ವಿಶ್ವಸಂಸ್ಥೆಯ ತಂಡಗಳು ಗಾಜಾ ನಿರಾಶ್ರಿತರ ದಿನನಿತ್ಯದ ಅಗತ್ಯಕ್ಕಾಗಿ ಸಂಗ್ರಹಿಸಿದ್ದ 90ಕ್ಕೂ ಹೆಚ್ಚು ಲಾರಿ ಲೋಡ್‌ಗಳ ಮಾನವೀಯ ನೆರವು ಪ್ರವೇಶಕ್ಕೆ ಇಸ್ರೇಲ್ 11 ವಾರಗಳ ದೀರ್ಘಾವಧಿಯ ದಿಗ್ಬಂಧನದ ನಂತರ ಅನುವು ಮಾಡಿದೆ.
ಹಿಟ್ಟು, ಶಿಶು ಆಹಾರ ಮತ್ತು ವೈದ್ಯಕೀಯ ಉಪಕರಣಗಳನ್ನು ಒಳಗೊಂಡ ಸಹಾಯವನ್ನು ಬುಧವಾರ ರಾತ್ರಿ ಕೆರೆಮ್ ಶಾಲೋಮ್ ಕ್ರಾಸಿಂಗ್‌ನಿಂದ ತೆಗೆದುಕೊಂಡು ವಿತರಣೆಗಾಗಿ ಗೋದಾಮುಗಳಿಗೆ ಸಾಗಿಸಲಾಯಿತು. ಗುರುವಾರ ಹಲವಾರು ಬೇಕರಿಗಳು ಹಿಟ್ಟಿನಿಂದ ಬ್ರೆಡ್ ಉತ್ಪಾದಿಸಲು ಪ್ರಾರಂಭಿಸಿದವು. ಇಸ್ರೇಲ್ ಮಿಲಿಟರಿ ಅನುಮೋದಿಸಿದ ಏಕ ಪ್ರವೇಶ ಮಾರ್ಗದಲ್ಲಿ ಭದ್ರತೆಯ ಕೊರತೆಯಿಂದಾಗಿ ಮೂರು ದಿನ ವಿಳಂಬವಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಇಸ್ರೇಲಿ ಅಧಿಕಾರಿಗಳು ಬುಧವಾರ ಕೆರೆಮ್ ಶಾಲೋಮ್ ಮೂಲಕ ಹೆಚ್ಚುವರಿಯಾಗಿ 100 ಲಾರಿ ಲೋಡ್‌ಗಳ ಪ್ರವೇಶಕ್ಕೆ ಅನುಮತಿಸಿದ್ದಾರೆ ಎಂದು ಹೇಳಿದ್ದಾರೆ. “ಗಾಜಾದಲ್ಲಿನ ಅಪಾರ ಅಗತ್ಯಗಳನ್ನು ಪೂರೈಸಲು ಅದು ಎಲ್ಲಿಯೂ ಸಾಕಾಗುವುದಿಲ್ಲ. ಯುದ್ಧದ ಮೊದಲು ಪ್ರತಿದಿನ ಸರಾಸರಿ 500 ಲಾರಿಗಳು ಪ್ರದೇಶವನ್ನು ಪ್ರವೇಶಿಸುತ್ತಿದ್ದವು” ಎಂದು ವಿಶ್ವಸಂಸ್ಥೆ ಹೇಳಿದೆ.
ಅಗತ್ಯ ಆಹಾರಗಳ ಗಮನಾರ್ಹ ಕೊರತೆ ಮತ್ತು ಗಗನಕ್ಕೇರುತ್ತಿರುವ ಬೆಲೆಗಳ ನಡುವೆ, 2.1 ಮಿಲಿಯನ್ ಜನಸಂಖ್ಯೆಯಲ್ಲಿ ತೀವ್ರ ಮಟ್ಟದ ಹಸಿವಿನ ಬಗ್ಗೆ ಮಾನವೀಯ ಸಂಘಟನೆಗಳು ಎಚ್ಚರಿಸಿವೆ ಎಂದು ಆಕ್ರಮಿತ ಪಶ್ಚಿಮ ದಂಡೆಯಲ್ಲಿ ನೆಲೆಸಿರುವ ಪ್ಯಾಲೆಸ್ಟೀನಿಯನ್ ಪ್ರಾಧಿಕಾರದ ಆರೋಗ್ಯ ಸಚಿವ ಮಜೀದ್ ಅಬು ರಂಜಾನ್ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ 29 ಮಕ್ಕಳು ಮತ್ತು ವೃದ್ಧರು “ಹಸಿವಿಗೆ ಸಂಬಂಧಿಸಿದ” ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.
