ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ ಅವರು ಶುಕ್ರವಾರ (ಮೇ.23) ಮುಕ್ತ ನ್ಯಾಯಾಲಯದಲ್ಲಿ ಮಾತನಾಡಿ, “ತಾನು ಮತ್ತು ನಿವೃತ್ತರಾಗುತ್ತಿರುವ ನ್ಯಾಯಮೂರ್ತಿ ಎ.ಎಸ್ ಓಕಾ ಇಬ್ಬರೂ ನಿವೃತ್ತಿಯ ನಂತರದ ಯಾವುದೇ ಹುದ್ದೆಗಳನ್ನು ಸ್ವೀಕರಿಸದಿರಲು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.
ಇಂದು (ಮೇ.24) ಅಧಿಕೃತವಾಗಿ ನಿವೃತ್ತರಾಗುತ್ತಿರುವ ನ್ಯಾಯಮೂರ್ತಿ ಓಕಾ ಅವರಿಗೆ ವಿದಾಯ ಹೇಳುವ ಸಂದರ್ಭದಲ್ಲಿ ಸಿಜೆಐ ಈ ಹೇಳಿಕೆ ನೀಡಿದ್ದಾರೆ.
“ನಾವಿಬ್ಬರೂ ನಿವೃತ್ತಿಯ ನಂತರದ ಯಾವುದೇ ಹುದ್ದೆಗಳನ್ನು ಸ್ವೀಕರಿಸುವುದಿಲ್ಲ ಎಂದು ಈಗಾಗಲೇ ನಿರ್ಧರಿಸಿದ್ದೇವೆ. ಆದ್ದರಿಂದ, (ನಿವೃತ್ತಿಯ ನಂತರ) ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಯೋಚಿಸಬಹುದು” ಎಂದು ಸಿಜೆಐ ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ ಓಕಾ ಅವರ ಕೊನೆಯ ಕೆಲಸದ ದಿನದಂದು ಅವರನ್ನು ಗೌರವಿಸಲು ಸಿಜೆಐ ಗವಾಯಿ, ನ್ಯಾಯಮೂರ್ತಿ ಓಕಾ ಮತ್ತು ನ್ಯಾಯಮೂರ್ತಿ ಎ.ಜಿ ಮಸೀಹ್ ಅವರು ಶುಕ್ರವಾರ ಬೆಳಿಗ್ಗೆ ವಿಧ್ಯುಕ್ತ ಪೀಠದಲ್ಲಿ ಕುಳಿತಿದ್ದರು.
ನ್ಯಾಯಮೂರ್ತಿ ಓಕಾ ಅವರು ಕಳೆದ 40 ವರ್ಷಗಳಿಂದ ನನಗೆ ಸ್ನೇಹಿತರಾಗಿದ್ದಾರೆ. ಅವರ ಕೊಡುಗೆಗಳು ಪ್ರಮುಖ ತೀರ್ಪುಗಳನ್ನು ಬರೆಯುವುದನ್ನೂ ಮೀರಿದ್ದು ಎಂದು ಸಿಜೆಐ ಹೇಳಿದ್ದಾರೆ.
“ನ್ಯಾಯಾಲಯದ ಕೊಠಡಿಯ ಒಳಗೆ ನ್ಯಾ. ಓಕಾ ಅವರು ಕಾನೂನು ಮತ್ತು ನೈತಿಕತೆಯ ಪ್ರಾಚಾರ್ಯರಾಗಿದ್ದರು. ವಕೀಲರು ನ್ಯಾಯಾಲಯದ ಮೊದಲ ಅಧಿಕಾರಿಗಳು ಎಂದು ಯಾವಾಗಲೂ ನೆನಪಿಸಿದ್ದಾರೆ. ಅವರ ದೃಢತೆಯ ಹಿಂದೆ ಶಿಕ್ಷಕರ ಸಮರ್ಪಣಾಭಾವ ಇದೆ. ಅವರ ಕೊಠಡಿಯಲ್ಲಿ ನೈತಿಕ ವಕೀಲಿಕೆಗೆ ಆದ್ಯತೆ ದೊರೆತಿದೆ. ಇಷ್ಟು ವರ್ಷಗಳ ಕಾಲ ಅವರು ಅತ್ಯುತ್ಸಾಹದಿಂದ ಕೆಲಸ ಮಾಡಿರುವುದು ಶ್ಲಾಘನೀಯ. ನ್ಯಾಯಮೂರ್ತಿಯಾದಾಗ ಅವರು ಅಧಿಕೃತ ವಾಸದ ಮನೆಯನ್ನು ತೆಗೆದುಕೊಳ್ಳಲಿಲ್ಲ” ಎಂದಿದ್ದಾರೆ.
