ಕರ್ನಲ್ ಸೋಫಿಯಾ ಖುರೇಷಿಯನ್ನು ‘ಭಯೋತ್ಪಾದಕರ ಸಹೋದರಿ’ ಎಂದು ಕರೆದಿದ್ದ ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ಸಚಿವ ಕುನ್ವರ್ ವಿಜಯ್ ಶಾಗೆ ಸುಪ್ರೀಂ ಕೋರ್ಟ್ ಗುರುವಾರ (ಮೇ.15) ಛೀಮಾರಿ ಹಾಕಿದೆ ಎಂದು ವರದಿಯಾಗಿದೆ.
ತನ್ನ ವಿರುದ್ದ ಎಫ್‌ಐಆರ್ ದಾಖಲಿಸುವಂತೆ ಮಧ್ಯಪ್ರದೇಶ ಹೈಕೋರ್ಟ್ ಮೇ 14 ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಶಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು, ವಿಜಯ್ ಶಾ ಸಂವೇದನಾರಹಿತ ಹೇಳಿಕೆ ನೀಡಿದ್ದು, ಸ್ವೀಕಾರ್ಹವಲ್ಲ ಎಂದಿದ್ದಾರೆ. “ನೀವು ಯಾವ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದೀರಾ?” ಎಂದು ಶಾಗೆ ಛೀಮಾರಿ ಹಾಕಿದ್ದು, ಹೋಗಿ ಹೈಕೋರ್ಟ್‌ನಲ್ಲಿ ಕ್ಷಮೆಯಾಚಿಸಿ ಎಂದು ಖಾರವಾಗಿ ಹೇಳಿದ್ದಾರೆ. ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳು ತಮ್ಮ ಸಾರ್ವಜನಿಕ ಹೇಳಿಕೆಗಳಲ್ಲಿ ಎಚ್ಚರಿಕೆ ಮತ್ತು ಸಂಯಮ ವಹಿಸಬೇಕು ಎಂದು ತಿಳಿಸಿದ್ದಾರೆ.
ಎಫ್‌ಐಆರ್ ದಾಖಲಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶದಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ ಎಂದು ವರದಿಯಾಗಿದೆ.
ಕರ್ನಲ್ ಸೋಫಿಯಾ ಖುರೇಷಿ ವಿರುದ್ದದ ವಿಜಯ್ ಶಾ ಹೇಳಿಕೆ ವಿಷಯವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಮಧ್ಯಪ್ರದೇಶ ಹೈಕೋರ್ಟ್, ಶಾ ವಿರುದ್ದ ಎಫ್‌ಐಆರ್ ದಾಖಲಿಸುವಂತೆ ಬುಧವಾರ ಪೊಲೀಸರಿಗೆ ಆದೇಶಿಸಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ತನ್ನ ಆದೇಶವನ್ನು ವಿಳಂಬವಿಲ್ಲದೆ ಪಾಲಿಸುವಂತೆ ಹೈಕೋರ್ಟ್ ಸೂಚಿಸಿದೆ. ಒಂದು ವೇಳೆ ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಹೈಕೋರ್ಟ್ ಆದೇಶದ ಬೆನ್ನಲ್ಲೇ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 152, 196(1)(ಬಿ), ಮತ್ತು 197(1)(ಸಿ) ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಸಚಿವ ವಿಜಯ್ ಶಾ ಹೇಳಿಕೆಯು ಪ್ರಾಥಮಿಕವಾಗಿ ಮುಸ್ಲಿಮರು ಮತ್ತು ಇತರ ನಂಬಿಕೆಯ ಜನರ ನಡುವೆ ದ್ವೇಷ ಭಾವನೆ ಉಂಟು ಮಾಡುವ ಲಕ್ಷಣ ಹೊಂದಿದೆ ಎಂದು ನ್ಯಾಯಮೂರ್ತಿ ಅತುಲ್ ಶ್ರೀಧರನ್ ಮತ್ತು ನ್ಯಾಯಮೂರ್ತಿ ಅನುರಾಧಾ ಶುಕ್ಲಾ ಅವರನ್ನೊಳಗೊಂಡ ಮಧ್ಯಪ್ರದೇಶ ಹೈಕೋರ್ಟ್‌ನ ವಿಭಾಗೀಯ ಪೀಠ ಹೇಳಿದೆ.
ತನ್ನ ಆದೇಶವನ್ನು ವಿಳಂಬ ಮಾಡದೆ ಪಾಲಿಸಲು, ಅದರ ಪ್ರತಿಯನ್ನು ತಕ್ಷಣ ಡಿಜಿಪಿ ಕಚೇರಿಗೆ ರವಾನಿಸುವಂತೆ ಸರ್ಕಾರದ ಪರ ಅಡ್ವೊಕೇಟ್ ಜನರಲ್‌ಗೆ ಹೈಕೋರ್ಟ್ ಬುಧವಾರ ಆದೇಶಿಸಿತ್ತು.
“ಮಧ್ಯಪ್ರದೇಶ ಹೈಕೋರ್ಟ್ ಆದೇಶದ ನಂತರ, ಮುಖ್ಯಮಂತ್ರಿಗಳು ಸಂಪುಟ ಸಚಿವ ವಿಜಯ್ ಶಾ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಸೂಚನೆಗಳನ್ನು ನೀಡಿದ್ದಾರೆ” ಎಂದು ಮಧ್ಯಪ್ರದೇಶ ಸಿಎಂ ಕಚೇರಿಯು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ತನ್ನ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕ್ಷಮೆಯಾಚನೆ ಮಾಡಿರುವ ಸಚಿವ ವಿಜಯ್ ಶಾ”ನಾನು ಕರ್ನಲ್ ಸೋಫಿಯಾ ಖುರೇಷಿ ಅವರ ಧೈರ್ಯವನ್ನು ಶ್ಲಾಘಿಸುವ ಉದ್ದೇಶದಿಂದ ಆ ಹೇಳಿಕೆ ನೀಡಿದ್ದೆ” ಎಂದಿದ್ದಾರೆ.


