ಸ್ವಾತಂತ್ರ್ಯಾ ನಂತರದ ರಾಜಕೀಯ ಪ್ರಮುಖರ ಕಟು ಟೀಕೆಗಳ ಕಾರಣಕ್ಕೆ ಜೈಲು ಮತ್ತು ಎರಡು ದಶಕಗಳ ಗಡಿಪಾರು ಶಿಕ್ಷೆಗೆ ಗುರಿಯಾಗಿದ್ದ ಕೀನ್ಯಾದ ಪ್ರಸಿದ್ಧ ಕಾದಂಬರಿಕಾರ ಹಾಗೂ ನಾಟಕಕಾರ ಗೂಗಿ ವಾ ಥಿಯೊಂಗೊ ಅವರು ತನ್ನ 87ನೇ ವಯಸ್ಸಿನಲ್ಲಿ ಅಮೆರಿಕದ ಅಟ್ಲಾಂಟ್ಲಾದಲ್ಲಿ ನಿಧನರಾಗಿದ್ದಾರೆ.
ಈ ವಿಚಾರವನ್ನು ಕೀನ್ಯಾದ ಅಧ್ಯಕ್ಷ ವಿಲಿಯಂ ರುಟೊ ಮತ್ತು ಗೂಗಿ ಅವರ ಮಗಳು ವಾಂಜಿಕು ವಾ ಥಿಯೊಂಗೊ ಖಚಿತಪಡಿಸಿದ್ದಾರೆ.
ಬ್ರಿಟನ್‌ನಿಂದ ಸ್ವಾತಂತ್ರ್ಯಕ್ಕಾಗಿ ನಡೆದ ಸಶಸ್ತ್ರ ‘ಮೌ ಮೌ’ ಹೋರಾಟದಲ್ಲಿ ಪಾಲ್ಗೊಂಡಿದ್ದ, ಅದರಲ್ಲೇ ರೂಪುಗೊಂಡ ಥಿಯೊಂಗೊ ಅವರು, ತಮ್ಮ ಬರಹಗಳಲ್ಲಿ ವಸಾಹತುಶಾಹಿ ಆಳ್ವಿಕೆ ಮತ್ತು ಅದರ ಅನೇಕ ಸವಲತ್ತುಗಳನ್ನು ಪಡೆದ ಕೀನ್ಯಾದ ನಾಯಕರನ್ನು ಕಟುವಾಗಿ ಟೀಕಿಸುತ್ತಿದ್ದರು.
ಡಿಸೆಂಬರ್ 1977ರಲ್ಲಿ, ರೈತರು ಮತ್ತು ಕಾರ್ಮಿಕರು ಥಿಯೊಂಗೊ ಅವರ ‘ಗಹಿಕ ದೀಂಡಾ’ (ನಾನು ಬಯಸಿದಾಗ ಮದುವೆಯಾಗುತ್ತೇನೆ) ನಾಟಕವನ್ನು ಪ್ರದರ್ಶಿಸಿದ ನಂತರ, ಯಾವುದೇ ಆರೋಪಗಳಿಲ್ಲದೆ ಥಿಯೊಂಗೊ ಅವರನ್ನು ಬಂಧಿಸಿ ಬಿಗಿ ಭದ್ರತೆಯ ಜೈಲಿನಲ್ಲಿ ಒಂದು ವರ್ಷ ಇಡಲಾಗಿತ್ತು.
ಕೀನ್ಯಾ ಸಮಾಜದಲ್ಲಿನ ಅಸಮಾನತೆಗಳ ಬಗೆಗಿನ ಟೀಕೆಯಿಂದ ಕೋಪಗೊಂಡ ಅಧಿಕಾರಿಗಳು, ನಾಟಕ ಆಯೋಜಿಸಿದ್ದ ರಂಗಮಂದಿರವನ್ನು ನೆಲಸಮ ಮಾಡಲು ಮೂರು ಟ್ರಕ್‌ಗಳಲ್ಲಿ ಪೊಲೀಸರನ್ನು ಕಳುಹಿಸಿದ್ದರು ಎಂದು ಥಿಯೊಂಗೊ ನಂತರ ಹೇಳಿದ್ದರು.
ಮಾಜಿ ಅಧ್ಯಕ್ಷ ಡೇನಿಯಲ್ ಅರಪ್ ಮೋಯಿ ಅವರ ಭದ್ರತಾ ಪಡೆಗಳು ತನ್ನನ್ನು ಬಂಧಿಸಿ ಕೊಲ್ಲಲು ಯೋಜನೆಗಳನ್ನು ರೂಪಿಸಿವೆ ಎಂದು ತಿಳಿದ ನಂತರ, 1982ರಲ್ಲಿ ಥಿಯೊಂಗೊ ದೇಶ ತೊರೆದು ಕ್ಯಾಲಿಫೋರ್ನಿಯಾ ಸೇರಿಕೊಂಡಿದ್ದರು. ಅಲ್ಲಿ ಇರ್ವಿನ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಮತ್ತು ತುಲನಾತ್ಮಕ ಸಾಹಿತ್ಯದ ಪ್ರಾಧ್ಯಾಪಕರಾಗಿದ್ದರು.
