ಮಾವೋವಾದಿಗಳ ಹಿಡಿತವಿದ್ದ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಲಾಯ್ಡ್ ಮೆಟಲ್ಸ್ ಅಂಡ್ ಎನರ್ಜಿ ಲಿಮಿಟೆಡ್‌ನ ಹೊಸ ಕಬ್ಬಿಣದ ಅದಿರು ಸಂಸ್ಕರಣಾ ಘಟಕಕ್ಕೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ತಾತ್ವಿಕ ಅರಣ್ಯ ಅನುಮತಿಯನ್ನು ನೀಡಿದೆ ಎಂದು indianexpress.com ವರದಿ ಮಾಡಿದೆ.
ಕೇಂದ್ರದ ಈ ತಾತ್ವಿಕ ಅನುಮತಿಯು 937 ಹೆಕ್ಟೇರ್ ಅರಣ್ಯ ಭೂಮಿಯನ್ನು ಬೇರೆ ಉದ್ದೇಶಗಳಿಗೆ ಬಳಸಲು ಮತ್ತು 1.23 ಲಕ್ಷ ಮರಗಳನ್ನು ಕಡಿಯಲು ಕಂಪನಿಗೆ ಅವಕಾಶ ಮಾಡಿಕೊಡುತ್ತದೆ ಎಂದು ಸಚಿವಾಲಯದ ದಾಖಲೆಗಳು ಉಲ್ಲೇಖಿಸಿ ವರದಿ ಹೇಳಿದೆ.
ಗಡ್ಚಿರೋಲಿ ಜಿಲ್ಲೆಯಲ್ಲಿ ಗಣಿಗಾರಿಕೆ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ವಿಸ್ತರಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿರುವ ಮಧ್ಯೆ, ಪ್ರಸ್ತಾವಿತ ಸ್ಥಾವರಕ್ಕೆ ಅರಣ್ಯ ಅನುಮತಿ ದೊರೆತಿದೆ.
ಕಳೆದ ತಿಂಗಳು, ಮಹಾರಾಷ್ಟ್ರದ ಸಚಿವ ಸಂಪುಟವು ಪ್ರಮುಖ ಮತ್ತು ಸಣ್ಣ ಖನಿಜಗಳ ನಿರ್ವಹಣೆಗಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಧ್ಯಕ್ಷತೆಯಲ್ಲಿ ಗಡ್ಚಿರೋಲಿ ಜಿಲ್ಲಾ ಗಣಿಗಾರಿಕೆ ಪ್ರಾಧಿಕಾರವನ್ನು ಸ್ಥಾಪಿಸಲು ಒಪ್ಪಿಗೆ ನೀಡಿದೆ. ಗಡ್ಚಿರೋಲಿ ಜಿಲ್ಲೆಯು ಕಬ್ಬಿಣದ ಅದಿರು, ಸುಣ್ಣದ ಕಲ್ಲು ಮತ್ತು ವಜ್ರ ನಿಕ್ಷೇಪಗಳನ್ನು ಹೊಂದಿದೆ ಎಂದು ಹೇಳಲಾಗ್ತಿದೆ.
ಸುರ್ಜಾಗಢದಲ್ಲಿ ಪ್ರಸ್ತುತ ಇರುವ ಲಾಯ್ಡ್ ಮೆಟಲ್ಸ್ ಅಂಡ್ ಎನರ್ಜಿ ಲಿಮಿಟೆಡ್‌ನ ಕಂಪನಿಯ ಗಣಿಯಿಂದ ಹೊರತೆಗೆಯುವ ಕಡಿಮೆ ದರ್ಜೆಯ ಕಬ್ಬಿಣದ ಅದಿರನ್ನು (ಹೆಮಟೈಟ್ ಕ್ವಾರ್ಟ್‌ಜೈಟ್) ಸಂಸ್ಕರಿಸಲು ಈ ಹೊಸ ಸಂಸ್ಕರಣಾ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಸುರ್ಜಾಗಢದಲ್ಲಿ 348 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಕಬ್ಬಿಣದ ಅದಿರು ಗಣಿಯ ಗುತ್ತಿಗೆಯನ್ನು 2007ರಲ್ಲಿ 20 ವರ್ಷಗಳ ಅವಧಿಗೆ ಲಾಯ್ಡ್ ಮೆಟಲ್ಸ್ ಅಂಡ್ ಎನರ್ಜಿ ಲಿಮಿಟೆಡ್ ಕಂಪನಿಗೆ ನೀಡಲಾಗಿತ್ತು. ನಂತರ ಗುತ್ತಿಗೆಯನ್ನು ಮೇ 2057ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರಕ್ಕೆ ಸಲ್ಲಿಸಿರುವ ಕಂಪನಿ ದಾಖಲೆಗಳನ್ನು ಉಲ್ಲೇಖಿಸಿ indianexpress.com ಹೇಳಿದೆ.
ಅರಣ್ಯ ಅನುಮತಿ ಕೋರುವ ಪ್ರಸ್ತಾವನೆಗಳನ್ನು ಪರಿಶೀಲಿಸುವ ಕೇಂದ್ರ ಸಚಿವಾಲಯದ ಅರಣ್ಯ ಸಲಹಾ ಸಮಿತಿ (ಎಫ್‌ಎಸಿ) ಶಿಫಾರಸಿನ ಮೇರೆಗೆ ಮೇ 12ರಂದು ಹೊಸ ಅದಿರು ಸಂಸ್ಕರಣಾ ಘಟಕಕ್ಕೆ ಷರತ್ತುಬದ್ಧ ತಾತ್ವಿಕ ಅನುಮೋದನೆಯನ್ನು ನೀಡಲಾಗಿದೆ.
ಗಡ್ಚಿರೋಲಿ ಜಿಲ್ಲೆಯ ಅರಣ್ಯ ನಾಶಕ್ಕೆ ಪರಿಹಾರವಾಗಿ ಮಹಾರಾಷ್ಟ್ರದ ಕರಾವಳಿಯ ರತ್ನಗಿರಿ ಜಿಲ್ಲೆಯ ಚಿಪ್ಲುನ್‌ನಲ್ಲಿ 900 ಹೆಕ್ಟೇರ್‌ಗೂ ಹೆಚ್ಚು ಭೂಮಿಯಲ್ಲಿ ಅರಣ್ಯ ಬೆಳೆಸಲು ಪ್ರಸ್ತಾಪಿಸಲಾಗಿದೆ ಎಂದು ಎಫ್‌ಎಸಿ ಸಭೆಯ ಮಿನಿಟ್ಸ್ ತೋರಿಸಿದೆ ಎಂದು ವರದಿ ಹೇಳಿದೆ.
ಪರಿಸರ ಜವಾಬ್ದಾರಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಕಾಪಾಡಿಕೊಳ್ಳಲು ಗಡ್ಚಿರೋಲಿಯ ಅರಣ್ಯ ಭೂಮಿಯನ್ನು ಹಂತ ಹಂತವಾಗಿ ಮತ್ತು ನಿಯಂತ್ರಿತ ರೀತಿಯಲ್ಲಿ ಕಟ್ಟುನಿಟ್ಟಾಗಿ ಅದಿರು ಸಂಸ್ಕರಣಾ ಘಟಕ ಸ್ಥಾಪನೆಗೆ ಬಳಸಬೇಕು ಎಂಬುದು ಅನುಮತಿ ನೀಡುವಾಗ ವಿಧಿಸಿರುವ ಪ್ರಮುಖ ಷರತ್ತುಗಳಲ್ಲಿ ಒಂದಾಗಿದೆ.
ಮೊದಲ ಹಂತದ ಯಶಸ್ವಿ ಅನುಷ್ಠಾನ ಮತ್ತು ಪರಿಶೀಲನೆ ನಡೆದರೆ ಹಾಗೂ ಭೂಮಿಯ ಸಂಪೂರ್ಣ ಬಳಕೆಯ ನಂತರವೇ ಉಳಿದ 237.077 ಹೆಕ್ಟೇರ್ ಬಳಕೆಗೆ ಅನುಮತಿಸಲಾಗುತ್ತದೆ ಎಂದು ಹೇಳಲಾಗಿದೆ.
ತಡೋಬಾ ಹುಲಿ ಮೀಸಲು ಪ್ರದೇಶ ಮತ್ತು ಇಂದ್ರಾವತಿ ಹುಲಿ ಮೀಸಲು ಪ್ರದೇಶಗಳ ನಡುವೆ ಹುಲಿಗಳ ವಲಸೆಗೆ ಸಹಾಯ ಮಾಡುವ ಹುಲಿ ಕಾರಿಡಾರ್ ವ್ಯಾಪ್ತಿಯಲ್ಲಿ ಯೋಜನಾ ಪ್ರದೇಶದ ಒಂದು ಭಾಗ ಬರುವುದರಿಂದ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯಿಂದ ಅನುಮೋದನೆ ಪಡೆಯುವಂತೆ ಸಚಿವಾಲಯವು ಕಂಪನಿಗೆ ನಿರ್ದೇಶನ ನೀಡಿದೆ.
