ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ಹಣ ಪತ್ತೆಯಾದ ಬಗ್ಗೆ ಮೂವರು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್‌ನ ಆಂತರಿಕ ಸಮಿತಿ ನಡೆಸಿದ ತನಿಖೆಯನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ಸೋಮವಾರ ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.
ನವದೆಹಲಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಅವರು ಸಂಪಾದಿಸಿರುವ ‘ದ ಕಾನ್‌ಸ್ಟಿಟ್ಯೂಷನ್ ವಿ ಅಡಾಪ್ಟೆಡ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, “ಆಂತರಿಕ ಸಮಿತಿಗೆ ಯಾವುದೇ ಸಾಂವಿಧಾನಿಕ ವ್ಯಾಪ್ತಿಯಾಗಲಿ ಅಥವಾ ಕಾನೂನಿನ ಮಾನ್ಯತೆಯಾಗಲಿ ಇಲ್ಲ” ಎಂದಿದ್ದಾರೆ.
ಪ್ರಕರಣ ಸಂಬಂಧ ಇನ್ನೂ ಯಾವುದೇ ಎಫ್‌ಐಆರ್ ದಾಖಲಿಸದಿರುವುದು ಏಕೆ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಎಫ್‌ಐಆರ್ ದಾಖಲಿಸುವ ಅಗತ್ಯವನ್ನು ಒತ್ತಿ ಹೇಳಿದ ಧನ್ಕರ್, ನ್ಯಾಯಮೂರ್ತಿ ಮನೆಯಲ್ಲಿ ಪತ್ತೆಯಾದ ಹಣದ ಮೂಲ, ಉದ್ದೇಶ, ಅದು ನ್ಯಾಯಾಂಗ ವ್ಯವಸ್ಥೆಯನ್ನು ಕಲುಷಿತಗೊಳಿಸಿದೆಯೇ? ಅದರ ಹಿಂದಿರುವ ದೊಡ್ಡ ತಿಮಿಂಗಿಲಗಳು ಯಾರು? ಎಂಬುವುದನ್ನು ತಿಳಿದುಕೊಳ್ಳಲು ಜನರು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ ಎಂದಿದ್ದಾರೆ.
ಪ್ರಕರಣ ನಡೆದು ಈಗಾಗಲೇ ಎರಡು ತಿಂಗಳುಗಳು ಕಳೆದಿವೆ. ತ್ವರಿತ ತನಿಖೆಯ ಅಗತ್ಯವಿದೆ. ಆಂತರಿಕ ಸಮಿತಿ ವರದಿ ಸಲ್ಲಿಸಿ ಈಗಾಗಲೇ ಒಂದು ವಾರ ಕಳೆದಿರೂ 140 ಕೋಟಿ ಜನರಿರುವ ದೇಶಕ್ಕೆ ಆ ಬಗ್ಗೆ ಹೆಚ್ಚಿನ ವಿಷಯ ಗೊತ್ತಾಗಿಲ್ಲ. ತನಿಖಾ ಸಮಿತಿ ಎಲೆಕ್ಟ್ರಾನಿಕ್ ಪುರಾವೆಗಳನ್ನು ವಶಪಡಿಸಿಕೊಂಡಿದೆಯೇ ಎಂಬುದು ಜನರಿಗೆ ತಿಳಿದಿಲ್ಲ. ಇಂತಹ ಎಷ್ಟು ಘಟನೆಗಳು ನಡೆದಿರಬಹುದು ಎಂದು ಊಹಿಸಿ. ಪ್ರತಿಯೊಂದು ಘಟನೆಯೂ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ನ್ಯಾಯಾಧೀಶರ ವಿರುದ್ಧ ವಿಚಾರಣೆ ನಡೆಸಲು ಪೂರ್ವಾನುಮತಿ ಅಗತ್ಯವಿದೆ ಎಂದು ಹೇಳಿದ್ದ 1991ರ ಕೆ ವೀರಸ್ವಾಮಿ ತೀರ್ಪನ್ನು ಮರುಪರಿಶೀಲಿಸುವಂತೆ ಧನ್ಕರ್ ಕರೆ ನೀಡಿದ್ದು, ಇದು ನ್ಯಾಯಾಂಗದ ಸುತ್ತಲೂ “ಶಿಕ್ಷೆಯಿಂದ ಮುಕ್ತಿ”ಯ ಚೌಕಟ್ಟನ್ನು ನಿರ್ಮಿಸಿದೆ ಎಂದು ಹೇಳಿದ್ದಾರೆ.
ಮಾರ್ಚ್ 22ರಂದು ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ನ್ಯಾಯಮೂರ್ತಿ ವರ್ಮಾ ಅವರ ಮೇಲಿನ ಆರೋಪಗಳ ತನಿಖೆಗಾಗಿ ಮೂವರು ಸದಸ್ಯರ ಆಂತರಿಕ ಸಮಿತಿಯನ್ನು ರಚಿಸಿದ್ದರು. ಸಮಿತಿಯು ತನ್ನ ವರದಿಯಲ್ಲಿ ವರ್ಮಾ ಮೇಲಿನ ಆರೋಪಗಳು ವಿಶ್ವಾಸಾರ್ಹವೆಂದು ಕಂಡುಕೊಂಡಿದೆ ಎಂದು ತಿಳಿದುಬಂದಿದೆ.
ಆರೋಪಗಳು ಕೇಳಿ ಬಂದ ಕೆಲ ದಿನಗಳ ನಂತರ ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆಯಾದ ನ್ಯಾಯಮೂರ್ತಿ ವರ್ಮಾ ಅವರು, ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.
ನ್ಯಾ.ವರ್ಮಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅವರು ಉಳಿದುಕೊಂಡಿದ್ದ ದೆಹಲಿಯ ಮನೆಯಲ್ಲಿ ಮಾರ್ಚ್ 14ರ ಸಂಜೆ ಬೆಂಕಿ ಅವಘಡ ಸಂಭವಿಸಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಾಗ ಮನೆಯಲ್ಲಿ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿತ್ತು ಎನ್ನಲಾಗಿದೆ. ಈ ವಿಚಾರ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ಆದರೆ, ಮನೆಯಲ್ಲಿ ಹಣ ಪತ್ತೆಯಾಗಿರುವ ಆರೋಪವನ್ನು ನಿರಾಕರಿಸಿದ್ದ ನ್ಯಾ. ವರ್ಮಾ, “ಇದು ನನ್ನನ್ನು ಸಿಲುಕಿಸಲು ನಡೆದಿರುವ ಪಿತೂರಿ” ಎಂದಿದ್ದರು.
ಘಟನೆಯ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾ. ವರ್ಮಾ ಅವರನ್ನು ಅಲಾಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿತ್ತು. ವರ್ಗಾವಣೆಯಾದರೂ ಅವರಿಗೆ ಯಾವುದೇ ಕೆಲಸ ವಹಿಸದಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಆದರೆ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರಾಕರಿಸಿತ್ತು. ಮತ್ತೊಂದೆಡೆ ತನಿಖೆಗೆ ಸಿಜೆಐ ಆಂತರಿಕ ಸಮಿತಿ ರಚಿಸಿದ್ದರು.


