ವಕ್ಫ್ (ತಿದ್ದುಪಡಿ) ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮತ್ತು ಅದರ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರನ್ನು ಟೀಕಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆಯನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ.
“ದುಬೆ ಅವರ ಹೇಳಿಕೆಗಳು ಸಾರ್ವಜನಿಕರ ದೃಷ್ಟಿಯಲ್ಲಿ ನ್ಯಾಯಾಲಯಗಳ ಮೇಲಿನ ವಿಶ್ವಾಸಾರ್ಹತೆಯನ್ನು ಅಲುಗಾಡಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ. ನ್ಯಾಯಾಂಗದ ಅಧಿಕಾರವನ್ನು ದುರ್ಬಲಗೊಳಿಸುವ ಮತ್ತು ಕಾನೂನು ವ್ಯವಸ್ಥೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುವ ಪ್ರಯತ್ನಗಳ ಬಗೆಗಿನ ದೊಡ್ಡ ಕಳವಳವನ್ನು ಇದು ಸೂಚಿಸುತ್ತದೆ” ಎಂದು ಮೇ 5ರಂದು ಹೊರಡಿಸಲಾದ ಆದೇಶದಲ್ಲಿ ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿ.ವಿ ಸಂಜಯ್ ಕುಮಾರ್ ಅವರ ಪೀಠ ಹೇಳಿದೆ ಎಂದು barandbench.com ವರದಿ ಮಾಡಿದೆ.
“ಭಾರತದಲ್ಲಿ ನಡೆಯುತ್ತಿರುವ ಎಲ್ಲಾ ಅಂತರ್ಯುದ್ಧಗಳಿಗೆ ಮುಖ್ಯ ನ್ಯಾಯಮೂರ್ತಿ ಜವಾಬ್ದಾರರು ಎಂದು ಹೇಳುವ ಮೂಲಕ, ಸುಪ್ರೀಂ ಕೋರ್ಟ್ ಧಾರ್ಮಿಕ ಯುದ್ಧಗಳನ್ನು ಪ್ರಚೋದಿಸುತ್ತಿದೆ ಎಂಬರ್ಥದಲ್ಲಿ ದುಬೆ ಮಾತನಾಡಿದ್ದಾರೆ. ಇದು ಅವರ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ” ಎಂದು ನ್ಯಾಯಪೀಠ ಹೇಳಿದೆ.
ಆದಾಗ್ಯೂ, ಅರ್ಜಿದಾರರಾದ ವಿಶಾಲ್ ತಿವಾರಿ ಕೋರಿದಂತೆ ದುಬೆ ವಿರುದ್ಧ ಯಾವುದೇ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲು ನ್ಯಾಯಾಲಯ ನಿರಾಕರಿಸಿದೆ.
ನ್ಯಾಯಪೀಠವು ನ್ಯಾಯಾಂಗ ನಿಂದನೆ ಎಂದು ಪರಿಗಣಿಸದಿದ್ದರೂ, ದುಬೆ ಹೇಳಿಕೆಗಳು 1971ರ ನ್ಯಾಯಾಂಗದ ನಿಂದನೆ ಕಾಯ್ದೆಯ ಅಡಿಯಲ್ಲಿ ಒದಗಿಸಲಾದ ವಿನಾಯಿತಿಗಳ ಅಡಿಯಲ್ಲಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ವರದಿ ಹೇಳಿದೆ.
“ದುಬೆ ಅವರ ಹೇಳಿಕೆಗಳು ಸಾಂವಿಧಾನಿಕ ನ್ಯಾಯಾಲಯಗಳ ಪಾತ್ರ ಮತ್ತು ಸಂವಿಧಾನದ ಅಡಿಯಲ್ಲಿ ಅವುಗಳಿಗೆ ನೀಡಲಾದ ಕರ್ತವ್ಯಗಳು ಮತ್ತು ಬಾಧ್ಯತೆಗಳ ಬಗ್ಗೆ ಅಜ್ಞಾನವನ್ನು ತೋರಿಸುತ್ತವೆ” ಎಂದು ನ್ಯಾಯಾಲಯ ತಿಳಿಸಿದೆ.
“ನಿರ್ದಿಷ್ಟವಾಗಿ ಹೇಳುವುದಾದರೆ, ಯಾವುದೇ ದ್ವೇಷ ಭಾಷಣ ಮತ್ತು ಕೋಮು ದ್ವೇಷವನ್ನು ಹರಡುವ ಪ್ರಯತ್ನಗಳನ್ನು ಕಠಿಣವಾಗಿ ಎದುರಿಸಬೇಕು” ಎಂದಿದೆ.
“ಒಂದು ನಿರ್ದಿಷ್ಟ ಗುಂಪನ್ನು ದೂರವಿಡುವ ಅಥವಾ ಅವಮಾನಿಸುವ ಯಾವುದೇ ಪ್ರಯತ್ನವು ಕ್ರಿಮಿನಲ್ ಅಪರಾಧವಾಗಿದ್ದು, ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಬೇಕು” ಎಂದು ಒತ್ತಿ ಹೇಳಿದೆ.
ದೇಶದಲ್ಲಿ “ಅಂತರ್ಯುದ್ಧ ಉಂಟಾದರೆ” ಅದಕ್ಕೆ ಸಿಜೆಐ ಖನ್ನಾ ಅವರೇ ನೇರ ಕಾರಣ. ಸುಪ್ರೀಂ ಕೋರ್ಟ್ ಕಾನೂನುಗಳನ್ನು ರೂಪಿಸುವುದಾದರೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳನ್ನು ಮುಚ್ಚಿ” ಎಂದು ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ಎಎನ್‌ಐ) ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ದುಬೆ ಹೇಳಿದ್ದರು. ವಕ್ಫ್ (ತಿದ್ದುಪಡಿ) ಕಾಯ್ದೆಗೆ ಸಿಜೆಐ ನೇತೃತ್ವದ ಪೀಠ ತಡೆಯಾಜ್ಞೆ ನೀಡಿದ ನಂತರ ಈ ಹೇಳಿಕೆಗಳನ್ನು ನೀಡಿದ್ದರು.
ವಕೀಲ ವಿಶಾಲ್ ತಿವಾರಿ ಅವರು ದುಬೆ ಹೇಳಿಕೆ ವಿರುದ್ದ ನ್ಯಾಯಾಲಯದ ಮೆಟ್ಟಿಲೇರಿದರು, ದುಬೆ ಅವರ ಸಂದರ್ಶನವು ನ್ಯಾಯಾಂಗ ಮತ್ತು ಸುಪ್ರೀಂ ಕೋರ್ಟ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳಿಂದ ಕೂಡಿದೆ ಎಂದು ಆರೋಪಿಸಿದ್ದರು. ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕೆಂದು ತಿವಾರಿ ಕೋರಿದ್ದರು.
ಮಹಿಳೆಯ ಲೈಂಗಿಕ ಇತಿಹಾಸದ ಆಧಾರದ ಮೇಲೆ ಆಕೆಯ ಒಪ್ಪಿಗೆ ಊಹಿಸಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್