ಮುಂಬರುವ ತಿಂಗಳುಗಳಲ್ಲಿ ಅರ್ಧ ಮಿಲಿಯನ್ ಜನರು ಹಸಿವನ್ನು ಎದುರಿಸಲಿದ್ದಾರೆ ಎಂದು ವಿಶ್ವಸಂಸ್ಥೆ ಬೆಂಬಲಿತ ಇಂಟಿಗ್ರೇಟೆಡ್ ಫುಡ್ ಸೆಕ್ಯುರಿಟಿ ಫೇಸ್ ಕ್ಲಾಸಿಫಿಕೇಶನ್ (ಐಪಿಸಿ) ನಡೆಸಿದ ಮೌಲ್ಯಮಾಪನ ತಿಳಿಸಿದೆ.
ವಿಶ್ವಸಂಸ್ಥೆ ಮತ್ತು ಅದರ ಪಾಲುದಾರರು 140,000 ಟನ್‌ಗಳಿಗಿಂತ ಹೆಚ್ಚು ಆಹಾರವನ್ನು ಹೊಂದಿದ್ದಾರೆ. ಸುಮಾರು 6,000 ಲಾರಿ ಲೋಡ್‌ಗಳು ಎರಡು ತಿಂಗಳವರೆಗೆ ಗಾಜಾದ ಇಡೀ ಜನಸಂಖ್ಯೆಯನ್ನು ಪೋಷಿಸಲು ಸಾಕಾಗುತ್ತದೆ. ವಿಶ್ವಸಂಸ್ಥೆಯ ಕಾರ್ಯಕರ್ತರು ಇದನ್ನು ಗಾಜಾಕ್ಕೆ ತರಲು ಸಿದ್ಧರಾಗಿದ್ದಾರೆ ಎಂದು ಯುಎನ್ ವಿಶ್ವ ಆಹಾರ ಕಾರ್ಯಕ್ರಮದ (ಡಬ್ಲ್ಯೂಎಫ್‌ಪಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾರ್ಚ್ 2ರಂದು ಇಸ್ರೇಲ್ ದೇಶವು ಗಾಜಾಗೆ ಎಲ್ಲಾ ನೆರವು ಮತ್ತು ವಾಣಿಜ್ಯ ಸರಬರಾಜುಗಳನ್ನು ನಿಲ್ಲಿಸಿತು ಮತ್ತು ಎರಡು ವಾರಗಳ ನಂತರ ತನ್ನ ಮಿಲಿಟರಿ ದಾಳಿಯನ್ನು ಪುನರಾರಂಭಿಸಿತು, ಹಮಾಸ್‌ನೊಂದಿಗಿನ ಎರಡು ತಿಂಗಳ ಕದನ ವಿರಾಮವನ್ನು ಕೊನೆಗೊಳಿಸಿತ್ತು. ಗಾಜಾದಲ್ಲಿ ಇನ್ನೂ ಬಂಧಿಸಲ್ಪಟ್ಟಿರುವ 58 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಸಶಸ್ತ್ರ ಗುಂಪಿನ ಮೇಲೆ ಒತ್ತಡ ಹೇರಲು ಈ ಕ್ರಮಗಳು ಉದ್ದೇಶಿಸಲ್ಪಟ್ಟಿವೆ ಎಂದು ಅದು ಹೇಳಿದೆ. ಈ ಒತ್ತೆಯಾಳುಗಳಲ್ಲಿ ಇನ್ನೂ 23 ಮಂದಿ ಜೀವಂತವಾಗಿದ್ದಾರೆ ಎಂದು ನಂಬಲಾಗಿದೆ. ಇಸ್ರೇಲ್ ಯಾವುದೇ ಸಹಾಯದ ಕೊರತೆ ಇಲ್ಲ ಎಂದು ಹೇಳಿದೆ ಮತ್ತು ಹಮಾಸ್ ತನ್ನ ಹೋರಾಟಗಾರರಿಗೆ ನೀಡಲು ಅಥವಾ ಹಣ ಸಂಗ್ರಹಿಸುವುದಕ್ಕಾಗಿ ಈ ನೆರವು ಸರಬರಾಜುಗಳನ್ನು ಮಾರಾಟ ಮಾಡಲು ಕದಿಯುತ್ತಿದೆ ಎಂದು ಆರೋಪಿಸಿದೆ. ಈ ಆರೋಪವನ್ನು ಹಮಾಸ್ ನಿರಾಕರಿಸಿದೆ. ಸಹಾಯವನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂಬ ಇಸ್ರೇಲ್ ಆರೋಪವನ್ನು ವಿಶ್ವಸಂಸ್ಥೆಯೂ ನಿರಾಕರಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಹೇಳಿಕೆಯಲ್ಲಿ ಈ ಹೇಳಿಕೆಯನ್ನು ಪುನರಾವರ್ತಿಸಿದರು. ”ಫ್ರಾನ್ಸ್, ಕೆನಡಾ ಮತ್ತು ಯುಕೆ ನಾಯಕರು ಇಸ್ರೇಲ್ ಪ್ಯಾಲೆಸ್ಟೀನಿಯನ್ ಮಕ್ಕಳನ್ನು ಹಸಿವಿನಿಂದ ಬಳಲುಸುತ್ತಿದೆ ಎಂದು ಹೇಳುವ ಹಮಾಸ್‌ನ ಪ್ರಚಾರಕ್ಕೆ ಇಂಬು ಕೊಟ್ಟಿದ್ದಾರೆ” ಎಂದು ನೆತನ್ಯಾಹು ಆರೋಪಿಸಿದ್ದಾರೆ.
ಇಸ್ರೇಲ್ ಮಿಲಿಟರಿ ತನ್ನ ಹೊಸದಾಗಿ ವಿಸ್ತರಿಸಿದ ನೆಲದ ಆಕ್ರಮಣವನ್ನು ಮುಂದುವರಿಸಲು ಮತ್ತು ಪ್ಯಾಲೆಸ್ಟೀನಿಯನ್ ಪ್ರದೇಶದ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳಲು ಸೀಮಿತ ಪ್ರಮಾಣದ ಆಹಾರವನ್ನು ಅನುಮತಿಸುವುದಾಗಿ ನೆತನ್ಯಾಹು ಈ ಹಿಂದೆ ಹೇಳಿದ್ದರು.
ವಿಶ್ವಸಂಸ್ಥೆ ಮತ್ತು ಇತರ ಸಂಸ್ಥೆಗಳು ಅಮೆರಿಕ-ಇಸ್ರೇಲಿ ಯೋಜನೆಗೆ ಸಹಕರಿಸುವುದಿಲ್ಲ ಎಂದು ಹೇಳಿವೆ. ಇದು ಮೂಲಭೂತ ಮಾನವೀಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅವು ಹೇಳಿವೆ.
ದಕ್ಷಿಣದ ನಗರವಾದ ರಫಾದಲ್ಲಿರುವ ರೆಡ್‌ಕ್ರಾಸ್ ಫೀಲ್ಡ್ ಆಸ್ಪತ್ರೆಗೆ ಒಂದು ಲಾರಿ ಲೋಡ್ ವೈದ್ಯಕೀಯ ಸಾಮಗ್ರಿಗಳನ್ನು ತಂದಿರುವುದಾಗಿ ಅಂತರರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿ (ICRC) ತಿಳಿಸಿದೆ.
ದಕ್ಷಿಣ ಅಲ್-ಮವಾಸಿ ಪ್ರದೇಶದಲ್ಲಿ ಚಾರಿಟಿ ಯುಕೆ-ಮೆಡ್‌ನ ಫೀಲ್ಡ್ ಆಸ್ಪತ್ರೆಯನ್ನು ನಡೆಸುವ ಉಸ್ತುವಾರಿ ಹೊಂದಿರುವ ನರ್ಸ್ ಮ್ಯಾಂಡಿ ಬ್ಲಾಕ್‌ಮನ್, ಗಾಜಾದಲ್ಲಿನ ಪರಿಸ್ಥಿತಿಯನ್ನು “ಹೃದಯ ವಿದ್ರಾವಕ” ಎಂದು ಬಣ್ಣಿಸಿದ್ದಾರೆ, ಆಹಾರದ ಕೊರತೆ ಅಪಾಯಕಾರಿಯಾಗಿದೆ ಎಂದಿದ್ದಾರೆ.
ಆಸ್ಪತ್ರೆಗೆ ಬರುವ ರೋಗಿಗಳು ತಮ್ಮ ಹಿಂದಿನ ಎರಡು ಅವಧಿಗಳಿಗಿಂತ “ಗೋಚರವಾಗಿ ತೆಳ್ಳಗಿದ್ದಾರೆ” ಮತ್ತು ಸಿಬ್ಬಂದಿ ಅವರಿಗೆ ದಿನಕ್ಕೆ ಒಂದು ಊಟವನ್ನು ಮಾತ್ರ ನೀಡಲು ಸಾಧ್ಯವಾಯಿತು, ಅದರಲ್ಲಿ ಅಕ್ಕಿ ಮತ್ತು ಕೆಲವು ದ್ವಿದಳ ಧಾನ್ಯಗಳು ಸೇರಿವೆ ಎಂದು ಅವರು ಬಿಬಿಸಿಗೆ ತಿಳಿಸಿದರು.
“ಜನರು ನಿರಂತರವಾಗಿ ಸ್ಥಳಾಂತರಗೊಳ್ಳಬೇಕಾಗಿದೆ ಮತ್ತು ಅವರ ಮಕ್ಕಳಿಗೆ ಆಹಾರವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಮರುದಿನ ಏನಾಗಲಿದೆ ಎಂದು ಯಾರಿಗೂ ತಿಳಿದಿಲ್ಲ. ನಿರಂತರ ಸಂಕಟ ಮತ್ತು ನಿರಂತರ ಆತಂಕವಿದೆ” ಎಂದು ಅವರು ಹೇಳಿದರು.
ಈ ಸಾಮಗ್ರಿಗಳ ನೆರವು ಗಾಜಾವನ್ನು ಪ್ರವೇಶಿಸುವ ಮೊದಲು, WFPಯ ಹಿರಿಯ ಅಧಿಕಾರಿ ಆಂಟೊಯಿನ್ ರೆನಾರ್ಡ್ ಅವರು, ಸಹಾಯ ಸಂಸ್ಥೆಗಳು ಇಸ್ರೇಲಿ ಮಿಲಿಟರಿ ಲಾರಿಗಳನ್ನು ಅಪಾಯಕಾರಿ ಎಂದು ಪರಿಗಣಿಸುವ ಮಾರ್ಗದಲ್ಲಿ ಚಲಿಸುವಂತೆ ಬಯಸಿದ್ದರಿಂದ ಅದನ್ನು ಸಂಗ್ರಹಿಸುವಲ್ಲಿ ಸಮಸ್ಯೆಗಳು ಉದ್ಭವಿಸಿದವು ಎಂದಿದ್ದಾರೆ.
