ಬಾಂಬೆ ಹೈಕೋರ್ಟ್‌ನ ಆದೇಶದ ಮೇರೆಗೆ ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ಸ್ಥಳೀಯ ಆಡಳಿತವು 55ಕ್ಕೂ ಹೆಚ್ಚು ಗುಡಿಸಲುಗಳು ಮತ್ತು ಹುಲ್ಲಿನ ಮನೆಗಳನ್ನು ನೆಲಸಮಗೊಳಿಸಿದ ನಂತರ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಕುಟುಂಬಗಳನ್ನು ಅಕ್ಷರಶಃ ಬೀದಿಪಾಲಾಗಿರುವ ಘಟನೆ ವರದಿಯಾಗಿದೆ.
ವಾರಾಂತ್ಯದಲ್ಲಿ (ಮೇ 3-4) ನಡೆಸಲಾದ ಈ ನೆಲಸಮವು ನೂರಾರು ಜನರನ್ನು ಬೀದಿಪಾಲು ಮಾಡಿದೆ. ಅವರಲ್ಲಿ ಹೆಚ್ಚಿನವರು ಬಡ ಕಾರ್ಮಿಕರಾಗಿದ್ದಾರೆ. ಇದು ಪಟ್ಟಣದ ಜನರಲ್ಲಿ ಆಘಾತ, ದುಃಖ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ.
ಆಡಳಿತವು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿಕೊಂಡರೂ, ಈ ರೀತಿಯ ನಷ್ಟವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ, ವಿಶೇಷವಾಗಿ ಮುಸ್ಲಿಂ ಬಹುಸಂಖ್ಯಾತ ನಗರದಲ್ಲಿ ಹೆಚ್ಚಿನ ಸಂತ್ರಸ್ತರು ಕಾರ್ಮಿಕ ವರ್ಗಕ್ಕೆ ಸೇರಿದವರಾಗಿದ್ದಾರೆ. ಹಲವರಿಗೆ ಈ ಹಠಾತ್ ಕಾರ್ಯಾಚರಣೆಯು ಅವರನ್ನು ಆಶ್ರಯವಿಲ್ಲದಂತೆ ಮಾಡಿದೆ. ಗುಡಿಸಲುಗಳನ್ನು ಕಳೆದುಕೊಂಡವರಲ್ಲಿ ಹೆಚ್ಚಿನವರು ಈಗ ಸಂಬಂಧಿಕರು, ಸ್ನೇಹಿತರೊಂದಿಗೆ ಅಥವಾ ರಸ್ತೆಬದಿಯಲ್ಲಿ ವಾಸಿಸುವಂತಾಗಿದೆ.
ಮಾಲ್ಡಾ ಶಿವಾರ್ ಪ್ರದೇಶದಲ್ಲಿರುವ ಗಟ್ ಸಂಖ್ಯೆ 178/3 ಎಂಬ ಪ್ರಶ್ನಾರ್ಹ ಭೂಮಿ ಬಹಳ ಹಿಂದಿನಿಂದಲೂ ವಿವಾದದ ಕೇಂದ್ರವಾಗಿತ್ತು. ಇದು ಸುಮಾರು ಒಂದೂವರೆ ಎಕರೆ ವಿಸ್ತೀರ್ಣವನ್ನು ಹೊಂದಿದೆ. ಸ್ಥಳೀಯ ಮೂಲಗಳ ಪ್ರಕಾರ, ಕೆಲವು ಜನರು ಈ ಭೂಮಿಯನ್ನು ಪ್ಲಾಟ್‌ಗಳಾಗಿ ಪರಿವರ್ತಿಸಿ ಈ ಬಡ ಕುಟುಂಬಗಳಿಗೆ ಮಾರಾಟ ಮಾಡಿದ್ದರು, ಆದರೆ ಆಗ ಕಾನೂನು ಸ್ಪಷ್ಟತೆ ಇರಲಿಲ್ಲ. ಈ ವಿಷಯವು ನ್ಯಾಯಾಲಯವನ್ನು ತಲುಪಿತು ಮತ್ತು ಅಂತಿಮವಾಗಿ ಹೈಕೋರ್ಟ್ ಮೂಲ ಭೂಮಾಲೀಕರ ಪರವಾಗಿ ತೀರ್ಪು ನೀಡಿತು.
ಈ ಆದೇಶದ ನಂತರ, ಮಾಲೆಗಾಂವ್ ನ ಸ್ಥಳೀಯ ಆಡಳಿತವು ಬುಲ್ಡೋಜರ್‌ಗಳು ಮತ್ತು ಜೆಸಿಬಿ ಯಂತ್ರಗಳನ್ನು ತಂದು ತೆರವು ಕಾರ್ಯವನ್ನು ಕೈಗೊಂಡಿತು. ನಂತರ ನಡೆದ ತೆರವುಗೊಳಿಸುವಿಕೆ ಇಡೀ ಕುಟುಂಬಗಳನ್ನು ಕಣ್ಣೀರು ಸುರಿಸುವಂತೆ ಮಾಡಿತು.
ವಿದ್ಯುತ್ ಮಗ್ಗದ ಕೆಲಸಗಾರ ಅಕೀಲ್ ಶೇಖ್ ತನ್ನ ಮನೆಯನ್ನು ನೆಲಸಮ ಮಾಡುವುದನ್ನು ಅಸಹಾಯಕತೆಯಿಂದ ನೋಡುತ್ತಿದ್ದ. “ನನಗೆ ಒಬ್ಬ ಕಮಿಷನ್ ಏಜೆಂಟ್ ಒಂದು ಪ್ಲಾಟ್ ಅನ್ನು ಕೊಟ್ಟನು. ಸ್ವಲ್ಪ ಸಮಯದ ನಂತರ ನೋಟರಿ ದಾಖಲೆಗಳನ್ನು ಹೊಂದಿಸಿಕೊಡುತ್ತೇನೆ ಎಂದು ನನಗೆ ಹೇಳಲಾಯಿತು. ನಾನು ಅವರನ್ನು ವರ್ಷಗಳ ಕಾಲ ನಂಬಿದ್ದೆ. ಈಗ, ನನಗೆ ಮನೆಯೂ ಇಲ್ಲ ಮತ್ತು ಭೂಮಿಯೂ ಇಲ್ಲ” ಎಂದು ಅವರು ದುಃಖದಿಂದ ಭಾರವಾದ ಧ್ವನಿಯಲ್ಲಿ ಹೇಳಿದರು. “ನಮಗೆ ಪ್ಲಾಟ್‌ಗಳನ್ನು ಮಾರಾಟ ಮಾಡಿದವರನ್ನು ಮಾಲೆಗಾಂವ್‌ನಲ್ಲಿ ‘ಗೌರವಾನ್ವಿತ ಜನರು’ ಎಂದು ಕರೆಯಲಾಗುತ್ತದೆ. ಇದು ಯಾವ ಗೌರವ?” ಎಂದು ಅವರು ಪ್ರಶ್ನಿಸಿದರು.
ಇನ್ನೊಬ್ಬ ಸಂತ್ರಸ್ತ ಶಬಾನಾ ಬಾನೋ ತನ್ನ ಕಷ್ಟವನ್ನು ವಿವರಿಸುತ್ತಾ ದುಃಖಿಸಿದರು. “ಈ ಬಿಸಿ ಬೇಸಿಗೆಯಲ್ಲಿ ನಾವು ಮನೆ ಕಳೆದುಕೊಂಡು ದಿಕ್ಕುಪಾಲಾಗಿದ್ದೇವೆ. ನನ್ನ ಮಕ್ಕಳು ಬೇರೆಯವರ ಮನೆಯಲ್ಲಿ ಮಲಗುತ್ತಿದ್ದಾರೆ. ನಾನು ಈ ಭೂಮಿಗೆ ಪ್ರಾಮಾಣಿಕವಾಗಿ ಹಣ ಪಾವತಿಸಿದ್ದೆ. ಆಡಳಿತ ಅಥವಾ ರಾಜಕೀಯ ನಾಯಕರಿಂದ ಯಾರೂ ನಮಗೆ ಸಹಾಯ ಮಾಡಲು ಬಂದಿಲ್ಲ” ಎಂದು ಅವರು ಹೇಳಿದರು.
ಈ ತೆರವು ಕಾರ್ಯಾಚರಣೆಯಿಂದ ಸಂತ್ರಸ್ತರಾಗಿರುವವರು ಹೆಚ್ಚಿನ ಕುಟುಂಬಗಳು ಮುಸ್ಲಿಂ ಸಮುದಾಯದವರಾಗಿದ್ದು, ಅನೇಕರು ಬಡ ದಿನಗೂಲಿ ಕಾರ್ಮಿಕರು, ಮಗ್ಗ ಕಾರ್ಮಿಕರು ಅಥವಾ ಮನೆಕೆಲಸಗಾರರು, ಅವರು ತಮ್ಮ ಜೀವನದ ಉಳಿತಾಯವನ್ನು ಈ ಸಣ್ಣ ಪ್ಲಾಟ್‌ಗಳನ್ನು ಖರೀದಿಸಲು ಹೂಡಿಕೆ ಮಾಡಿದ್ದರು. ಅನೇಕರು ಕಾಲಾನಂತರದಲ್ಲಿ ಒಂದೊಂದಾಗಿ ಮನೆಗಳನ್ನು ನಿರ್ಮಿಸಿದ್ದರು.
ನ್ಯಾಯಾಲಯದ ಆದೇಶದ ಪ್ರಕಾರ ಪೊಲೀಸ್ ರಕ್ಷಣೆಯಲ್ಲಿ ತೆರವು ಕಾರ್ಯವನ್ನು ನಡೆಸಲಾಗಿದ್ದರೂ, ಸ್ಥಳಾಂತರಗೊಂಡವರಿಗೆ ಯಾವುದೇ ಪರಿಹಾರ ಅಥವಾ ಪುನರ್ವಸತಿ ಒದಗಿಸಲಾಗುತ್ತದೆಯೇ ಎಂಬುದರ ಕುರಿತು ಆಡಳಿತವು ಹೆಚ್ಚಾಗಿ ಮೌನವಾಗಿದೆ. ಸ್ಥಳೀಯ ಆಡಳಿತವು ಧ್ವಂಸಗಳನ್ನು ದೃಢಪಡಿಸಿದೆ. ಆದರೆ ಸಂತ್ರಸ್ತರಿಗೆ ಯಾವುದೇ ಪರಿಹಾರ ಕ್ರಮಗಳ ಬಗ್ಗೆ ಮಾತನಾಡಿಲ್ಲ.
ಯಾವುದೇ ಅಧಿಕೃತ ಸಹಾಯವಿಲ್ಲದ ಕಾರಣ, ಬಲಿಪಶುಗಳು ಆಶ್ರಯಕ್ಕಾಗಿ ಸಂಬಂಧಿಕರು ಮತ್ತು ನೆರೆಹೊರೆಯವರನ್ನು ಅವಲಂಬಿಸಬೇಕಾಯಿತು. ಕೆಲವು ಕುಟುಂಬಗಳು ಇಕ್ಕಟ್ಟಾದ ಕೋಣೆಗಳಲ್ಲಿ ವಾಸಿಸುತ್ತಿದ್ದರೆ, ಇನ್ನು ಕೆಲವರು ತಾತ್ಕಾಲಿಕ ಆಶ್ರಯದಲ್ಲಿ ನೆಲೆಸಿದ್ದಾರೆ. ಸಾಮಾಜಿಕ ಕಾರ್ಯಕರ್ತರು ಮತ್ತು ಸ್ಥಳೀಯ ಎನ್‌ಜಿಒಗಳು ಆಹಾರ ಮತ್ತು ನೀರನ್ನು ಒದಗಿಸಲು ಪ್ರಾರಂಭಿಸಿವೆ, ಆದರೆ ಸರ್ಕಾರದ ಸಹಾಯವಿಲ್ಲದೆ ಸಮಸ್ಯೆ ನಿಭಾಯಿಸಲು ತುಂಬಾ ಕಷ್ಟವಾಗುತ್ತಿದೆ ಎಂದು ಅವರು ಹೇಳುತ್ತಾರೆ.
