ಟ್ರಾಫಿಕ್ ಪೊಲೀಸರು ಬೈಕ್ ಅಡ್ಡಗಟ್ಟಿದ್ದರಿಂದ ಸವಾರ ಬೆದರಿದ್ದು, ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಮಂಡ್ಯ ನಗರದ ನಂದ ಸರ್ಕಲ್ ಬಳಿ ಭಾನುವಾರ ನಡೆದಿದೆ.
ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯದಿಂದ 3 ವರ್ಷದ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ ಎಂದು ಪೋಷಕರು ಹಾಗೂ ಸ್ಥಳೀಯರು ಆರೋಪ ಮಾಡಿದ್ದಾರೆ. ಮಗು ಸತ್ತಿರುವ ಘಟನೆಯು ಭಾರೀ ಜನಾಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ.
ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೊರವನಹಳ್ಳಿಗೆ ಗ್ರಾಮದ ಅಶೋಕ್ ಮತ್ತು ವಾಣಿ ಎಂಬುವವರು ಮೂರು ವರ್ಷದ ಹೃತೀಕ್ಷಗೆ ನಾಯಿ ಕಚ್ಚಿದ್ದ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆ ಕೊಡಿಸುವುದಕ್ಕಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಬೈಕ್‌ನಲ್ಲಿ ಕರೆದುಕೊಂಡು ಬರುತ್ತಿದ್ದರು. ಇದೇ ಸಂದರ್ಭದಲ್ಲಿ ಮಂಡ್ಯ ನಗರದ ನಂದ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆ ನಡೆಸುತ್ತಿದ್ದರು. ಹಠಾತ್ ಆಗಿ ಪೊಲೀಸರು ಬೈಕ್ ಅಡ್ಡಗಟ್ಟಿದ ಪರಿಣಾಮ, ಅಶೋಕ್ ಚಾಲನೆ ಮಾಡುತ್ತಿದ್ದ ಬೈಕ್ ನಿಯಂತ್ರಣ ತಪ್ಪಿದೆ. ಅಪಘಾತದ ಬಳಿಕ ಬಾಲಕಿ ಹೃತೀಕ್ಷ ತಲೆಯ ಮೇಲೆ ಹಿಂದಿನಿಂದ ಬಂದ ಟೆಂಪೋ ಹರಿದಿದೆ. ಇದರಿಂದ ಆಕೆಯ ತಲೆಗೆ ಭಾರೀ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಾಳೆ.
ಏನಾಗುತ್ತಿದೆ ಎಂದು ಅರಿವಾಗುವ ಮೊದಲೇ ಮಗಳ ಮರಣದಿಂದ ಆಘಾತಕ್ಕೊಳಗಾದ ಪೋಷಕರು, ನಡುರಸ್ತೆಯಲ್ಲೇ ಮಗುವನ್ನು ಮಡಿಲಲ್ಲಿ ಇಟ್ಟುಕೊಂಡು ಗೋಳಾಡಿದ್ದಾರೆ. ಅವರ ದುಃಖದ ದೃಶ್ಯ ಅಲ್ಲಿ ನೆರೆದಿದ್ದವರ ಕಣ್ಣು ನೀರಾಗುವಂತೆ ಮಾಡಿತ್ತು.

ಮಗಳ ಜೀವ ಹೋಗಿದ್ದಕ್ಕೆ ಪೊಲೀಸರೇ ಕಾರಣ: ಮೃತ ಬಾಲಕಿ ತಂದೆ ಆಕ್ರೋಶ
ಪೊಲೀಸರು ಗಾಡಿ ಅಡ್ಡ ಹಾಕಿದಾಗ, ನಾವು ಅರ್ಜೆಂಟ್ ಅಲ್ಲಿ ಆಸ್ಪತ್ರೆಗೆ ಹೊರಟೆವು. ಆದರೆ, ಅವರು ನನ್ನ ಬೈಕ್ ಚಾಲನೆ ಮಾಡಲು ಅವಕಾಶ ಕೊಡಲಿಲ್ಲ. ಅವರು ಇದ್ದಕ್ಕಿಂದ್ದಂತಯೇ ಗಾಡಿ ಅಡ್ಡ ಹಾಕಿದ ಪರಿಣಾಮ ನಮ್ಮ ಬೈಕ್ ಸ್ಕಿಡ್ ಆಗಿದೆ. ಬೈಕ್‌ನಿಂದ ಮಗು ಬೀಳುತ್ತಿದ್ದಂತೆಯೇ ಬೇರೆ ವಾಹನ ಬಂದು ಪಾಪು ಮೇಲೆ ಹತ್ತಿದೆ. ನನ್ನ ಮಗಳ ಜೀವ ತಿನ್ನೋಕೆ ಇವರೇ ಕಾರಣ ಸ್ವಾಮಿ. ಅವರಿಗೆ ಬ್ಯಾಂಡೇಜ್ ಹಾಕಿದ್ದೂ ಕಾಣಿಸಿಲ್ವಾ? ಇವರ ದುಡ್ಡನ್ನು ತಿಂದು ಹೋಗ್ತೀವಾ? ನನ್ನ ಮಗಳಿಗೆ ಪರಿಹಾರ ಕೊಡ್ತಾರಂತೆ. ನಾನೇ ಹತ್ತು ಲಕ್ಷ ಕೊಡ್ತೀನಿ; ನೀವು ನನ್ನ ಮಗಳ ತಂದು ಕೊಡ್ತೀರಾ? ನೀವು ನನ್ನ ಮಗಳನ್ನು ತಂದು ಕೊಡ್ತೀರಾ ಎಂದು ಕಣ್ಣೀರಿಟ್ಟಿದ್ದಾರೆ.