ಔರಂಗಾಬಾದ್‌ನಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸ್ಥಾಪನೆಯ ಹಿಂದೆ ನ್ಯಾಯಮೂರ್ತಿ ಓಕಾ ಅವರ ಪ್ರಯತ್ನಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಸಿಜೆಐ ಶ್ಲಾಘಿಸಿದ್ದಾರೆ.
ನ್ಯಾಯಮೂರ್ತಿ ಓಕಾ ಅವರ ತೀರ್ಪುಗಳ ಕುರಿತು ಮಾತನಾಡುತ್ತಾ, ಪರಿಸರದ ಬಗೆಗಿನ ಅವರ ಬದ್ಧತೆಯನ್ನು ಸಿಜೆಐ ಶ್ಲಾಘಿಸಿದ್ದಾರೆ. ಪರಿಸರಕ್ಕೆ ಸರಿಪಡಿಸಲಾಗದ ಹಾನಿಯನ್ನು ತಡೆಗಟ್ಟಲು ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ನ್ಯಾಯಮೂರ್ತಿ ಓಕಾ ಅವರ ತಾಯಿಯ ನಿಧನಕ್ಕೆ ಸಿಜೆಐ ಗವಾಯಿ ಸಂತಾಪ ಸೂಚಿಸಿದ್ದಾರೆ. ಗಮನಾರ್ಹವಾಗಿ, ಮೇ 21ರಂದು ನಿಧನರಾದ ತಮ್ಮ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಓಕಾ ಅವರು, ಒಂದು ದಿನದ ನಂತರ ಕೆಲಸಕ್ಕೆ ಮರಳಿದ್ದರು. ಕಳೆದ ಎರಡು ದಿನಗಳ ಅವರ ಕಾರ್ಯವೈಖರಿ ನ್ಯಾಯದ ಮೇಲಿನ ಅವರ ಅಚಲ ಬದ್ಧತೆಯನ್ನು ತೋರಿಸುತ್ತದೆ ಎಂದು ಸಿಜೆಐ ಕೊಂಡಾಡಿದ್ದಾರೆ.
ನ್ಯಾಯಮೂರ್ತಿ ಓಕಾ ಅವರು ಕಾನೂನಿಗೆ ನೀಡಿದ ಅವಿಶ್ರಾಂತ ಕೊಡುಗೆ ಮತ್ತು ಸಾಂವಿಧಾನಿಕ ನಿಬಂಧನೆಗಳ ಮೇಲಿನ ಅವರ ನಿಷ್ಠೆಯನ್ನು ಎಲ್ಲರೂ ಸ್ಮರಿಸಬೇಕೆಂದು ಸಿಜೆಐ ಕೋರಿಕೊಂಡಿದ್ದಾರೆ.
“ಸುಪ್ರೀಂ ಕೋರ್ಟ್‌ನಲ್ಲಿ ಓಕಾ ಅವರ ಉಪಸ್ಥಿತಿಯನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ” ಎಂದು ಸಿಜೆಐ ಹೇಳಿದ್ದಾರೆ.
ನ್ಯಾಯಮೂರ್ತಿ ಓಕಾ ಅವರಿಂದ ನ್ಯಾಯಾಲಯವನ್ನು ಹೇಗೆ ನಡೆಸುವುದು ಮತ್ತು ಬಾರ್ ಸದಸ್ಯರೊಂದಿಗೆ ಹೇಗೆ ವ್ಯವಹರಿಸುವುದು ಸೇರಿದಂತೆ ಬಹಳಷ್ಟು ಕಲಿತಿದ್ದೇನೆ ಎಂದು ನ್ಯಾಯಮೂರ್ತಿ ಎ.ಜಿ ಮಸೀಹ್ ಹೇಳಿದ್ದಾರೆ.
ಎಲ್ಲರೂ ಕೋರಿರುವಂತೆ ನಿಮಗೆ ಮತ್ತು ಕುಟುಂಬಕ್ಕೆ ಸ್ವಲ್ಪ ಸಮಯ ನೀಡಿ. ಅತ್ಯಂತ ಕಠಿಣ ಪರಿಶ್ರಮಿಯಾದ ನ್ಯಾ. ಓಕಾ ಅವರು ನಿದ್ರಿಸುವುದೇ ಕಡಿಮೆ. ಅವರಿಗೆ ಎಲ್ಲವೂ ಒಳಿತಾಗಲಿ ಎಂದಿದ್ದಾರೆ.


