ಮಂಗಳೂರು ಕಾಂಗ್ರೆಸ್ ಶಾಸಕ, ಸ್ಪೀಕರ್ ಯು.ಟಿ. ಖಾದರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಹೊರಗಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಗುರುವಾರ ಸಭೆ ನಡೆಸಿದ್ದು ಇದೀಗ ಭಾರಿ ಕುತೂಹಲ ಮೂಡಿಸಿದೆ. ಮಂಗಳೂರು ಹದಗೆಟ್ಟ ಪರಿಸ್ಥಿತಿ ಹಿನ್ನಲೆ
ದಕ್ಷಿಣ ಕನ್ನಡ ಜಿಲ್ಲೆಯ ಹದಗೆಟ್ಟ ಪರಿಸ್ಥಿತಿಯ ಹಿನ್ನಲೆ ಈ ಸಭೆ ನಡೆದಿದೆ ಎನ್ನಲಾಗಿದ್ದು, ಸಭೆಯಲ್ಲಿ ಕರಾವಳಿಯ ಪ್ರಸ್ತುತ ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿ ಗಂಭೀರ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಸಭೆಯಲ್ಲಿ ಸಚಿವ ಝಮೀರ್ ಅಹ್ಮದ್ ಕೂಡಾ ಭಾಗವಹಿಸಿದ್ದರು.
ಮಂಗಳೂರಿನ ಪರಿಸ್ಥಿಯ ಬಗ್ಗೆ ಸಭೆ ನಡೆಸುವಾಗ ಸ್ಥಳೀಯ ಪ್ರಭಾವಿ ಶಾಸಕ ಯು.ಟಿ. ಖಾದರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಹೊರಗಿಟ್ಟು ನಡೆಸಿದ್ದು ತೀವ್ರ ಕುತೂಹಲ ಮೂಡಿದ್ದು, ಕರಾವಳಿ ನಾಯಕತ್ವದ ಬದಲಾವಣೆ ಆಗಲಿದೆಯೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿವೆ.
ಅದಾಗ್ಯೂ, ಸ್ಪೀಕರ್ ಯು.ಟಿ. ಖಾದರ್ ಅವರು ಹಜ್ ಯಾತ್ರೆಯಲ್ಲಿ ಇರುವುದರಿಂದ ಅವರನ್ನು ಸಭೆಯಲ್ಲಿ ಒಳಗೊಳಿಸಲು ಆಗಿಲ್ಲ ಎಂದು ಹೇಳಲಾಗುತ್ತಿದೆಯಾದರೂ, ಉಸ್ತುವಾರಿ ಸಚಿವರನ್ನು ಸಭೆಯಿಂದ ಹೊರಗಿಟ್ಟಿದ್ದು ಯಾಕೆ ಎಂಬ ಪ್ರಶ್ನೆಗಳು ಕೂಡಾ ಮುನ್ನಲೆಗೆ ಬಂದಿವೆ. ಅಲ್ಲದೆ, ಇಬ್ಬರಿಗೂ ಮಾಹಿತಿ ನೀಡದೆ ಈ ಸಭೆಯನ್ನು ನಡೆಸಲಾಗಿದೆ ಎಂದು ಕೂಡಾ ಹೇಳಲಾಗಿದೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು,“ಸಾಮಾನ್ಯ ವಿಷಯಗಳ ಜೊತೆಗೆ ಮಂಗಳೂರಿನಲ್ಲಿ ಸೌಹಾರ್ದತೆ ನೆಲೆಸಬೇಕು, ಯಾವುದೇ ಕಾರಣಕ್ಕೂ ದ್ವೇಷ ಇರಬಾರದು ಎಂಬ ಬಗ್ಗೆಯೂ ಬಿ.ಕೆ ಹರಿಪ್ರಸಾದ್ ಅವರ ಜೊತೆ ಚರ್ಚಿಸಿದೆ” ಎಂದು ಹೇಳಿದ್ದಾರೆ. ಕೋಮು ಗಲಭೆಗಳನ್ನು ಉಂಟುಮಾಡುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡ ಕಾನೂನಿನ ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರೂ ಕಾನೂನಿಗಿಂತ ದೊಡ್ಡವರಲ್ಲ ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ರಾಜಕೀಯ ಉದ್ದೇಶದ ಭೇಟಿಯಲ್ಲ: ಬಿ.ಕೆ ಹರಿಪ್ರಸಾದ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನನ್ನ ನಿವಾಸಕ್ಕೆ ಸೌಹಾರ್ದಿತ ಭೇಟಿ ನೀಡಿದರು. ಮಂಗಳೂರು ಮತ್ತು ಕರಾವಳಿ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಧ್ರುವೀಕರಣದ ಕುರಿತು ಗಂಭೀರ ಚರ್ಚೆ ನಡೆಯಿತು ಎಂದು ಬಿ.ಕೆ. ಹರಿಪ್ರಸಾದ್ ಅವರು ಹೇಳಿದ್ದಾರೆ.
“ಶಾಂತಿ, ಬಾಂಧವ್ಯ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಕಾಪಾಡುವ ಅಗತ್ಯದ ಬಗ್ಗೆ ಒತ್ತಡ ನೀಡಲಾಯಿತು. ಈ ಭೇಟಿಗೆ ರಾಜಕೀಯ ಉದ್ದೇಶ ಇದೆ ಎಂಬ ಊಹಾಪೋಹಗಳು ಸಂಪೂರ್ಣ ನಿರಾಧಾರ” ಎಂದು ಬಿ.ಕೆ ಹರಿಪ್ರಸಾದ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಡಿಸಿ, ಸಿಇಒಗಳೊಂದಿಗೆ ಎರಡು ದಿನ ಸಭೆ: ಸಿಎಂ
ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ನಡೆಯಲಿರುವ ಡಿಸಿ ಹಾಗೂ ಸಿಇಒಗಳ ಸಭೆಯಲ್ಲಿ ಮುಂಗಾರು ಮಳೆ ಪರಿಸ್ಥಿತಿಗಳ ಬಗ್ಗೆ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಚರ್ಚಿಸಲಾಗುವುದು ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಂಗಳೂರು ಹದಗೆಟ್ಟ ಪರಿಸ್ಥಿತಿ ಹಿನ್ನಲೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಿ.ಕೆ ಹರಿಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ: ಕರಾವಳಿಯ ಪರಿಸ್ಥಿತಿಗಳ ಬಗ್ಗೆ ಚರ್ಚೆ
ಬಿ.ಕೆ ಹರಿಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ: ಕರಾವಳಿಯ ಪರಿಸ್ಥಿತಿಗಳ ಬಗ್ಗೆ ಚರ್ಚೆ

