“ಪಹಲ್ಗಾಮ್ ದಾಳಿ ನಡೆಯುವ ಮೂರು ದಿನಗಳ ಮೊದಲೇ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆಯಬಹುದು ಎಂದು ಗುಪ್ತಚರ ಇಲಾಖೆ ಪ್ರಧಾನಿ ಮೋದಿಯವರಿಗೆ ವರದಿ ಕೊಟ್ಟಿತ್ತು. ಈ ಕಾರಣಕ್ಕೆ ಅವರು ಅಲ್ಲಿಯ ಪ್ರವಾಸವನ್ನು ರದ್ದುಗೊಳಿಸಿದ್ದರು” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ (ಮೇ.6) ಆರೋಪಿಸಿದ್ದಾರೆ.
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಡೆದ ‘ಸಂವಿಧಾನ್ ಬಚಾವೋ’ ಸಮಾವೇಶದಲ್ಲಿ ಮಾತನಾಡಿದ ಅವರು, “ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ‘ಗುಪ್ತಚರ ವೈಫಲ್ಯ’ ಕಾರಣ ಎಂಬುವುದನ್ನು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆಯಲ್ಲಿ ಒಪ್ಪಿಕೊಂಡಿದೆ. ಹಾಗಾಗಿ, ಜನರನ್ನು ರಕ್ಷಿಸಲು ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸದಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಬೇಕು” ಎಂದು ಹೇಳಿದ್ದಾರೆ.
“ಪಹಲ್ಗಾಮ್ ದಾಳಿಯ ಮೂರು ದಿನ ಮುನ್ನ ಭಯೋತ್ಪಾದಕ ದಾಳಿಯ ಸಾಧ್ಯತೆಯ ಬಗ್ಗೆ ಮೋದಿಯವರಿಗೆ ಗುಪ್ತಚರ ಇಲಾಖೆ ವರದಿ ನೀಡಿದೆ. ಈ ಕಾರಣಕ್ಕೆ ಅವರು ಅಲ್ಲಿಯ ಭೇಟಿಯನ್ನು ರದ್ದುಗೊಳಿಸಿದ್ದರು ಎಂದು ನನಗೆ ಮಾಹಿತಿ ದೊರೆತಿದೆ. ಕೆಲವು ಪತ್ರಿಕೆಗಳು ಈ ಬಗ್ಗೆ ವರದಿ ಮಾಡಿವೆ” ಎಂದಿರುವ ಖರ್ಗೆ, “ನಿಮ್ಮ ಭದ್ರತೆಗಾಗಿ ಅಲ್ಲಿಗೆ ಭೇಟಿ ನೀಡುವುದು ಸೂಕ್ತವಲ್ಲ ಎಂದು ಗುಪ್ತಚರ ವರದಿ ಹೇಳಿದಾಗ, ಜನರನ್ನು ರಕ್ಷಿಸಲು ನೀವು ನಿಮ್ಮ ಭದ್ರತೆ, ಗುಪ್ತಚರ, ಸ್ಥಳೀಯ ಪೊಲೀಸರು ಮತ್ತು ಗಡಿ ಪಡೆಗೆ ಏಕೆ ತಿಳಿಸಲಿಲ್ಲ? ನಿಮಗೆ ಮಾಹಿತಿ ಬಂದಾಗ, ನೀವು ನಿಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದೀರಿ. ಆದರೆ, ಅಲ್ಲಿಯ ಪ್ರವಾಸಿಗರನ್ನು ರಕ್ಷಿಸಲು ಹೆಚ್ಚಿನ ಪಡೆಗಳನ್ನು ಏಕೆ ಕಳುಹಿಸಲಿಲ್ಲ?” ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
देश की ख़ुफ़िया एजेंसियों ने आतंकी हमले की आशंका जताई थी।
इस सूचना के बाद ही PM मोदी ने भी अपना कश्मीर दौरा रद्द कर दिया था।
ऐसे में मेरा सवाल है👇
जब ख़ुफ़िया एजेंसियों ने आतंकी हमले की आशंका जताई थी, तो सरकार ने इस बारे में सभी को अलर्ट क्यों नहीं किया?
: कांग्रेस अध्यक्ष… pic.twitter.com/EEjFSG0YCY
— Congress (@INCIndia) May 6, 2025
ಗುಪ್ತಚರ ವೈಫಲ್ಯವನ್ನು ಒಪ್ಪಿಕೊಂಡಿರುವ ಕೇಂದ್ರ ಸರ್ಕಾರ, ಪಹಲ್ಗಾಮ್ ದಾಳಿಯ ಜೀವಹಾನಿಗೆ ಹೊಣೆಗಾರನಾಗಬೇಕಲ್ಲವೇ? ಎಂದು ಖರ್ಗೆ ಕೇಳಿದ್ದಾರೆ.
ಅವರು (ಕೇಂದ್ರ ಸರ್ಕಾರ) ವ್ಯವಸ್ಥೆಯನ್ನು ಸುಧಾರಿಸುತ್ತೇವೆ ಎನ್ನುತ್ತಿದ್ದಾರೆ. ನಿಮಗೆ ದಾಳಿಯ ಬಗ್ಗೆ ಮೊದಲೇ ಮಾಹಿತಿಯಿದ್ದರೂ ಪ್ರವಾಸಿಗರ ಭದ್ರತೆಯ ನಿಟ್ಟಿನಲ್ಲಿ ಸರಿಯಾದ ವ್ಯವಸ್ಥೆ ಏಕೆ ಮಾಡಿಲ್ಲ? ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಪಹಲ್ಗಾಮ್ ದಾಳಿಯ ಹಿನ್ನೆಲೆ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾದರೂ ಕಾಂಗ್ರೆಸ್ ಅದರ ಬೆಂಬಲಕ್ಕೆ ನಿಲ್ಲುತ್ತದೆ. ಏಕೆಂದರೆ ದೇಶವು ಪಕ್ಷ, ಧರ್ಮ ಮತ್ತು ಜಾತಿಯನ್ನು ಮೀರಿದ್ದು” ಎಂದು ಮಲ್ಲಿಕಾರ್ಜುನ ಖರ್ಗೆ ಇದೇ ವೇಳೆ ಹೇಳಿದ್ದಾರೆ.
ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಇಪ್ಪತ್ತೈದು ಪ್ರವಾಸಿಗರು ಮತ್ತು ಸ್ಥಳೀಯ ಕಾಶ್ಮೀರಿ ವ್ಯಕ್ತಿ ಸಾವಿಗೀಡಾಗಿದ್ದಾರೆ.


