ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಹಿಸಾರ್ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಸೇರಿದಂತೆ ಹರಿಯಾಣ ಮತ್ತು ಪಂಜಾಬ್‌ನಾದ್ಯಂತ ಎರಡು ವಾರಗಳಲ್ಲಿ ಒಂಬತ್ತು ಜನರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
‘ಟ್ರಾವೆಲ್ ವಿತ್ ಜೋ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಜ್ಯೋತಿ ಮಲ್ಹೋತ್ರಾ ಅವರನ್ನು ಹಿಸಾರ್‌ನ ನ್ಯೂ ಅಗರ್‌ವಾಲ್ ಎಕ್ಸ್‌ಟೆನ್ಶನ್ ಪ್ರದೇಶದಿಂದ ಬಂಧಿಸಲಾಗಿದೆ. ಅವರು ಯೂಟ್ಯೂಬ್‌ನಲ್ಲಿ 3.77 ಲಕ್ಷ ಚಂದಾದಾರರನ್ನು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 1.32 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ ಬಗ್ಗೆ ವಿಡಿಯೋಗಳನ್ನು ಸಹ ಪೋಸ್ಟ್ ಮಾಡಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಹಿಸಾರ್ ಪೊಲೀಸರು ಜ್ಯೋತಿ ಮಲ್ಹೋತ್ರಾ ವಿರುದ್ದ ಎಫ್‌ಐಆರ್ ದಾಖಲಿಸಿ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆಕೆಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಸಬ್-ಇನ್ಸ್‌ಪೆಕ್ಟರ್ ಬಿಜೇಂದರ್ ಸಿಂಗ್ ಅವರ ದೂರಿನ ಮೇರೆಗೆ ಜ್ಯೋತಿ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 3 ಮತ್ತು 5 ಹಾಗೂ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 152 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಫ್‌ಐಆರ್‌ನಲ್ಲಿ, ಜ್ಯೋತಿ ಮಲ್ಹೋತ್ರಾ ನವದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಸಿಬ್ಬಂದಿಯಾಗಿದ್ದ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಅವರ ಜೊತೆ ಸಂಪರ್ಕ ಹೊಂದಿದ್ದು, 2023 ರಲ್ಲಿ ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಡ್ಯಾನಿಶ್ ಅವರ ಹ್ಯಾಂಡ್ಲರ್ ಆಗಿ ಕಾರ್ಯನಿರ್ವಹಿಸಿದ್ದರು. ಅವರನ್ನು ಐಎಸ್‌ಐ ಕಾರ್ಯಕರ್ತರಿಗೆ ಪರಿಚಯಿಸಿದ್ದರು ಮತ್ತು ಎನ್‌ಕ್ರಿಪ್ಟ್ ಮಾಡಿದ ವೇದಿಕೆಗಳ ಮೂಲಕ ನಿಯಮಿತ ಸಂಪರ್ಕವನ್ನು ಸಾಧಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
“2023 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಅಲಿ ಎಹ್ವಾನ್ ಅವರನ್ನು ಭೇಟಿಯಾಗಿದ್ದೆ, ಅವರು ತನಗೆ ವಾಸ್ತವ್ಯ ಮತ್ತು ಪ್ರಯಾಣದ ವ್ಯವಸ್ಥೆಯನ್ನು ಮಾಡಿದ್ದರು ಎಂದು ಜ್ಯೋತಿ ಬಹಿರಂಗಪಡಿಸಿದ್ದಾರೆ. ಅಲಿ ಜ್ಯೋತಿ ಅವರನ್ನು ಶಕೀರ್ ಮತ್ತು ರಾಣಾ ಶಹಬಾಜ್ ಸೇರಿದಂತೆ ಪಾಕಿಸ್ತಾನಿ ಭದ್ರತಾ ಮತ್ತು ಗುಪ್ತಚರ ಅಧಿಕಾರಿಗಳಿಗೆ ಎಹ್ವಾನ್ ಪರಿಚಯಿಸಿದ್ದರು” ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಹಿಸಾರ್ ಪೊಲೀಸ್ ವಕ್ತಾರ ವಿಕಾಸ್ ಕುಮಾರ್ ಅವರು ಜ್ಯೋತಿ ಮಲ್ಹೋತ್ರಾ ಬಂಧನವನ್ನು ದೃಢಪಡಿಸಿದ್ದು, ಹೆಚ್ಚಿನ ಮಾಹಿತಿ ಪಡೆಯಲು ಅಧಿಕಾರಿಗಳು ಜ್ಯೋತಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಹೇಳಿದ್ದಾರೆ. ಭಾರತ ಸರ್ಕಾರ ನವದೆಹಲಿಯ ಪಾಕಿಸ್ತಾನ ಹೈಕಮಿಷನ್ ಸಿಬ್ಬಂದಿಯಾಗಿದ್ದ ಡ್ಯಾನಿಶ್ ಅವರನ್ನು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಿ ಮೇ 13 ರಂದು ಪಾಕಿಸ್ತಾನಕ್ಕೆ ಕಳಿಸಿದೆ.
ಪ್ರತ್ಯೇಕ ಪ್ರಕರಣವೊಂದರಲ್ಲಿ, ಐಎಸ್‌ಐ ಕಾರ್ಯಕರ್ತರಿಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ ಕಾರ್ಖಾನೆಯ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಕೈರಾನಾದ 24 ವರ್ಷದ ಯುವಕ ನೌಮನ್ ಇಲಾಹಿ ಎಂಬಾತನ್ನು ಪಾಣಿಪತ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತ ತನ್ನ ಸಹೋದರಿ ಜೀನತ್ ಮತ್ತು ಸೋದರ ಮಾವ ಇರ್ಫಾನ್ ಜೊತೆ ಪಾಣಿಪತ್‌ನ ಹಲಿ ಕಾಲೋನಿಯಲ್ಲಿ ವಾಸಿಸುತ್ತಿದ್ದರು.
ಮೇ 12ರಂದು, ಹರಿಯಾಣದ ಕೈಥಾಲ್ ಜಿಲ್ಲೆಯ ಗುಹ್ಲಾ ಪ್ರದೇಶದ 25 ವರ್ಷದ ದೇವೇಂದರ್ ಸಿಂಗ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಕ್ಕಾಗಿ ಬಂಧಿಸಲಾಗಿತ್ತು. ಪಂಜಾಬ್‌ನ ಕಾಲೇಜಿನಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಸಿಂಗ್, ಕಳೆದ ವರ್ಷ ಪಾಕಿಸ್ತಾನದ ನಂಕಾನಾ ಸಾಹಿಬ್‌ಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ, ಅವರು ಪಾಕಿಸ್ತಾನಿ ಗುಪ್ತಚರ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ್ದರು. ಭಾರತಕ್ಕೆ ಹಿಂದಿರುಗಿದ ನಂತರವೂ ಅವರ ಜೊತೆ ಸಂಪರ್ಕದಲ್ಲಿದ್ದರು ಎಂದು ಆರೋಪಿಸಲಾಗಿದೆ.
ಪಟಿಯಾಲ ಕಂಟೋನ್ಮೆಂಟ್‌ನ ಫೋಟೋಗಳನ್ನು ಹೊರಗಿನಿಂದ ತೆಗೆದು ಕಳುಹಿಸಿದ್ದಾಗಿ ಸಿಂಗ್ ಒಪ್ಪಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಟಿಂಡಾ ಕಂಟೋನ್ಮೆಂಟ್‌ನ ಒಳಗಿನ ಅಂಗಡಿಯಲ್ಲಿ ಎರಡು ವರ್ಷಗಳ ಕಾಲ ಟೈಲರ್ ಆಗಿ ಕೆಲಸ ಮಾಡಿದ್ದ ಉತ್ತರಾಖಂಡದ ರೂರ್ಕಿಯ ರಕೀಬ್ ಖಾನ್ ಅವರನ್ನು ಬೇಹುಗಾರಿಕೆ ಆರೋಪದ ಮೇಲೆ ಪಂಜಾಬ್ ಪೊಲೀಸರು ಮೇ 13ರಂದು ಬಂಧಿಸಿದರು. ಕಂಟೋನ್ಮೆಂಟ್ ಅಧಿಕಾರಿಗಳು ಅನುಮಾನಾಸ್ಪದ ಚಟುವಟಿಕೆಯನ್ನು ವರದಿ ಮಾಡಿದ್ದು, ಅವರ ಫೋನ್ ಅನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಲಾಗಿದೆ.
ರಕೀಬ್ ಖಾನ್ ಬಟಿಂಡಾ ಕಂಟೋನ್ಮೆಂಟ್ ಪ್ರದೇಶದಲ್ಲಿ ಬೇಹುಗಾರಿಕೆಗೆ ಆರೋಪದಲ್ಲಿ ಬಂಧನಕ್ಕೊಳಗಾದ ಎರಡನೇ ವ್ಯಕ್ತಿಯಾಗಿದ್ದಾರೆ. ಏಪ್ರಿಲ್ 29 ರಂದು, ಬಿಹಾರದ ಸಮಸ್ತಿಪುರದ ಚಮ್ಮಾರ ಸುನಿಲ್ ಕುಮಾರ್ ಅವರನ್ನು ಇದೇ ಪ್ರದೇಶದಲ್ಲಿ ಬಂಧಿಸಲಾಗಿತ್ತು. ಅವರು 2017 ರಿಂದ ಬಟಿಂಡಾ ಕಂಟೋನ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಧೋಬಿಯಾನಾ ಬಸ್ತಿಯಲ್ಲಿ ವಾಸಿಸುತ್ತಿದ್ದರು. ಅವರ ಸಹೋದರ ಮತ್ತು ಚಿಕ್ಕಪ್ಪ ಕೂಡ ಅದೇ ಪ್ರದೇಶದಲ್ಲಿ ಚಮ್ಮಾರರಾಗಿದ್ದಾರೆ. ಪೊಲೀಸರು ಅವರ ಬ್ಯಾಂಕ್ ಮತ್ತು ಆಸ್ತಿ ದಾಖಲೆಗಳನ್ನು ವಿಶ್ಲೇಷಿಸುತ್ತಿದ್ದಾರೆ ಮತ್ತು ಅವರ ಫೋನ್ ವಿಧಿವಿಜ್ಞಾನ ಪರೀಕ್ಷೆಯಲ್ಲಿದೆ.
ಮೇ 11ರಂದು, ದೆಹಲಿಯ ಹೈಕಮಿಷನ್‌ನಲ್ಲಿ ನಿಯೋಜಿಸಲಾದ ಪಾಕಿಸ್ತಾನಿ ಅಧಿಕಾರಿಗೆ ಸಹಾಯ ಮಾಡಿದ ಆರೋಪದ ಮೇಲೆ ಪಂಜಾಬ್ ಪೊಲೀಸರು 31 ವರ್ಷದ ಮಹಿಳೆ ಗುಜಲಾ ಮತ್ತು ಆಕೆಯ ಸಹಚರ ಮಲೇರ್ಕೋಟ್ಲಾದ ಯಮೀನ್ ಮೊಹಮ್ಮದ್ ಎಂಬವರನ್ನು ಬಂಧಿಸಿದ್ದರು. ಈ ಇಬ್ಬರೂ ದೊಡ್ಡ ಬೇಹುಗಾರಿಕೆ ಜಾಲದ ಭಾಗವಾಗಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.
ಇದಕ್ಕೂ ಮೊದಲು ಮೇ 3ರಂದು, ಸೇನಾ ಕಂಟೋನ್ಮೆಂಟ್‌ಗಳು ಮತ್ತು ವಾಯುನೆಲೆಗಳ ಫೋಟೋಗಳನ್ನು ತೆಗೆದುಕೊಂಡು ಸೂಕ್ಷ್ಮ ವಿವರಗಳನ್ನು ಹಂಚಿಕೊಂಡ ಆರೋಪದ ಮೇಲೆ ಪಾಲಕ್ ಶೇರ್ ಮಸಿಹ್ ಮತ್ತು ಸೂರಜ್ ಮಸಿಹ್ ಎಂಬ ಇಬ್ಬರು ವ್ಯಕ್ತಿಗಳನ್ನು ಅಮೃತಸರದಲ್ಲಿ ಬಂಧಿಸಲಾಗಿತ್ತು. ಅಮೃತಸರ ಕೇಂದ್ರ ಜೈಲಿನಲ್ಲಿರುವ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಪಿಟ್ಟು ಅಲಿಯಾಸ್ ಹ್ಯಾಪಿ ಮೂಲಕ ಅವರು ಐಎಸ್‌ಐ ಜೊತೆ ಸಂಪರ್ಕದಲ್ಲಿದ್ದರು ಎಂದು ವರದಿಯಾಗಿದೆ.
ಪೊಲೀಸ್ ಮೂಲಗಳು ಹೇಳುವಂತೆ, ಎಲ್ಲಾ ಒಂಬತ್ತು ವ್ಯಕ್ತಿಗಳು ಐಎಸ್‌ಐ ಜೊತೆ ಆಗಾಗ್ಗೆ ಸಂಪರ್ಕದಲ್ಲಿದ್ದರು ಮತ್ತು ಪಾಕಿಸ್ತಾನಿ ನಿರ್ವಾಹಕರಿಗೆ ಸೂಕ್ಷ್ಮ ಮಾಹಿತಿಯನ್ನು ಸಕ್ರಿಯವಾಗಿ ರವಾನಿಸುತ್ತಿದ್ದರು.
ಭಾರತ ಸರ್ಕಾರ ರೋಹಿಂಗ್ಯಾ ನಿರಾಶ್ರಿತರನ್ನು ಸಮುದ್ರಕ್ಕೆ ತಳ್ಳಿದ ಆರೋಪ: ಸಾಕ್ಷಿ ಕೇಳಿದ ಸುಪ್ರೀಂ ಕೋರ್ಟ್