ಮಾಲೆಗಾಂವ್ ಹೆಚ್ಚುವರಿ ಎಸ್‌ಪಿ ತೇಗ್‌ಬೀರ್ ಸಿಂಗ್ ಸಂಧು ಕಾರ್ಯಾಚರಣೆಯಿಂದ ಜನರಿಗೆ ಉಂಟಾದ ನೋವನ್ನು ಒಪ್ಪಿಕೊಂಡಿದ್ದಾರೆ. ಆದರೆ ಪೊಲೀಸರು ನ್ಯಾಯಾಲಯದ ಆದೇಶಗಳನ್ನು ಮಾತ್ರ ಅನುಸರಿಸುತ್ತಿದ್ದಾರೆ ಎಂದು ಹೇಳಿದರು. “ಪೊಲೀಸರು ತೆರವು ಕಾರ್ಯಾಚರಣೆಯ ತಂಡಕ್ಕೆ ಭದ್ರತೆ ಒದಗಿಸಿದರು. ನಾವು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದೇವೆ ಮತ್ತು ಸಮುದಾಯದ ಸದಸ್ಯರಿಗೆ ಸಂತ್ರಸ್ತ ಕುಟುಂಬಗಳಿಗೆ ಸಹಾಯ ಮಾಡಲು ಕೇಳಿದ್ದೇವೆ” ಎಂದು ಅವರು ಹೇಳಿದರು.
ಧ್ವಂಸವು ನಗರದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಬಡವರನ್ನು, ವಿಶೇಷವಾಗಿ ಮುಸ್ಲಿಮರನ್ನು ಭಾರತದಲ್ಲಿ ಹೇಗೆ ಅನ್ಯಾಯವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬುದರ ಮತ್ತೊಂದು ಉದಾಹರಣೆಯಾಗಿ ಈ ಘಟನೆ ಮುಂದೆ ನಿಲ್ಲುತ್ತದೆ.
ಸ್ಥಳೀಯ ಕಾರ್ಯಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ಇರ್ಫಾನ್ ಅನ್ಸಾರಿ ಕಾರ್ಯಾಚರಣೆಯ ಏಕಪಕ್ಷೀಯ ಸ್ವರೂಪವನ್ನು ಟೀಕಿಸಿದರು. “ನ್ಯಾಯಾಲಯದ ಆದೇಶವನ್ನು ಪಾಲಿಸಬಾರದು ಎಂದು ಯಾರೂ ಹೇಳುತ್ತಿಲ್ಲ. ಆದರೆ ಪುನರ್ವಸತಿ ಯೋಜನೆ ಎಲ್ಲಿದೆ? ಮಾನವರ ಬದುಕಿನ ಕುರಿತು ಕಾಳಜಿ ಎಲ್ಲಿದೆ? ಇದನ್ನು ಯುದ್ಧ ಕಾರ್ಯಾಚರಣೆಯಂತೆ ಮಾಡಲಾಗಿದೆ” ಎಂದು ಅವರು ಹೇಳಿದರು. “ಭೂಮಿ ಖಾಸಗಿಯಾಗಿದ್ದರೂ ಸಹ ಈ ಕುಟುಂಬಗಳು ಮೋಸ ಹೋಗಲಿಲ್ಲವೇ? ಅಕ್ರಮವಾಗಿ ಭೂಮಿಯನ್ನು ಮಾರಾಟ ಮಾಡಿದವರ ವಿರುದ್ಧ ಸರ್ಕಾರ ಏಕೆ ಕ್ರಮ ಕೈಗೊಳ್ಳುತ್ತಿಲ್ಲ?” ಎಂದು ಅವರು ಪ್ರಶ್ನಿಸಿದರು.
ವಿವಾದಿತ ಭೂಮಿಯನ್ನು ಖರೀದಿಸಲು ಜನರಿಗೆ ದಾರಿ ತಪ್ಪಿಸಿದವರನ್ನು ಪತ್ತೆಹಚ್ಚಿ ಮತ್ತು ಶಿಕ್ಷಿಸಲು ಪ್ರತ್ಯೇಕ ತನಿಖೆ ನಡೆಸಬೇಕೆಂದು ಅನ್ಸಾರಿ ಒತ್ತಾಯಿಸಿದರು. ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳಿಂದ ತಕ್ಷಣದ ಪರಿಹಾರವನ್ನು ಅವರು ಕೋರಿದರು. ಹೆಸರು ಹೇಳಲು ಇಚ್ಛಿಸದ ಸ್ಥಳೀಯ ಧರ್ಮಗುರುಯೊಬ್ಬರು, “ಈ ಜನರಲ್ಲಿ ಹೆಚ್ಚಿನವರು ನಮ್ಮ ಮುಸ್ಲಿಂ ಸಮುದಾಯದವರು. ಅವರು ಬಡವರು ಮತ್ತು ಅವರನ್ನು ವಂಚಿಸಲಾಗಿದೆ. ಸರ್ಕಾರವು ಕೈ ತೊಳೆದುಕೊಳ್ಳಲು ಸಾಧ್ಯವಿಲ್ಲ. ಇದು ಬೇರೆ ಯಾವುದೇ ಸಮುದಾಯಕ್ಕೆ ಸಂಭವಿಸಿದರೆ ಈ ರೀತಿ ಮೌನ ಇರುತ್ತಿತ್ತೇ?” ಎಂದು ಪ್ರಶ್ನಿಸಿದರು.
