ಮುಂಬೈ: ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲ್‌ಕೋಟ್‌ನಲ್ಲಿರುವ ಜವಳಿ ಉತ್ಪಾದನಾ ಘಟಕದಲ್ಲಿ ಭಾನುವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ.
ಸೋಲಾಪುರ MIDC ಪ್ರದೇಶದ ಅಕ್ಕಲ್‌ಕೋಟ್ ರಸ್ತೆಯಲ್ಲಿರುವ ಸೆಂಟ್ರಲ್ ಜವಳಿ ಮಿಲ್ಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಮೃತರಲ್ಲಿ ಕಾರ್ಖಾನೆ ಮಾಲೀಕ ಹಾಜಿ ಉಸ್ಮಾನ್ ಹಸನ್‌ಭಾಯ್ ಮನ್ಸೂರಿ, ಅವರ ಒಂದೂವರೆ ವರ್ಷದ ಮೊಮ್ಮಗ ಸೇರಿದಂತೆ ಅವರ ಕುಟುಂಬದ ಮೂವರು ಸದಸ್ಯರು ಮತ್ತು ನಾಲ್ವರು ಕಾರ್ಮಿಕರು ಸೇರಿದ್ದಾರೆ.
ಬೆಂಕಿಯ ನಿಖರವಾದ ಕಾರಣವನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿಗೂ ಸುಟ್ಟ ಗಾಯಗಳಾಗಿವೆ. ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, 5-6 ಗಂಟೆಗಳ ನಂತರವೇ ಬೆಂಕಿಯನ್ನು ನಂದಿಸಲಾಯಿತು ಎಂದು ವರದಿಗಳು ತಿಳಿಸಿವೆ.
ರಾಜ್ಯ ಗೃಹ ಸಚಿವರೂ ಆಗಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಪರಿಸ್ಥಿತಿಯನ್ನು ಪರಿಶೀಲಿಸಲು ಸೋಲಾಪುರ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದರು.
“ಸೋಲಾಪುರದ ಅಕ್ಕಲ್ಕೋಟ್ ರಸ್ತೆಯಲ್ಲಿರುವ ಜವಳಿ ಘಟಕದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 8 ಜನರು ಸಾವನ್ನಪ್ಪಿದ ಘಟನೆ ಅತ್ಯಂತ ದುಃಖಕರ. ಅವರಿಗೆ ನಾನು ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅವರ ಕುಟುಂಬಗಳ ದುಃಖದಲ್ಲಿ ನಾವು ಭಾಗಿಯಾಗುತ್ತೇವೆ” ಎಂದು ಅವರು ಹೇಳಿದರು.
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರ ಹತ್ತಿರದ ಕುಟುಂಬಕ್ಕೆ ಫಡ್ನವೀಸ್ 5 ಲಕ್ಷ ರೂ. ಪರಿಹಾರ ಘೋಷಿಸಿದರು. ಸಾವುಗಳಿಗೆ ಸಂತಾಪ ಸೂಚಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, “ಮಹಾರಾಷ್ಟ್ರದ ಸೋಲಾಪುರದಲ್ಲಿ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಅನೇಕ ಜನರು ಸಾವನ್ನಪ್ಪಿದ ಸುದ್ದಿ ಅತ್ಯಂತ ನೋವಿನಿಂದ ಕೂಡಿದೆ. ನಾನು ಎಲ್ಲಾ ದುಃಖಿತ ಕುಟುಂಬಗಳಿಗೆ ನನ್ನ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದರು.
ಸಾವುಗಳಿಗೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ, ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಹತ್ತಿರದ ಕುಟುಂಬಕ್ಕೆ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ.
“ಮಹಾರಾಷ್ಟ್ರದ ಸೋಲಾಪುರದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಜೀವಹಾನಿಯಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗ ಗುಣಮುಖರಾಗಲಿ” ಎಂದು ಮೋದಿ ಹೇಳಿದ್ದಾರೆ.
ಭಾರತಕ್ಕೆ ಸೆಡ್ಡು ಹೊಡೆಯಲು ವಿದೇಶಕ್ಕೆ ರಾಜತಾಂತ್ರಿಕ ನಿಯೋಗ ಕಳುಹಿಸಲು ಮುಂದಾದ ಪಾಕಿಸ್ತಾನ