ವ್ಯಾಪಕ ಬಂಧನಗಳು, ಹತ್ಯೆಗಳು ಮತ್ತು ರಾಜಕೀಯ ವಿರೋಧಿಗಳಿಗೆ ಚಿತ್ರಹಿಂಸೆ ನೀಡುತ್ತಿದ್ದ ಮಾಜಿ ಅಧ್ಯಕ್ಷ ಮೋಯಿ ಅವರ ಎರಡು ದಶಕದ ಆಡಳಿತ ಕೊನೆಗೊಂಡ ಬಳಿಕ, 2004ರಲ್ಲಿ ಥಿಯೊಂಗೊ ದೇಶಕ್ಕೆ ವಾಪಾಸಾಗಿದ್ದರು.
ಇತ್ತೀಚಿನ ವರ್ಷಗಳಲ್ಲಿ ಥಿಯೊಂಗೊ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವರದಿಗಳು ಬಂದಿತ್ತು. ಅವರು ಗುರುವಾರ (ಮೇ.29) ಅಮೆರಿಕದಲ್ಲಿ ನಿಧನರಾಗಿದ್ದಾರೆ ಎಂದು ಅಧ್ಯಕ್ಷ ವಿಲಿಯಂ ರುಟೊ ಮಾಹಿತಿ ನೀಡಿದ್ದಾರೆ.
“ಕೀನ್ಯಾದ ಅಕ್ಷರಗಳ ದಂತಕಥೆ ಕೊನೆಯ ಬಾರಿಗೆ ತನ್ನ ಪೆನ್ನು ಕೆಳಗಿಟ್ಟಿದ್ದಾರೆ” ಎಂದು ರುಟೊ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
“ಯಾವಾಗಲೂ ಧೈರ್ಯಶಾಲಿಯಾಗಿದ್ದ ಅವರು, ನಮ್ಮ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಹಾಗೂ ರಾಜಕೀಯ ಮತ್ತು ಆರ್ಥಿಕ ಶಕ್ತಿಯ ಬಳಕೆ ಮತ್ತು ದುರುಪಯೋಗದ ಬಗ್ಗೆ ನಾವು ಹೇಗೆ ಯೋಚಿಸುತ್ತೇವೆ ಎಂಬುದರ ಮೇಲೆ ಅಳಿಸಲಾಗದ ಪ್ರಭಾವ ಬೀರಿದ್ದರು” ಎಂದಿದ್ದಾರೆ.
I have learnt with sadness about the death of Kenya's beloved teacher, writer, playwright, and public intellectual, Prof Ngugi wa Thiong'o. The towering giant of Kenyan letters has put down his pen for the final time.
Always courageous, he made an indelible impact on how we… pic.twitter.com/bHPJcWfVCF
— William Samoei Ruto, PhD (@WilliamsRuto) May 29, 2025
2004ರಲ್ಲಿ ಕೀನ್ಯಾಕ್ಕೆ ಹಿಂದಿರುಗಿದ ನಂತರ ಥಿಯೊಂಗೊ ಅವರು ಮಾಜಿ ಅಧ್ಯಕ್ಷ ಮೋಯಿ ವಿರುದ್ಧ ಯಾವುದೇ ದ್ವೇಷ ಹೊಂದಿಲ್ಲ ಎಂದು ಹೇಳಿದ್ದರೂ, ಮೂರು ವರ್ಷಗಳ ನಂತರ ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ ಕೀನ್ಯಾದವರು ಆ ಯುಗದ ದುರುಪಯೋಗಗಳನ್ನು ಮರೆಯಬಾರದು ಎಂದು ಹೇಳಿದ್ದರು.
“22 ವರ್ಷಗಳ ಸರ್ವಾಧಿಕಾರದ ಪರಿಣಾಮಗಳು ನಮ್ಮೊಂದಿಗೆ ದೀರ್ಘಕಾಲ ಇರುತ್ತವೆ. ನಾವು ಆ ಅವಧಿಗೆ ಮರಳುವುದನ್ನು ಮತ್ತೊಮ್ಮೆ ನೋಡಲು ನಾನು ಇಷ್ಟಪಡುವುದಿಲ್ಲ” ಎಂದಿದ್ದರು.
ಥಿಯೊಂಗೊ ಅವರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ‘ಮೌ ಮೌ’ ಹೋರಾಟವನ್ನು ವಿವರಿಸುವ ಅವರ ಚೊಚ್ಚಲ ಕಾದಂಬರಿ “ವೀಪ್ ನಾಟ್ ಚೈಲ್ಡ್” ಮತ್ತು ಜೈಲಿನಲ್ಲಿದ್ದಾಗ ಟಾಯ್ಲೆಟ್ ಪೇಪರ್‌ನಲ್ಲಿ ಬರೆದ “ಡೆವಿಲ್ ಆನ್ ದಿ ಕ್ರಾಸ್” ಸೇರಿವೆ.