ರಾಜಕೀಯ ಪಕ್ಷಗಳು ಸಹ ಈಗಲೂ ಸೊಲ್ಲೆತ್ತುತ್ತಿಲ್ಲ. ಆದರೆ ಅವರ ಗಮನ ಸಂತ್ರಸ್ತರಿಗೆ ಸಹಾಯ ಮಾಡುವುದಕ್ಕಿಂತ ಮತ ಗಳಿಸುವುದರ ಮೇಲೆ ಹೆಚ್ಚು ಒತ್ತು ಇರುವಂತೆ ಕಾಣುತ್ತದೆ. ಕೆಲವು ರಾಜಕಾರಣಿಗಳು ಈ ಪ್ರದೇಶಕ್ಕೆ ಭೇಟಿ ನೀಡಿದರು. ಫೋಟೋಗಳಿಗೆ ಪೋಸ್ ನೀಡಿದರು ಮತ್ತು ತಮ್ಮ ಪ್ರತಿಸ್ಪರ್ಧಿಗಳನ್ನು ಟೀಕಿಸಿದರು, ಆದರೆ ಸಮಸ್ಯೆಯ ಕುರಿತು ಯಾವ ರೀತಿ ಸಹಕರಿಸುವುದು ಎಂಬುದರ ಕುರಿತು ಅವರ ಮಾತನಾಡಲಿಲ್ಲ.
ಮುಸ್ಲಿಂ ಬಹುಸಂಖ್ಯಾತ ಜನಸಂಖ್ಯೆಯನ್ನು ಹೊಂದಿರುವ ಮಾಲೆಗಾಂವ್ ಯಾವಾಗಲೂ ಸಂಕೀರ್ಣ ರಾಜಕೀಯ ಚಲನಶೀಲತೆಯನ್ನು ಹೊಂದಿದೆ. ರಾಜಕೀಯ ಲಾಭಕ್ಕಾಗಿ ಭಾವನೆಗಳನ್ನು ಕೆರಳಿಸಲು ಈ ವಿಷಯವನ್ನು ಬಳಸಲಾಗುತ್ತಿದೆ ಎಂದು ಕೆಲವರು ಅಭಿಪ್ರಾಯಿಸಿದ್ದಾರೆ. “ರಾಜಕಾರಣಿಗಳು ಜನರಿಗೆ ಸಹಾಯ ಮಾಡುವ ಬದಲು, ಈ ವಿಷಯವನ್ನು ತಮ್ಮ ಭಾಷಣಗಳಿಗೆ ಮತ್ತು ಫೇಸ್‌ಬುಕ್ ಪೋಸ್ಟ್‌ಗಳಿಗಾಗಿ ಬಳಸುತ್ತಿದ್ದಾರೆ” ಎಂದು ಸ್ಥಳೀಯ ಅಂಗಡಿಯೊಬ್ಬ ಹೇಳಿದರು. “ಜನರಿಗೆ ಆಹಾರ, ವಸತಿ ಮತ್ತು ಉತ್ತರಗಳು ಬೇಕು – ಘೋಷಣೆಗಳಲ್ಲ.” ಎಂದು ಅವರು ಆಕ್ರೋಶವನ್ನು ವ್ಯಕ್ತಪಡಿಸಿದರು.
