ಲಖನೌ: ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ವಿರುದ್ಧ ಮಧ್ಯಪ್ರದೇಶ ಸಚಿವ ವಿಜಯ್ ಶಾ ಅವರು ಮಾಡಿರುವ ‘ಪಾಕಿಸ್ತಾನ ಭಯೋತ್ಪಾದಕರ ಸಹೋದರಿ’ ಹೇಳಿಕೆಯನ್ನು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಗುರುವಾರ ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಬಿಜೆಪಿಯಿಂದ ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಕುರಿತು ಬಿಜೆಪಿಯ ಕ್ರಮಕ್ಕಾಗಿ ಇಡೀ ದೇಶದ ಜನತೆ ಕೇವಲ ಎಫ್ಐಆರ್ ಮಾತ್ರ ನಿರೀಕ್ಷಿಸುತ್ತಿಲ್ಲ, ರಾಷ್ಟ್ರೀಯ ಏಕತೆ ಮತ್ತು ಘನತೆಯನ್ನು ಎತ್ತಿಹಿಡಿಯಲು ಪರಿಪೂರ್ಣ ಕ್ರಮಕ್ಕಾಗಿ ಕಾಯುತ್ತಿದೆ ಎಂದು ಅವರು ಹೇಳಿದರು.
ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಮೂಲಕ ಭಾರತದ ಮಿಲಿಟರಿ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದ ಮಾಯಾವತಿ, ಕಾರ್ಯಾಚರಣೆಯ ಸಮಯದಲ್ಲಿ ಪ್ರಮುಖ ವಕ್ತಾರೆಯಾಗಿದ್ದ ಮುಸ್ಲಿಂ ಮಹಿಳಾ ಸೇನಾ ಅಧಿಕಾರಿಯನ್ನು ಅವಹೇಳನಕಾರಿ ಹೇಳಿಕೆಗಳಿಂದ ಗುರಿಯಾಗಿಸಿಕೊಂಡಿರುವುದು ತೀವ್ರ ಅನುಚಿತವಾಗಿದೆ ಎಂದು ಹೇಳಿದರು.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬುಧವಾರ ವಿಜಯ್ ಶಾ ಅವರ ಹೇಳಿಕೆಗಳನ್ನು ಟೀಕಿಸಿದರು, ಅವುಗಳನ್ನು ಅಸಭ್ಯ ಮತ್ತು ಸೇನೆಯ ಯಶಸ್ಸಿನ ಬಗ್ಗೆ ದೇಶದ ಸಾಮೂಹಿಕ ಹೆಮ್ಮೆಗೆ ಹಾನಿ ಮಾಡುವ ಪ್ರಯತ್ನ ಎಂದು ಕರೆದರು.
“ಪಹಲ್ಗಾಮ್ ದಾಳಿಯ ನಂತರ, ಮಧ್ಯಪ್ರದೇಶದ ಹಿರಿಯ ಸಚಿವರು ಆಗಿರುವ ಇವರು ಆಪರೇಷನ್ ಸಿಂಧೂರ್ ಸಮಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಮುಸ್ಲಿಂ ಮಹಿಳಾ ಕರ್ನಲ್ ಬಗ್ಗೆ ಅಸಭ್ಯ ಹೇಳಿಕೆಗಳನ್ನು ನೀಡಿದ್ದಾರೆ. ಹೈಕೋರ್ಟ್‌ನ ಕಠಿಣ ನಿಲುವಿನ ನಂತರ ನಿನ್ನೆ ತಡರಾತ್ರಿ ದಾಖಲಾಗಿರುವ ಎಫ್‌ಐಆರ್ ಸಮರ್ಥನೀಯ ಹೆಜ್ಜೆಯಾಗಿದ್ದರೂ, ದೇಶವು ಇನ್ನೂ ಬಿಜೆಪಿ ಕಡೆಯಿಂದ ಕ್ರಮಕ್ಕಾಗಿ ಕಾಯುತ್ತಿದೆ” ಎಂದು ಮಯಾವತಿಯವರು ಗುರುವಾರ X ಪೋಸ್ಟ್ ಮಾಡಿದ್ದಾರೆ.