1980ರ ದಶಕದಲ್ಲಿ ಕೀನ್ಯಾದ ಹಿಂದಿನ ವಸಾಹತುಶಾಹಿ ಯಜಮಾನ ಆಮದು ಮಾಡಿದ ಭಾಷೆಗೆ ವಿದಾಯ ಹೇಳುತ್ತಿರುವುದಾಗಿ ಹೇಳಿದ್ದ ಥಿಯೊಂಗೊ ಇಂಗ್ಲಿಷ್ ತ್ಯಜಿಸಿ ತಮ್ಮ ಮಾತೃಭಾಷೆ ಗಿಕುಯುನಲ್ಲಿ ಬರೆಯಲು ಪ್ರಾರಂಭಿಸಿದರು.
1938ರ ಜನವರಿ 5ರಂದು ಕೀನ್ಯಾದ ಲಿಮುರು ಎಂಬಲ್ಲಿ ಜನಿಸಿದ ಥಿಯೊಂಗೊ ಅವರು, ಜಾಗತಿಕ ಸಾಹಿತ್ಯದ ಸಂದರ್ಭದಲ್ಲಿ ತಮ್ಮ ಅಸಾಧಾರಣ ವ್ಯಕ್ತಿತ್ವ ಮತ್ತು ಪ್ರತಿಭೆಗೆ ಹೆಸರಾದವರು.
ಚಿನುವಾ ಅಚಿಬೆ ಅವರ ಸಾಹಿತ್ಯದಂತೆ ಇವರ ಕೃತಿಗಳನ್ನೂ ವಿವಿಧ ಲೇಖಕರು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ವೀಪ್ ನಾಟ್-ಚೈಲ್ಡ್, ‘ದಿ ರಿವರ್ ಬಿಟ್ವೀನ್’, ‘ಎ ಗ್ರೈನ್ ಆಫ್ ವೀಟ್ ಆನ್ ದಿ ಕ್ರಾಸ್’, ‘ವಿಜರ್ಡ್ ಆಫ್ ದಿ ಕ್ರೊ’ ಥಿಯೊಂಗೊ ಅವರ ಪ್ರಮುಖ ಕಾದಂಬರಿಗಳು.
ಕಾದಂಬರಿಗಳ ಜೊತೆ ಹಲವು ನಾಟಕಗಳನ್ನೂ ಥಿಯೊಂಗೊ ರಚಿಸಿದ್ದಾರೆ. ಸಾಹಿತ್ಯ, ಸಂಸ್ಕೃತಿ, ರಾಜಕೀಯ ಸ್ವರೂಪದ ಬಗ್ಗೆ ಹಲವಾರು ಪ್ರಬಂಧಗಳನ್ನೂ ಬರೆದಿದ್ದಾರೆ. ಇವರ ಬಹು ಚರ್ಚಿತ ಲೇಖನಗಳು ಕನ್ನಡಕ್ಕೆ ಅನುವಾದಗೊಂಡಿವೆ.
ಥಿಯೊಂಗೊ ಅವರನ್ನು ಪೂರ್ವ ಆಫ್ರಿಕಾದ ಪ್ರಮುಖ ಕಾದಂಬರಿಕಾರ ಎಂದು ಪರಿಗಣಿಸಲಾಗಿದೆ. ಅವರ ಜನಪ್ರಿಯ ‘ವೀಪ್ ನಾಟ್-ಚೈಲ್ಡ್’ (1964) ಪೂರ್ವ ಆಫ್ರಿಕನ್ ಒಬ್ಬರಿಂದ ಇಂಗ್ಲಿಷ್‌ನಲ್ಲಿ ಪ್ರಕಟವಾದ ಮೊದಲ ಪ್ರಮುಖ ಕಾದಂಬರಿಯಾಗಿದೆ.
ಥಿಯೊಂಗೊ ಅವರು 1963ರಲ್ಲಿ ಉಗಾಂಡಾದ ಕಂಪಾಲಾದ ಮಕೆರೆರೆ ವಿಶ್ವವಿದ್ಯಾಲಯದಿಂದ ಮತ್ತು 1964ರಲ್ಲಿ ಇಂಗ್ಲೆಂಡ್‌ನ ಯಾರ್ಕ್‌ಷೈರ್‌ನ ಲೀಡ್ಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಲೀಡ್ಸ್‌ನಲ್ಲಿ ಪದವಿ ಪಡೆದ ಬಳಿಕ ಥಿಯೊಂಗೊ ಅವರು ಕೀನ್ಯಾದ ನೈರೋಬಿ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಮತ್ತು ಅಮೆರಿಕದ ಇಲಿನಾಯ್ಸ್‌ನ ಇವಾನ್‌ಸ್ಟನ್‌ನ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ನ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 1972ರಿಂದ 1977ರವರೆಗೆ ನೈರೋಬೊ ವಿಶ್ವವಿದ್ಯಾಲಯದಲ್ಲಿ ಥಿಯೊಂಗೊ ಹಿರಿಯ ಉಪನ್ಯಾಸಕರಾಗಿ ಮತ್ತು ಸಾಹಿತ್ಯ ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಾಕ್ಷಿದಾರರಿಗೆ ಬೆದರಿಕೆ: ನ್ಯಾಯಾಧೀಶರಿಗೆ ದೂರು