ಭೂ ಮಾರಾಟದ ಹಿನ್ನೆಲೆಯನ್ನು ಪರಿಶೀಲಿಸದ ಅಥವಾ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ಸಹಾಯ ಮಾಡದ ಆಡಳಿತದ ವಿರುದ್ಧವೂ ಅಸಮಾಧಾನವಿದೆ. ಈ ಕ್ರಮ ಕೈಗೊಳ್ಳಲು ವರ್ಷಗಳು ಏಕೆ ಬೇಕಾಯಿತು? ಈಗ ಏಕೆ? ಮೊದಲು ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿದ ವಂಚಕರ ಹಿಂದೆ ಏಕೆ ಹೋಗಬಾರದಿತ್ತು?” ಎಂದು ಮತ್ತೊಬ್ಬ ನಿವಾಸಿ ಪ್ರಶ್ನಿಸಿದರು.
ಸಮಾಜದ ಒಂದು ವರ್ಗವು ಮನೆ ಕಳೆದುಕೊಂಡವರಿಗೆ ಬೆಂಬಲಿಸಲು ಮುಂದೆ ಬಂದಿದ್ದರೂ, ಈಗ ಮುಖ್ಯ ಬೇಡಿಕೆ ಅಧಿಕೃತ ಕ್ರಮವಾಗಿದೆ. ಅನೇಕರು ಮಹಾರಾಷ್ಟ್ರದ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಬಲಿಪಶುಗಳಿಗೆ ವಸತಿ, ಆರ್ಥಿಕ ನೆರವು ಮತ್ತು ಕಾನೂನು ಸಹಾಯವನ್ನು ಒದಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಮಾಜಿ ಪುರಸಭೆಯ ಕೌನ್ಸಿಲರ್ ಒಬ್ಬರು, “ಬೇರೊಬ್ಬರ ವಂಚನೆಗೆ ಜನರು ಶಿಕ್ಷೆಗೆ ಒಳಗಾಗಬಾರದು. ಈ ಕುಟುಂಬಗಳು ಇಲ್ಲಿಯ ನಿವೇಶನಕ್ಕೆ ಹಣ ಪಾವತಿಸಿದರು, ಅವರು ಮನೆಗಳನ್ನು ನಿರ್ಮಿಸಿದರು ಮತ್ತು ಇಲ್ಲಿ ವರ್ಷಗಳ ಕಾಲ ವಾಸಿಸುತ್ತಿದ್ದರು. ಅವರ ಜೀವನವು ತಮಾಷೆಯ ವಿಷಯವಲ್ಲ” ಎಂದು ಹೇಳಿದರು.
ವಕೀಲರು ಮತ್ತು ಕಾನೂನು ಹಕ್ಕುಗಳ ಗುಂಪುಗಳು ಸಂತ್ರಸ್ತ ಜನರಿಗೆ ಪುನರ್ವಸತಿ ಮತ್ತು ಪರಿಹಾರದ ವಿಷಯವನ್ನು ಎತ್ತಲು ಪ್ರಾರಂಭಿಸಿವೆ. ಒಬ್ಬ ಸ್ಥಳೀಯ ವಕೀಲ ಮೊಹಮ್ಮದ್ ಫೈಜಾನ್, ರಾಜ್ಯವು ಸಹಾಯ ಮಾಡುವ ಬಾಧ್ಯತೆಯನ್ನು ಹೊಂದಿದೆ ಎಂದು ಹೇಳಿದರು. “ನ್ಯಾಯಾಲಯದ ಆದೇಶ ಅಂತಿಮವಾಗಿದ್ದರೂ ಸಹ, ಸರ್ಕಾರ ಮಧ್ಯಪ್ರವೇಶಿಸಬೇಕು. ಇವರು ಅಪರಾಧಿಗಳಲ್ಲ, ಬಲಿಪಶುಗಳು. ಅವರನ್ನು ವಂಚಿಸಲಾಗಿದೆ. ಅವರಿಗೆ ನ್ಯಾಯ ಬೇಕು, ಕೇವಲ ಬೀದಿಪಾಲಾಗುವುದಲ್ಲ” ಎಂದಿದ್ದಾರೆ.
ಭಾರತದಿಂದ ನಿರ್ಗಮಿಸಲು ಸಮಯಾವಕಾಶ ಕೋರಿದ ಪಾಕ್ ಅಪ್ರಾಪ್ತರು; ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ


