ಭಾರತೀಯ ಜನತಾ ಪಕ್ಷದ ಯುವ ವಿಭಾಗದ ಸದಸ್ಯರ ದೂರಿನ ಆಧಾರದ ಮೇಲೆ ಆಪರೇಷನ್ ಸಿಂಧೂರ್ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಅಶೋಕ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ಮತ್ತು ರಾಜಕೀಯ ವಿಜ್ಞಾನಿ ಅಲಿ ಖಾನ್ ಮಹ್ಮದಾಬಾದ್ ಅವರನ್ನು ಬಂಧಿಸಲಾಗಿದೆ.
ಹರಿಯಾಣದ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯೋಗೇಶ್ ಜಥೇರಿಯವರು ಪ್ರಾಧ್ಯಾಪಕರ ವಿರುದ್ಧ ದೂರು ನೀಡಿದ್ದರು. ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಹಾನಿಕರವಾದ ಕೃತ್ಯಗಳು, ಸಶಸ್ತ್ರ ದಂಗೆ ಅಥವಾ ವಿಧ್ವಂಸಕ ಚಟುವಟಿಕೆಗಳನ್ನು ಪ್ರಚೋದಿಸುವುದು ಮತ್ತು ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ. ಅವರನ್ನು ಗುರಿಯಾಗಿಸಿಕೊಂಡಿರುವುದರ ಬಗ್ಗೆ ಹೆಚ್ಚುತ್ತಿರುವ ಆಕ್ರೋಶದ ಮಧ್ಯೆ ಈ ಬಂಧನವಾಗಿದೆ.
ಹರಿಯಾಣ ಪೊಲೀಸರು ಡಾ. ಅಲಿ ಖಾನ್ ಅವರನ್ನು ಅಕ್ರಮವಾಗಿ ಬಂಧಿಸಿದ್ದಾರೆ. ರಾತ್ರಿ 8 ಗಂಟೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಮರುದಿನ ಬೆಳಿಗ್ಗೆ 7 ಗಂಟೆಗೆ ಪೊಲೀಸರು ಅವರ ಮನೆಗೆ ಬಂದು ಬಂಧಿಸಿಲಾಗಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಬರಹಗಾರ ಅಪೂರ್ವಾನಂದ್ ಹೇಳುತ್ತಾರೆ.
ಮೇ 8 ರಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮಹ್ಮದಾಬಾದ್ ಅವರು, ಹಿಂದುತ್ವ ವ್ಯಾಖ್ಯಾನಕಾರರು ಕರ್ನಲ್ ಸೋಫಿಯಾ ಖುರೇಷಿಯನ್ನು ಹೊಗಳುತ್ತಿರುವ ಸ್ಪಷ್ಟ ವ್ಯಂಗ್ಯವನ್ನು ಎತ್ತಿ ತೋರಿಸಿದ್ದರು. “ದೇಶದಲ್ಲಿ ನಡೆಯುತ್ತಿರುವ ಗುಂಪು ಹಲ್ಲೆ, ಅನಿಯಂತ್ರಿತ ಬುಲ್ಡೋಜರ್ ಮತ್ತು ಭಾರತೀಯ ಜನತಾ ಪಕ್ಷದ ದ್ವೇಷ ಪ್ರಚಾರದ ಬಲಿಪಶುಗಳಾದ ಇತರರನ್ನು ಭಾರತೀಯ ನಾಗರಿಕರಾಗಿ ರಕ್ಷಿಸಬೇಕೆಂದು ಅಷ್ಟೇ ಗಟ್ಟಿಯಾಗಿ ನಾವು ಅವರನ್ನು ಒತ್ತಾಯಿಸಬಹುದು” ಎಂದು ಶಿಕ್ಷಣ ತಜ್ಞ ಹೇಳಿದ್ದರು.
ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಅನುಸರಿಸಿ, ಹರಿಯಾಣ ರಾಜ್ಯ ಮಹಿಳಾ ಆಯೋಗವು ಮಹ್ಮದಾಬಾದ್ ಅವರ ಕಾಮೆಂಟ್‌ಗಳು “ಭಾರತೀಯ ಸಶಸ್ತ್ರ ಪಡೆಗಳಲ್ಲಿನ ಮಹಿಳಾ ಅಧಿಕಾರಿಗಳನ್ನು ಅವಹೇಳನಕಾರಿಯಾಗಿವೆ ಮತ್ತು ಕೋಮು ಸೌಹಾರ್ದತೆಯನ್ನು ಉತ್ತೇಜಿಸುತ್ತವೆ” ಎಂದು ಹೇಳಿಕೊಂಡಿತ್ತು.
ಮಹ್ಮದಾಬಾದ್ ಅವರು ತನ್ನ ಹೇಳಿಕೆಗಳನ್ನು ಆಯೋಗವು “ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಿಕೊಂಡಿದೆ” ಮತ್ತು ತನ್ನ ಪೋಸ್ಟ್‌ಗಳು “ಮಹಿಳೆಯರ ಹಕ್ಕು ಅಥವಾ ಕಾನೂನುಗಳಿಗೆ ವಿರುದ್ಧವಾಗಿವೆ” ಎಂಬುದನ್ನು ಎತ್ತಿ ತೋರಿಸುವಲ್ಲಿ ಅದು ವಿಫಲವಾಗಿದೆ ಎಂದು ಹೇಳಿದ್ದರು.
ರಾಜಕೀಯ ವಿಜ್ಞಾನಿ ಅಲಿ ಖಾನ್ ಮಹಮೂದಾಬಾದ್‌ಗೆ ಬೆಂಬಲ ವ್ಯಕ್ತಪಡಿಸಿ, ಶಿಕ್ಷಣ ತಜ್ಞರು, ರಾಜಕಾರಣಿಗಳು, ನಾಗರಿಕ ಸೇವಕರು ಸೇರಿದಂತೆ ಅನೇಕರು 1,200ಕ್ಕೂ ಹೆಚ್ಚು ಜನರು ಸಹಿ ಮಾಡಿದ ಮುಕ್ತ ಪತ್ರವು ಹರಿಯಾಣ ಮಹಿಳಾ ಆಯೋಗವು ಅವರಿಗೆ ನೀಡಿದ ಸಮನ್ಸ್ ಅನ್ನು ಹಿಂತೆಗೆದುಕೊಳ್ಳಬೇಕು ಮತ್ತು “ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶಪೂರ್ವಕವಾಗಿ ಅವರ ಮೇಲೆ ದೂಷಿಸಿದ್ದಕ್ಕಾಗಿ” ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿತು.
ಭಾನುವಾರ ಪ್ರತ್ಯೇಕ ಪೋಸ್ಟ್‌ನಲ್ಲಿ ಅವರು, “ನಾಗರಿಕರು ಯಾವಾಗಲೂ ಯುದ್ಧದ ದುಷ್ಪರಿಣಾಮಗಳಿಗೆ ಒಳಗಾಗುತ್ತಲೆ ಇದ್ದಾರೆ… ಹಾಗಾದರೆ ನೀವು ಯುದ್ಧಕ್ಕಾಗಿ ಕೂಗಾಡಿದಾಗ ಅಥವಾ ಒಂದು ದೇಶವನ್ನು ನಾಶಮಾಡಬೇಕೆಂದು ಕರೆ ನೀಡಿದಾಗ, ನಿಖರವಾಗಿ ನೀವು ಏನು ಕೇಳುತ್ತಿದ್ದೀರಿ? ಇಡೀ ಜನರ ನರಮೇಧಕ್ಕಾಗಿಯೆ?” ಎಂದು ಅವರು ಪ್ರಶ್ನಿಸಿದ್ದರು.
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ: ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ಹರಿಯಾಣ ಮಹಿಳಾ ಆಯೋಗ ಸಮನ್ಸ್


