ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ದೇಶದ ಮೀಸಲಾತಿ ವ್ಯವಸ್ಥೆಯನ್ನು ರೈಲು ಪ್ರಯಾಣಕ್ಕೆ ಹೋಲಿಸಿದ್ದು, “ರೈಲು ಬೋಗಿಯಲ್ಲಿ ಸೀಟ್ ಭದ್ರಪಡಿಸಿಕೊಂಡ ಜನರು, ಇತರರು ಅದೇ ಬೋಗಿ ಪ್ರವೇಶಿಸುವುದನ್ನು ಬಯಸುವುದಿಲ್ಲ” ಎಂದಿದ್ದಾರೆ ಎಂದು livelaw.in ವರದಿ ಮಾಡಿದೆ.
ಮಹಾರಾಷ್ಟ್ರ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿ ಮೀಸಲಾತಿಗೆ ಸಂಬಂಧಿಸಿದ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್.ಕೆ ಸಿಂಗ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸುತ್ತಿತ್ತು. ಈ ವೇಳೆ ನ್ಯಾ. ಸೂರ್ಯಕಾಂತ್ ಅವರು ಮೇಲಿನ ಹೇಳಿಕೆ ನೀಡಿದ್ದಾರೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, “ಮಹಾರಾಷ್ಟ್ರದ ಬಂಥಿಯಾ ಆಯೋಗ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ), ಅವರು ರಾಜಕೀಯವಾಗಿ ಹಿಂದುಳಿದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳದೆ ಮೀಸಲಾತಿ ನೀಡಿದೆ. ರಾಜಕೀಯವಾಗಿ ಹಿಂದುಳಿದಿರುವುದು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಗಿಂತ ಭಿನ್ನವಾಗಿದೆ. ಒಬಿಸಿಗಳನ್ನು ರಾಜಕೀಯವಾಗಿ ಹಿಂದುಳಿದವರು ಎಂದು ಸ್ವಯಂಚಾಲಿತವಾಗಿ ಭಾವಿಸಲು ಸಾಧ್ಯವಿಲ್ಲ” ಎಂದಿದ್ದಾರೆ.
ಈ ವೇಳೆ ಮೌಖಿಕವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಅವರು “ಈ ದೇಶದಲ್ಲಿ ಮೀಸಲಾತಿ ಎನ್ನುವುದು ರೈಲು ಪ್ರಯಾಣದಂತಾಗಿದೆ. ಒಂದು ಬೋಗಿಗೆ ಈಗಾಗಲೇ ಪ್ರವೇಶಿಸಿದವರು ಬೇರೆ ಯಾರೂ ಆ ಬೋಗಿ ಪ್ರವೇಶಿಸುವುದನ್ನು ಬಯಸುವುದಿಲ್ಲ. ಇದು ಇಡೀ ಗೇಮ್, ನಿಖರವಾಗಿ ಅರ್ಜಿದಾರರ ಗೇಮ್ ಕೂಡ ಇದೇ ಆಗಿದೆ” ಎಂದು ಹೇಳಿದ್ದಾರೆ.
ನ್ಯಾಯಮೂರ್ತಿಗಳ ಹೇಳಿಕೆಗೆ ಧ್ವನಿಗೂಡಿಸಿದ ವಕೀಲ ಶಂಕರನಾರಾಯಣ್ ಅವರು,”ಹಿಂಭಾಗದಲ್ಲಿ ಬೋಗಿಗಳನ್ನು ಕೂಡ ಸೇರಿಸಲಾಗುತ್ತಿದೆ” ಎಂದಿದ್ದಾರೆ.
“ಒಳಗೊಳ್ಳುವಿಕೆಯ ತತ್ವವನ್ನು ಅನುಸರಿಸುವಾಗ, ರಾಜ್ಯಗಳು ಹೆಚ್ಚಿನ ವರ್ಗಗಳನ್ನು ಗುರುತಿಸಬೇಕಾಗುತ್ತದೆ. ಸಾಮಾಜಿಕವಾಗಿ ಹಿಂದುಳಿದ ವರ್ಗ, ರಾಜಕೀಯವಾಗಿ ಹಿಂದುಳಿದ ವರ್ಗ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು ಇರುತ್ತವೆ. ಅವರು ಏಕೆ ಪ್ರಯೋಜನದಿಂದ ವಂಚಿತರಾಗಬೇಕು? ಮೀಸಲಾತಿಯನ್ನು ಒಂದು ನಿರ್ದಿಷ್ಟ ಕುಟುಂಬ ಅಥವಾ ಗುಂಪುಗಳಿಗೆ ಏಕೆ ಸೀಮಿತಗೊಳಿಸಬೇಕು?” ಎಂದು ನ್ಯಾಯಮೂರ್ತಿ ಸೂರ್ಯಾಂತ್ ಮೌಖಿಕವಾಗಿ ಹೇಳಿದ್ದಾರೆ. ಅರ್ಜಿದಾರರು ಕೂಡ ಅದೇ ವಿಷಯವನ್ನು ಎತ್ತುತ್ತಿದ್ದಾರೆ ಎಂದು ಶಂಕರನಾರಾಯಣನ್ ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಒಬಿಸಿ ಮೀಸಲಾತಿ ಸಮಸ್ಯೆಯಿಂದಾಗಿ ಮಹಾರಾಷ್ಟ್ರ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಬಹಳ ದಿನಗಳಿಂದ ಬಾಕಿ ಉಳಿದಿರುವ ಚುನಾವಣೆಗಳನ್ನು ಮತ್ತಷ್ಟು ವಿಳಂಬ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಮೌಖಿಕವಾಗಿ ಹೇಳಿದೆ. ರಾಜ್ಯದ ಅಭಿಪ್ರಾಯಗಳನ್ನು ಕೇಳಲು ಪೀಠವು ವಿಚಾರಣೆಯನ್ನು ಮುಂದೂಡಿದೆ ಎಂದು livelaw.in ವರದಿ ಹೇಳಿದೆ.
ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ ಕುರಿತು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆಗಸ್ಟ್ 2022ರಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿದ ನಂತರ ಚುನಾವಣೆಗಳನ್ನು ಮುಂದೂಡಲಾಗಿತ್ತು.
ಮತ್ತೊಂದು ವರದಿಯಲ್ಲಿ, ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಾಲ್ಕು ವಾರಗಳಲ್ಲಿ ಪ್ರಕಟಿಸುವಂತೆ ಸುಪ್ರೀಂಕೋರ್ಟ್ ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಈ ಚುನಾವಣೆಯಲ್ಲಿ ಒಬಿಸಿ ಮೀಸಲಾತಿಯ ವಿವಾದಾತ್ಮಕ ವಿಷಯವು 2022ರ ಬಂಥಿಯಾ ಆಯೋಗದ ವರದಿಯ ಮೊದಲು ಅಸ್ತಿತ್ವದಲ್ಲಿದ್ದಂತೆಯೇ ಇರುತ್ತದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರ ಪೀಠ ತಿಳಿಸಿದೆ ಎಂದು ಹೇಳಲಾಗಿದೆ.


