ಬಿಜೆಪಿ, ಆರೆಸ್ಸೆಸ್ ಸಮಾಜದಲ್ಲಿ ಭಿತ್ತುತ್ತಿರುವ ಕೋಮುವಾದಿ ವಿಚಾರಗಳ ವಿರುದ್ಧ ಜನಾಭಿಪ್ರಾಯ ಮೂಡಿಸಲು ಪ್ರಗತಿಪರ ಸಂಘಟನೆಗಳು ಒಕ್ಕೂಟ ರಚಿಸಿಕೊಂಡು ಕಾರ್ಯಮಗ್ನರಾಗಬೇಕಾದ ಅಗತ್ಯವಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಗೌರಿ ಪತ್ರಿಕಾ ಬಳಗ ಬೆಂಗಳೂರಿನ ಗಾಂಧಿಭವನದಲ್ಲಿ ಹಿರಿಯ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಾಮಾಜಿಕ ಕಾರ್ಯಕರ್ತರು ಹಾಗೂ ಜನಪರ ಪತ್ರಕರ್ತರ ಮೇಲಿನ ದಾಳಿಯನ್ನು ಎದುರಿಸುವ ಕುರಿತ ಚರ್ಚಾಗೋಷ್ಟಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜನಪರವಾಗಿ ಕೆಲಸ ಮಾಡುವವರನ್ನು ಬಂಽಸುವ ಪ್ರಕ್ರಿಯೆಯನ್ನು ಮುಂದುವರೆಸುವ ಎಲ್ಲ ಮುನ್ಸೂಚನೆಗಳು ಇವೆ. ಇದನ್ನು ತಡೆಯಬೇಕಾದರೆ ಬಿಜೆಪಿಯ ಜನವಿರೋಧಿ ನಿಲುವುಗಳ ಕುರಿತು ಜನಾಭಿಪ್ರಾಯ ಮೂಡಿಸುವುದೊಂದೆ ನಮಗಿರುವ ಬಹುದೊಡ್ಡ ದಾರಿ ಮಾಡಿಕೊಟ್ಟಿತು ಎಂದರು.
ಆರೆಸ್ಸೆಸ್ ಪ್ರಜಾಪ್ರಭುತ್ವದ ದಾರಿಯನ್ನೇ ಬಳಸಿಕೊಂಡು ಇಡೀ ವ್ಯವಸ್ಥೆಯನ್ನು ಕೋಮುವಾದೀಕರಣ ಮಾಡಲು ಹೊರಟಿದೆ. ಸಂಸತ್‌ನ ಒಳಗೂ ಕೋಮುವಾದಿ ವ್ಯಕ್ತಿಗಳನ್ನು ನುಸುಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳು RSSನ ಜನವಿರೋಧಿ ನೀತಿಯನ್ನು ಬಯಲು ಮಾಡಲು ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಬೇದೆ ಎಂದು ಅವರು ಹೇಳಿದರು.
ಇವತ್ತಿನ ರಾಜಕಾರಣಿಗಳು, ನ್ಯಾಯಾಧೀಶರು, ಪೊಲೀಸ್ ವ್ಯವಸ್ಥೆಯು ಪತ್ರಿಕೆ, ದೃಶ್ಯ ಮಾಧ್ಯಮಗಳಿಗಿಂತ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಬರುವ ಸುದ್ಧಿಗಳನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಹೀಗಾಗಿ ಪ್ರಗತಿಪರವಾಗಿ ಚಿಂತಿಸುವ ಪ್ರತಿಯೊಬ್ಬರು ತಮಗೆ ಗೊತ್ತಿರುವ ಸತ್ಯ ಸಂಗತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವ ಮೂಲಕ ಹೆಚ್ಚು ಜನರಿಗೆ ತಲುಪುವಂತೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಕೋಮು ಸೌಹಾರ್ದ ವೇದಿಕೆಯ ಕೆ.ಎಲ್.ಅಶೋಕ್ ಮಾತನಾಡಿ, ಕೋಮುವಾದಿಗಳು ಮನೆ ಒಳಗೆ ನುಸುಳಿದ್ದಾರೆ. ಮಾಡು ಇಲ್ಲವೆ ಮಡಿ ಎನ್ನುವ ಸ್ಥಿತಿಗೆ ಬಂದು ತಲುಪಿದ್ದೇವೆ. ಇಂತಹ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳು ಒಕ್ಕೂಟವಾಗಿ ಆರೆಸ್ಸೆಸ್ ಚಿಂತನೆಯ ವಿರುದ್ಧ ಜನಾಭಿಪ್ರಾಯ ಮೂಡಿಸುವುದು ಅಗತ್ಯವಾಗಿದೆ ಎಂದರು.
ಹಿರಿಯ ಪತ್ರಕರ್ತ ಸುನಿಲ್ ಶಿರಸಂಗಿ ಮಾತನಾಡಿ, ಇಪ್ಪತ್ತು ವರ್ಷಗಳಿಂದ ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ಬಿಜೆಪಿ ಸರಕಾರ ಬಂಧಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪತ್ರಕರ್ತರು, ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸುವಂತಹ ಷಡ್ಯಂತ್ರಗಳನ್ನು ರೂಪಿಸಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ನಾವೆಲ್ಲರೂ ಹೋರಾಟ ಮಾಡಬೇಕಿದೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, ಇವತ್ತಿನ ಸನ್ನಿವೇಶ ಜನಪರವಾಗಿ ಚಿಂತಿಸುವವರಿಗೆ ತೀರ ಆತಂಕ ಕಾರಿಯಾಗಿದೆ. ಪ್ರಭುತ್ವ ಮಾಡುವ ಜನವಿರೋಧಿ ನೀತಿಗಳನ್ನು ಟೀಕೆ ಮಾಡಿದರೆ ಬಂಧಿಸುವಂತಹ, ಬೆದರಿಕೆ ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಪ್ರಗತಿಪರರು ತಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಟ್ಟಾಗಬೇಕಾದ ಅಗತ್ಯವಿದೆ ಎಂದರು.
ಸಭೆಯಲ್ಲಿ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್, ಪ್ರೊ.ನಗರಗೆರೆ ರಮೇಶ್, ಕರ್ನಾಟಕ ಜನಶಕ್ತಿಯ ವಾಸು, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸರೋವರ್ ಬೆಂಕಿಕೆರೆ, ಚಂದ್ರು, ಮಾನವ ಹಕ್ಕು ಹೋರಾಟಗಾರ ಮನೋಹರ್, ಪ್ರೊ.ಶಿವರಾಮಯ್ಯ, ಅಂಕಣಕಾರ ನಾರಾಯಣ, ಹುಲಿಕುಂಟೆಮೂರ್ತಿ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.