ಈ ಮಾರ್ಗವು ತೀವ್ರವಾಗಿ ಹಸಿದ ನಾಗರಿಕರು ಮತ್ತು ಸಶಸ್ತ್ರ ಕ್ರಿಮಿನಲ್ ಗ್ಯಾಂಗ್‌ಗಳ ದಾಳಿಗೆ ಒಳಪಡಿಸಬಹುದು ಎಂಬ ಆತಂಕವಿದೆ. ಈಗ ಗಾಜಾದಲ್ಲಿ ಹಿಟ್ಟು ತುಂಬಿದ ಪ್ರತಿ ಟ್ರಕ್ ಸುಮಾರು $400,000 (£298,000) ಮೌಲ್ಯದ್ದಾಗಿದೆ. ನಾವು ಕಡಿಮೆ ಆಹಾರ ಒದಗಿಸಿದರೆ ಹೆಚ್ಚಿನ ಅಪಾಯ ಮತ್ತು ಆತಂಕ ಸೃಷ್ಟಿಯಾಗುತ್ತದೆ. ಗೋದಾಮುಗಳಿಗೆ ಸುರಕ್ಷಿತ ಮಾರ್ಗದಲ್ಲಿ “ದಿನಕ್ಕೆ ನೂರಾರು ಟ್ರಕ್‌ಗಳು” ಪ್ರಯಾಣಿಸುವುದು ಪರಿಹಾರವಾಗಿದೆ ಎಂದು ಅವರು ಹೇಳಿದರು.
ಗಾಜಾ ಬದಿಯಲ್ಲಿರುವ ನೆರವು ಸಂಸ್ಥೆಗಳು ತಮ್ಮ ಸರಕುಗಳೊಂದಿಗೆ ಸಶಸ್ತ್ರ ಕಾವಲುಗಾರರನ್ನು ನೇಮಿಸಲಿಲ್ಲ ಏಕೆಂದರೆ ಅದು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಪ್ರತಿದಿನ ಕನಿಷ್ಠ 100 ನೆರವು ಲಾರಿಗಳನ್ನು ತರುವುದರಿಂದ ಜನಸಂಖ್ಯೆಯ “ಕನಿಷ್ಠ” ಆಹಾರ ಅಗತ್ಯಗಳನ್ನು ಮಾತ್ರ ಪೂರೈಸಬಹುದು. ಗಾಜಾದಾದ್ಯಂತ ಇಸ್ರೇಲಿ ಬಾಂಬ್ ದಾಳಿ ಮತ್ತು ಭೂ ಕಾರ್ಯಾಚರಣೆಗಳು ಮುಂದುವರೆದಿದೆ ಎಂದು ಹಮಾಸ್ ನಡೆಸುವ ಆರೋಗ್ಯ ಸಚಿವಾಲಯ ಗುರುವಾರ ವರದಿ ಮಾಡಿದೆ. ಕಳೆದ 24 ಗಂಟೆಗಳಲ್ಲಿ 107 ಜನರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯು ಇದೆ ಎಂದು ರೆನಾರ್ಡ್ ವಿವರಿಸಿದರು.
ಹಮಾಸ್ ನಡೆಸುವ ನಾಗರಿಕ ರಕ್ಷಣಾ ಸಂಸ್ಥೆಯ ಪ್ರಕಾರ, ಗುರುವಾರ ಬೆಳಗಿನ ಜಾವದಿಂದ ಕನಿಷ್ಠ 52 ಜನರು ಸಾವನ್ನಪ್ಪಿದ್ದಾರೆ ಎಂದಿದೆ. ಪ್ಯಾಲೇಸ್ಟಿನಿಯನ್ ಮಾಧ್ಯಮಗಳು 16 ಜನರನ್ನು ಒಳಗೊಂಡಿವೆ ಎಂದು ವರದಿ ಮಾಡಿವೆ. ಅವರಲ್ಲಿ ಹೆಚ್ಚಿನವರು ಒಂದೇ ಕುಟುಂಬದ ಸದಸ್ಯರು, ಉತ್ತರ ಗಾಜಾದ ಜಬಾಲಿಯಾದಲ್ಲಿ ಮನೆ ಮೇಲೆ ದಾಳಿ ಮಾಡಿದಾಗ ಅವರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿವೆ.


