ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿರುವ ಹಿನ್ನೆಲೆ, ಮಾಧ್ಯಮಗಳು ವಾಸ್ತವಿಕ ಮತ್ತು ಜವಾಬ್ದಾರಿಯುತ ವರದಿ ಮಾಡಬೇಕಾದ ಅಗತ್ಯವನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಒತ್ತಿ ಹೇಳಿದ್ದಾರೆ.
ವೈಷ್ಣವ್ ಅವರು ಮುದ್ರಣ ಮಾಧ್ಯಮಗಳ ಅಥವಾ ಪ್ರಮುಖ ಪತ್ರಿಕೆಗಳ ಹಿರಿಯ ಸಂಪಾದಕರೊಂದಿಗೆ ಶುಕ್ರವಾರ (ಮೇ.9) ಚರ್ಚೆ ನಡೆಸಿದ್ದು, ಭಾರತ-ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಪರಿಶೀಲಿಸದ ಮೂಲಗಳನ್ನು ಅವಲಂಬಿಸದಂತೆ ಮನವಿ ಮಾಡಿದ್ದಾರೆ ಎಂದು deccanherald.com ವರದಿ ಮಾಡಿದೆ.
ರಕ್ಷಣಾ ಕಾರ್ಯಾಚರಣೆಗಳು ಮತ್ತು ಭದ್ರತಾ ಪಡೆಗಳ ಚಲನವಲನಗಳ ನೇರ ಪ್ರಸಾರ ಅಥವಾ ನೈಜ-ಸಮಯದ ವರದಿ ಮಾಡುವುದನ್ನು ತಡೆಯುವಂತೆ ಸಚಿವರು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸಲಹೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಹೊರಡಿಸಿದ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.
ಭಾರತೀಯ ಸಶಸ್ತ್ರ ಪಡೆಗಳು ತೆಗೆದುಕೊಂಡ ಕ್ರಮ ಭಯೋತ್ಪಾದನೆಯ ವಿರುದ್ಧವೇ ಹೊರತು, ಯಾವುದೇ ದೇಶ ಅಥವಾ ಸಮುದಾಯದ ವಿರುದ್ಧವಲ್ಲ ಎಂದು ವೈಷ್ಣವ್ ಸ್ಪಷ್ಟಪಡಿಸಿದ್ದಾರೆ ಎಂದು ವರದಿ ಹೇಳಿದೆ.
ಸಚಿವ ವೈಷ್ಣವ್ ಅವರು ಎಲ್ಲಿ ಮತ್ತು ಯಾವ ಪತ್ರಿಕಾ ಸಂಪಾದಕರ ಜೊತೆ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ರಾಜೌರಿಯಲ್ಲಿ ಪಾಕಿಸ್ತಾನದಿಂದ ಶೆಲ್ ದಾಳಿ: ಹೆಚ್ಚುವರಿ ಜಿಲ್ಲಾಧಿಕಾರಿ, ಇಬ್ಬರು ನಾಗರಿಕರ ಸಾವು