ಕೋಮು ಮತ್ತು ಜಾತಿ ಆಧಾರಿತ ದ್ವೇಷ, ಹಿಂಸಾಚಾರ ಮತ್ತು ಉದ್ವಿಗ್ನತೆ ಹೆಚ್ಚಾಗುತ್ತಿರುವುದು ದೇಶದ ಪ್ರಗತಿಗೆ ಅಪಾಯವನ್ನುಂಟುಮಾಡುತ್ತದೆ ಎಂದು ಮಾಯಾವತಿ ಎಚ್ಚರಿಸಿದ್ದಾರೆ. “ರಾಜ್ಯ ಸರ್ಕಾರಗಳು ದ್ವೇಷ ಮತ್ತು ಅಶಾಂತಿಯನ್ನು ಹರಡುವವರ ವಿರುದ್ಧ ಪಕ್ಷಪಾತವಿಲ್ಲದೆ ವರ್ತಿಸಬೇಕು. ಹಾಗೆ ಮಾಡಲು ವಿಫಲವಾದರೆ ಅವರ ಸಾಂವಿಧಾನಿಕ ಜವಾಬ್ದಾರಿಯನ್ನು ಉಲ್ಲಂಘಿಸುವುದಲ್ಲದೆ, ಹೆಚ್ಚು ಅಗತ್ಯವಿರುವ ಅಭಿವೃದ್ಧಿಯನ್ನು ಹಳಿತಪ್ಪಿಸುತ್ತದೆ” ಎಂದು ಅವರು ಹೇಳಿದರು.
ಇತ್ತೀಚೆಗೆ ಇಂದೋರ್‌ನ ಗ್ರಾಮೀಣ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಧ್ಯಪ್ರದೇಶದ ಬುಡಕಟ್ಟು ವ್ಯವಹಾರಗಳ ಸಚಿವ ವಿಜಯ್ ಶಾ, ಕರ್ನಲ್ ಖುರೇಷಿ ಅವರನ್ನು ನೇರವಾಗಿ ಹೆಸರಿಸದೆ ಉಲ್ಲೇಖಿಸಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ನಂತರ ವಿವಾದ ಭುಗಿಲೆದ್ದಿತು.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರೊಂದಿಗೆ ಆಪರೇಷನ್ ಸಿಂಧೂರ್ ಕುರಿತು ಮಾಧ್ಯಮ ಸಭೆಗಳಲ್ಲಿ ಖುರೇಷಿ ಮುಂಚೂಣಿಯಲ್ಲಿದ್ದರು. ಸಾರ್ವಜನಿಕ ಆಕ್ರೋಶ ಮತ್ತು ಮಧ್ಯಪ್ರದೇಶ ಹೈಕೋರ್ಟ್‌ನ ಕಠಿಣ ನಿರ್ದೇಶನದ ನಂತರ, ಬುಧವಾರ ರಾತ್ರಿ ಮನ್ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಸೆಕ್ಷನ್ 152 (ರಾಷ್ಟ್ರೀಯ ಏಕತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳು), ಸೆಕ್ಷನ್ 196(1)(ಬಿ) (ಕೋಮು ಸಾಮರಸ್ಯಕ್ಕೆ ಹಾನಿ ಮಾಡುವ ಕೃತ್ಯಗಳು), ಮತ್ತು ಸೆಕ್ಷನ್ 197(1)(ಸಿ) (ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ಹೇಳಿಕೆಗಳು) ಸೇರಿದಂತೆ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ.
ಯಾರಿಗಾದರೂ ನೋವಾಗಿದ್ದರೆ “ಹತ್ತು ಬಾರಿ” ಕ್ಷಮೆಯಾಚಿಸಲು ಸಿದ್ಧ ಎಂದು ವಿಜಯ್ ಶಾ ನಂತರ ಹೇಳಿದ್ದರು ಮತ್ತು ಕರ್ನಲ್ ಖುರೇಷಿಯನ್ನು ತನ್ನ ಸಹೋದರಿಗಿಂತ ಹೆಚ್ಚಾಗಿ ಗೌರವಿಸುತ್ತೇನೆ ಎಂದಿದ್ದರು.
ಬಿಹಾರ: ದನ ಕಳ್ಳತನ ಆರೋಪದ ಮೇಲೆ ಸಹೋದರರ ಮೇಲೆ ಬ್ಯಾಟ್-ವಿಕೆಟ್‌ನಿಂದ ಹಲ್ಲೆ; ಓರ್ವ ಸಾವು