ಲಾಯ್ಡ್ ಮೆಟಲ್ಸ್ ಅಂಡ್ ಎನರ್ಜಿ ಲಿಮಿಟೆಡ್ ಕಂಪನಿ 2007ರಲ್ಲಿ ಗಣಿಗಾರಿಕೆ ಗುತ್ತಿಗೆಯನ್ನು ಪಡೆದಿದ್ದರೂ, ಗಣಿಗಾರಿಕೆ ಕಾರ್ಯಾಚರಣೆಗಳು ಪ್ರಾರಂಭವಾಗಿದ್ದು 2016ರಲ್ಲಿ ಆಗಿದೆ. ಮಾವೋವಾದಿಗಳ ತೀವ್ರ ವಿರೋಧ, ಬುಡಕಟ್ಟು ಮತ್ತು ಅರಣ್ಯ ಹಕ್ಕುಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬುಡಕಟ್ಟು ಸಮುದಾಯಗಳಿಂದ ವ್ಯಕ್ತವಾದ ತೀವ್ರ ತರಹದ ಪ್ರತಿಭಟನೆಗಳು ಮತ್ತು ಆಂದೋಲನಗಳು ಗಣಿಗಾರಿಕೆ ಪ್ರಾರಂಭಕ್ಕೆ ಅಡ್ಡಿಯಾಗಿತ್ತು.
ಡಿಸೆಂಬರ್ 2016ರಲ್ಲಿ, ಗಡ್ಚಿರೋಲಿಯ ಸುರ್ಜಾಗಢದಲ್ಲಿ ಮಾವೋವಾದಿಗಳು ಗಣಿಗಾರಿಕೆಗೆ ಸಂಬಂಧಿಸಿದ 69 ಟ್ರಕ್‌ಗಳು ಮತ್ತು ಮೂರು ಮಣ್ಣು ತೆಗೆಯುವ ಯಂತ್ರಗಳನ್ನು ಸುಟ್ಟುಹಾಕಿದ್ದರು. ಇದು ಈ ಪ್ರದೇಶದಲ್ಲಿ ಮಾವೋವಾದಿಗಳು ನಡೆಸಿದ ಅತಿದೊಡ್ಡ ದಾಳಿಗಳಲ್ಲಿ ಒಂದಾಗಿದೆ. 2016ರ ಘಟನೆಗೂ ಮುನ್ನ ಲಾಯ್ಡ್ ಸ್ಟೀಲ್‌ನ ಉಪಾಧ್ಯಕ್ಷ ಜಸ್ಪಾಲ್ ಸಿಂಗ್ ಧಿಲ್ಲೋನ್ ಅವರನ್ನು ಮಾವೋವಾದಿಗಳು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಇದನ್ನೂ ಮಾವೋವಾದಿಗಳೇ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಾರಾಷ್ಟ್ರದ ನಕ್ಸಲ್ ವಿರೋಧಿ ಕಮಾಂಡೋ ಪಡೆ ಸಿ60ಯ ಮತ್ತು ಕೇಂದ್ರ ಪಡೆಗಳ ಕಾರ್ಯಾಚರಣೆಗಳಿಂದಾಗಿ ಗಡ್ಚಿರೋಲಿಯಲ್ಲಿ ಮಾವೋವಾದಿ ಹಿಡಿತ ಕ್ರಮೇಣ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ವರ್ಷದ ಮೊದಲ ದಿನವನ್ನು ಗಡ್ಚಿರೋಲಿಯಲ್ಲಿ ಕಳೆದಿದ್ದರು. ಅಲ್ಲಿ 11 ಮಾವೋವಾದಿಗಳು ಸಿಎಂ ಮುಂದೆ ಶರಣಾಗಿದ್ದರು. ಇದೇ ವೇಳೆ ಸಿಎಂ 32 ಕಿಮೀ ಉದ್ದದ ರಾಜ್ಯ ಸಾರಿಗೆ ಬಸ್ ಸೇವೆಯನ್ನು ಸಹ ಉದ್ಘಾಟಿಸಿದ್ದರು.
ಈಶಾನ್ಯ ರಾಜ್ಯಗಳಲ್ಲಿ ರಿಲಯನ್ಸ್ 75,000 ಕೋಟಿ ರೂ. ಹೂಡಿಕೆ ಮಾಡಲಿದೆ: ಮುಖೇಶ್ ಅಂಬಾನಿ


