಕೊಲೆ ಪ್ರಕರಣಗಳೂ ಸೇರಿದಂತೆ ಐದು ಪ್ರಕರಣಗಳು ದಾಖಲಾಗಿದ್ದವು. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಬೆನ್ನಲ್ಲೇ ಮಂಗಳೂರು ನಗರದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಸೆಕ್ಷನ್ 163 ಜಾರಿಗೊಳಿಸಲಾಗಿದೆ.
ಫಾಝೀಲ್ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಸುಹಾಸ್, ಗುರುವಾರ ರಾತ್ರಿ ಕೆಲಸ ನಿಮಿತ್ತ ಬಜಪೆ ಕಡೆ ಕಾರಿನಲ್ಲಿ ತೆರಳುತ್ತಿದ್ದಾಗ ಕಾರು ಮತ್ತು ಒಂದು ಮೀನಿನ ಗಾಡಿಯಲ್ಲಿ 6 ಮಂದಿ ದುಷ್ಕರ್ಮಿಗಳ ಗುಂಪು ಬೆನ್ನಟ್ಟಿಕೊಂಡು ಬಂದಿದೆ. ಇದು ಸುಹಾಸ್ ಗೆ ತಿಳಿಯುತ್ತಿದ್ದಂತೆ ಆತ ಕಿನ್ನಿಪದವು ಜಂಕ್ಷನ್ ನಲ್ಲಿ ಇರುವ ಸಲೂನ್ ಒಂದಕ್ಕೆ ತನ್ನ ಕಾರನ್ನು ನುಗ್ಗಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ದುಷ್ಕರ್ಮಿಗಳು ಕೂಡಾ ಕಾರು ಮತ್ತು ಮೀನಿನ ಟೆಂಪೊವನ್ನು ಸಲೂನ್ ಒಳಗೆ ನುಗ್ಗಿಸಿದ್ದಾರೆ. ಬಳಿಕ ಸುಹಾಸ್ ನನ್ನು ಹೊರಗೆ ಎಳೆದು ಹಾಕಿ ತಲವಾರಿನಿಂದ ಭೀಕರವಾಗಿ ಕಡಿದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುಹಾಸ್ ಶೆಟ್ಟಿ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಕಳೆದ ವರ್ಷ ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಸುಹಾಸ್ ಶೆಟ್ಟಿ ಇನ್ನೊವಾ ಕಾರಿನಲ್ಲಿ ಸಹಚರರಾದ ಸಂಜಯ್, ಪ್ರಜ್ವಲ್, ಅನ್ವಿತ್, ಲತೀಶ್ ಹಾಗೂ ಶಶಾಂಕ್ ಜೊತೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಎ.ಜೆ.ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಅಷ್ಟರಲ್ಲೇ ಆತ ಅಸುನೀಗಿದ್ದ ಎಂದು ಮಂಗಳೂರಿನ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಸುದ್ದಿಗಾರರಿಗೆ ತಿಳಿಸಿದರು.
ದಾಳಿಯ ವೇಳೆ ಸುಹಾಸ್ ಶೆಟ್ಟಿಯ ಸಹಚರನೊಬ್ಬ ಗಾಯಗೊಂಡಿದ್ದಾನೆ. ಆತ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಿಜಪೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಎಸಿಪಿ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದೇವೆ ಎಂದು ತಿಳಿಸಿದರು.
ಕೊಲೆ ಆರೋಪಿಯ ಮೃತದೇಹ ಇರುವ ನಗರದ ಎ.ಜೆ. ಆಸ್ಪತ್ರೆಯ ಬಳಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಎ.ಜೆ. ಅಸ್ಪತ್ರೆಗೆ ಭೇಟಿ ನೀಡಿದರು.
ತಂಡವಾಗಿ ಬಂದು ಹಿಂದೂ ಕಾರ್ಯಕರ್ತನನ್ನು ನಿರ್ದಿಷ್ಟವಾಗಿ ಗುರುತಿಸಿ ಹತ್ಯೆ ಮಾಡಲಾಗಿದೆ. ಇದು ಪೂರ್ವಯೋಜಿತ ಕೃತ್ಯ. ಸರಕಾರ ಆರೋಪಿಗಳನ್ನು ಬಂಧಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕು. ಪ್ರಕರಣದ ತನಿಖೆಯನ್ನು ಎನ್ ಐಎಗೆ ವಹಿಸಬೇಕು ಎಂದು ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದರು.
ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ ಆಗಿದೆ. ರಾಜ್ಯದಲ್ಲಿ ಹಿಂದೂಗಳಿಗೆ ಉಳಿಗಾಲ ಇಲ್ಲದ ಸ್ಥಿತಿ ಇದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆಗೆ ರಾಜ್ಯ ಕಾಂಗ್ರೆಸ್ ಸರಕಾರವೇ ನೇರ ಕಾರಣ. ಎಸ್ ಡಿಪಿಐ, ಪಿಎಫ್ ಐ ನಂತಹ ಮತಾಂಧ ಶಕ್ತಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಅವರಿಗೆ ಇನ್ನಷ್ಟು ದುಷ್ಕೃತ್ಯಕ್ಕೆ ಬೆಂಬಲಿಸಿದದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಎಂದು ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.
ದುಷ್ಕರ್ಮಿಗಳು ನಡೆಸಿದ ಭೀಕರ ಕೃತ್ಯವನ್ನು ಘಟನೆ ನಡೆದ ಎದುರು ಭಾಗದ ಕಟ್ಟಡದಿಂದ ಯಾರೋ ವಿಡಿಯೊ ಮಾಡಿದ್ದು, ಇದು ಕೆಲವೇ ಕ್ಷಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಸೆಕ್ಷನ್ 163 ಜಾರಿಗೊಳಿಸಿ, ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿ ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ ಕಲಂ: 163ರಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿಕೊಂಡು ದಿನಾಂಕ 2025ರ ಮೇ 2 ಬೆಳಗ್ಗೆ 6 ಗಂಟೆಯಿಂದ ಮೇ 6ರ ಸಂಜೆ 6ಗಂಟೆಯವರೆಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023, ಸೆಕ್ಷನ್ 163, ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡಲು ಸಂಬಂಧಿಸಿದೆ. ಇದು ಸಾರ್ವಜನಿಕ ತೊಂದರೆ ಅಥವಾ ಅಪಾಯಕಾರಿ ಸಂದರ್ಭಗಳನ್ನು ತಡೆಗಟ್ಟಲು ಆದೇಶಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಮ್ಯಾಜಿಸ್ಟ್ರೇಟ್‌ಗಳಿಗೆ ನೀಡುತ್ತದೆ. ಈ ವಿಭಾಗವು ಹಿಂದಿನ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) 1973ರ ಸೆಕ್ಷನ್ 144ರ ಹೊಸ ರೂಪವಾಗಿದೆ.
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ಇಂದು (ಶುಕ್ರವಾರ) ದಕ್ಷಿಣ ಕನ್ನಡ ಜಿಲ್ಲೆ ಬಂದ್‌ಗೆ ಹಿಂದೂ ಸಂಘಟನೆಗಳು ಕರೆ ಕೊಟ್ಟಿವೆ.
ಬಂದ್‌ಗೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕರೆ ನೀಡಿವೆ. ಈ ಬಗ್ಗೆ ವಿಹೆಚ್‌ಪಿ ದಕ್ಷಿಣ ಪ್ರಾಂತ ಕಾರ್ಯವಾಹ ಶರಣ್ ಪಂಪ್ ವೆಲ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಉದ್ರಿಕ್ತ ಗುಂಪಿನಿಂದ ಬಸ್ಸಿಗೆ ಕಲ್ಲು ತೂರಾಟ ನಡೆಸಲಾಗಿದೆ. ಮೂರು ಬಸ್ಸಿಗೆ ಕಿಡಿಗೇಡಿಗಳ ಕಲ್ಲು ತೂರಾಟದಿಂದ ಹಾನಿಯಾಗಿದೆ.
Karnataka SSLC Result 2025 | ನಾಳೆ (ಮೇ 2) ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ


